Site icon Vistara News

ಲಾಡ್ಜ್‌ನಲ್ಲಿ ಪಾರ್ಟಿ ಮಾಡ್ತಾ ಪ್ರಶಾಂತ್‌ ಹತ್ಯೆಗೆ ಸ್ಕೆಚ್‌! ಪೊಲೀಸರು ಲಾಡ್ಜ್‌ ಪರಿಶೀಲಿಸಿದಾಗ ಗೊತ್ತಾಗಿದ್ದೇನು?

ಪ್ರಶಾಂತ ಹತ್ಯೆ ಪ್ರಕರಣ

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಹಾಗೂ ಪೊಲೀಸರ ತನಿಖೆ ಚುರುಕುಗೊಂಡಿದೆ. ಹಂತಕರು ತಂಗಿದ್ದ ಲಾಡ್ಜ್ ಸೀಜ್ ಮಾಡಲಾಗಿದೆ. ನಗರದ ಡಬಲ್ ಟ್ಯಾಂಕ್ ರಸ್ತೆಯ ಹಳೇ ಮಟನ್  ಮಾರ್ಕೆಟ್ ಬಳಿ ಇರುವ ಲಕ್ಷ್ಮಿ ರೆಸಿಡೆನ್ಸಿಯನ್ನು ಸೋಮವಾರ  ರಾತ್ರಿ ಡಿವೈಎಸ್ಪಿ ಉದಯಭಾಸ್ಕರ್ ನೇತೃತ್ವದಲ್ಲಿ ದಾಳಿ ಮಾಡಿ ವಶಕ್ಕೆ ಪಡೆಯಲಾಯಿತು.

ಕೊಲೆಗೂ ಮುನ್ನ ಲಾಡ್ಜ್ ನಲ್ಲಿ ಸೇರಿ ಪ್ಲಾನ್ ಮಾಡಿದ್ದ ಹಂತಕರು, ಅಲ್ಲಿಯೇ ಪಾರ್ಟಿ ಕೂಡ ಮಾಡಿದ್ದರು ಎಂಬ  ವಿಚಾರವನ್ನು ಬಂಧಿತರಾದ ವಿಶ್ವ ಹಾಗೂ ಸಂತೋಷ್ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ | ಪ್ರಶಾಂತ್‌ ಹತ್ಯೆ: ಸಚಿವರು ಹೇಳಿದ್ದೇ ಒಂದು, ಪೊಲೀಸರು ಹೇಳಿದ್ದು ಮತ್ತೊಂದು

ಲಾಡ್ಜ್ ನ ಸಿಸಿಟಿವಿ ಪರಿಶೀಲನೆ ನಡೆಸಿ, ಲಾಡ್ಜ್ ನಲ್ಲಿದ್ದ ಎಲ್ಲರನ್ನೂ ಖಾಲಿ ಮಾಡಿಸಿ ಬೀಗ ಜಡಿಯಲಾಗಿದೆ. ಲೈಸೆನ್ಸ್ ಪಡೆಯದೇ ಲಾಡ್ಜ್ ನಡೆಸುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಲಾಡ್ಜ್‌ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಸಿಐಡಿ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ತನಿಖೆಯನ್ನು ಮುಂದುವರಿಸಿದ್ದಾರೆ. ಹತ್ಯೆ ಕೇಸ್‌ನ ಪ್ರಮುಖ ಆರೋಪಿ ಹಾಗೂ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿ ಸಿಕ್ಕ ಬಳಿಕ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ.

ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್‌ರನ್ನು ಕಳೆದ ವಾರ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ | ಪ್ರಶಾಂತ್‌ ಹತ್ಯೆ ಪ್ರಕರಣ: ರೇವಣ್ಣ ಹಾಗೂ ಪ್ರೀತಂ ನಡುವೆ ವಾರ್‌

Exit mobile version