Site icon Vistara News

Prashant Sambargi : ಅವರು ನನ್ನ ತಂದೆ ಸಮಾನ; ದೇವೇಗೌಡರ ಕ್ಷಮೆ ಯಾಚಿಸಿದ ಪ್ರಶಾಂತ್‌ ಸಂಬರ್ಗಿ

Prashant Sambargi devegowda

#image_title

ಬೆಂಗಳೂರು: ರಾಹುಲ್‌ ಗಾಂಧಿಯನ್ನು ಟೀಕಿಸಲು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಹೆಸರು ಬಳಸಿಕೊಂಡು ಎಡವಟ್ಟು ಮಾಡಿಕೊಂಡು ಸಾರ್ವಜನಿಕರು ಮತ್ತು ಜೆಡಿಎಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ (Prashant Sambargi) ಇದೀಗ ಕ್ಷಮೆ ಕೇಳಿದ್ದಾರೆ.

ʻಎಲ್ಲ ಕಳ್ಳರ ಹೆಸರೂ ಮೋದಿ ಎಂದೇ ಯಾಕಿರುತ್ತದೆ?ʼ ಎಂಬ ಪ್ರಶ್ನೆ ಕೇಳುವ ಮೂಲಕ ವಿವಾದಕ್ಕೊಳಗಾಗಿ ಈಗ ಜೈಲು ಶಿಕ್ಷೆಗೂ ಒಳಗಾಗಿರುವ, ಜತೆ ಸಂಸತ್‌ ಸದಸ್ಯತ್ವವನ್ನೂ ಕಳೆದುಕೊಂಡಿರುವ ರಾಹುಲ್‌ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಸಂಬರ್ಗಿ ದೇವೇಗೌಡರ ಹೆಸರನ್ನು ಎಳೆದುತಂದಿದ್ದರು.

ʻʻದೇವೇ ಗೌಡ ಕಳ್ಳ ಅನ್ನೋದಕ್ಕೂ,ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದಕ್ಕೆ ದೇವೇ ಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೇ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿʼʼ ಎಂದು ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದು ಜೆಡಿಎಸ್‌ ಕಾರ್ಯಕರ್ತರು ಮಾತ್ರವಲ್ಲ ಇತರರನ್ನೂ ಕೆರಳಿಸಿತ್ತು.

ಜೆಡಿಎಸ್‌ನಿಂದ ದೂರು ದಾಖಲು

ಜೆಡಿಎಸ್‌ ಕಾನೂನು ವಿಭಾಗದಿಂದ ದೂರು

ದೇವೇಗೌಡರ ಅವಹೇಳನವನ್ನು ಖಂಡಿಸಿರುವ ಜೆಡಿಎಸ್‌ ಪ್ರಶಾಂತ್ ಸಂಬರ್ಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದೆ. ಜೆಡಿಎಸ್ ಲೀಗಲ್ ಸೆಲ್‌ನಿಂದ ಡಿಸಿಪಿ ಶ್ರೀನಿವಾಸ‌ಗೌಡಗೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣ ಮಾತ್ರವಲ್ಲ, ಸಂಬರ್ಗಿ ಈ ಹಿಂದೆಯೂ ಜೆಡಿಎಸ್‌ ನಾಯಕರನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಕ್ಷಮೆಯಾಚನೆ

ಒಂದು ಕಡೆ ಪೊಲೀಸರಿಗೆ ದೂರು ನೀಡಿದ್ದು, ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದ ಆಕ್ರೋಶದ ಮಾತುಗಳಿಂದ ಕಂಗಾಲಾದ ಪ್ರಶಾಂತ್‌ ಸಂಬರ್ಗಿ ಬಳಿಕ ಕ್ಷಮೆ ಕೋರಿದ್ದಾರೆ.

ದೇವೇಗೌಡರು ನನಗೆ ತಂದೆ ಸಮಾನ

ʻʻನನ್ನ ತಂದೆ ಸಮಾನರಾದ ಶ್ರೀ ಎಚ್‌.ಡಿ. ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾಹರಣೆಯಾಗಿ ದೇವೇಗೌಡ ಎಂಬ ಹೆಸರನ್ನು ಬಳಸಿದೆನೇ ಹೊರತು ಯಾವುದೇ ದುರುದ್ದೇಶ ಇರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚ್ಯುತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ನನ್ನ ಕಳಕಳಿಯ ಕ್ಷಮೆ ಇರಲಿʼʼ ಎಂದು ಕನ್ನಡ ಮತ್ತು ಇಂಗ್ಲಿಷ್‌ ಎರಡರಲ್ಲೂ ಕ್ಷಮೆ ಯಾಚನೆ ಮಾಡಿದ್ದಾರೆ.

ಬಿಗ್‌ ಬಾಸ್‌ನಲ್ಲಿ ಜತೆಯಾಗಿದ್ದ ಪ್ರಶಾಂತ್‌ ಸಂಬರ್ಗಿ ಮತ್ತು ಚಂದ್ರಚೂಡ್‌

ಚಪ್ಪಲಿಯೇಟಿನ ಪ್ರತಿಕ್ರಿಯೆ ನೀಡಿದ್ದ ಚಂದ್ರಚೂಡ್‌

ಸಂಬರ್ಗಿ ಪೋಸ್ಟ್‌ಗೆ ಪತ್ರಕರ್ತ, ಕಲಾವಿದ ಚಂದ್ರಚೂಡ್‌ ಅವರು ತೀವ್ರ ತಿರುಗೇಟು ನೀಡಿದ್ದು ಭಾರಿ ಸುದ್ದಿಯಾಗಿದೆ. ಸಂಬರ್ಗಿಯ ಪ್ರತಿಪದಕ್ಕೂ ಪ್ರತಿಯೇಟು ನೀಡಿದ ಚಂದ್ರಚೂಡ್‌ ನಾಯಿಗೆ ಹೊಡೆದಂತೆ, ಚಪ್ಪಲಿಯೇಟು, ಎದೆಗೆ ಒದೆಯಬೇಕು ಎಂಬಿತ್ಯಾದಿ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದರು. ಚಂದ್ರಚೂಡ್‌ ಮತ್ತು ಸಂಬರ್ಗಿ ಬಿಗ್‌ ಬಾಸ್‌ ಸೀಸನ್‌ 8ರಲ್ಲಿ ಜತೆಯಾಗಿದ್ದರು.

ಚಂದ್ರಚೂಡ್‌ ಪೋಸ್ಟ್‌ನಲ್ಲಿ ಏನಿತ್ತು?

ಇನ್ನೂ ಸಿಂಪ್ಲೆಸ್ಟ್ ಆಗಿ ಹೇಳಬೇಕೆಂದರೆ ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗ ಎಂದು ಹೇಳಿಕೊಂಡು ಚಪ್ಪಲಿಯಲ್ಲಿ ಏಟು ತಿಂದ ಅಂದರೆ ಪ್ರಶಾಂತ ಸಂಬರ್ಗಿಗೆ ಮಾತ್ರ ನಾಯಿಗೆ ಹೊಡೆದಂತೆ ಹೊಡೆದರು ಎಂದರ್ಥವೇ ಹೊರತು ಸಂಬರ್ಗಿಯೆಂಬ ಊರಿನವರಿಗೂ ಇದಕ್ಕೂ ವ್ಯತ್ಯಾಸ ಇದೆ.

ಮೊದಲನೆಯದರಲ್ಲಿ ಪ್ರಶಾಂತ ಸಂಬರ್ಗಿ ಯನ್ನು ನಾಯಿಗಳಿಗೆ ಹೋಲಿಸಿದ್ದಕ್ಕೆ ನಾಯಿಗಳೆಲ್ಲ ಕೇಸು ಹಾಕಬೇಕೂ ಅವಮಾನವಾಗಿದ್ದಕ್ಕೆ .ಎರಡನೆಯದರಲ್ಲಿ ಸಂಬರ್ಗಿಯಲ್ಲಿರುವ ಎಲ್ಲ ವರ್ಗದ ಜನ ಇವನನ್ನ ಕರೆದು ಕಿತ್ತೂರು ರಾಣಿ ಚನ್ನಮ್ಮನವರ ಶೈಲಿಯಲ್ಲಿಯೇ ಎದೆಗೊದೆಯಬೇಕೂ…

ಸುಮ್ಮನೆ ಉದಾಹರಣೆ ಅಷ್ಟೇ ಅಲ್ಲ ಸೀರಿಯಸ್ ಆಗಿ ತಗೆದುಕೊಳ್ಳುವ ಕಾಲವಂತೂ ಬಂದಿದೆ. ತಗೊಂಡಾಗಿದೆ ಸಂಬಂಧಪಟ್ಟವರು. ʻಬೆವರುಹಿಡುಕʼ ಸಾರ್ವಜನಿಕ ಜೀವನದಲ್ಲಿ ತುಟಿ ಮತ್ತೊಂದು ಬಿಚ್ಚುವಾಗ ಎಚ್ಚರಿಕೆ ಕಲಿಯಬೇಕು, ಕಲಿಸಬೇಕು- ಎಂದು ಬರೆದಿದ್ದರು ಚಂದ್ರಚೂಡ್‌

ಇದನ್ನೂ ಓದಿ :Prashant Sambargi : ರಾಹುಲ್‌ ಟೀಕಿಸುವ ಭರದಲ್ಲಿ ದೇವೇಗೌಡರಿಗೆ ಅಪಮಾನ ಮಾಡಿದ ಸಂಬರ್ಗಿ!; ಜೆಡಿಎಸ್‌ನಿಂದ ದೂರು

Exit mobile version