Site icon Vistara News

Prashant Sambargi : ರಾಹುಲ್‌ ಟೀಕಿಸುವ ಭರದಲ್ಲಿ ದೇವೇಗೌಡರಿಗೆ ಅಪಮಾನ ಮಾಡಿದ ಸಂಬರ್ಗಿ!; ಜೆಡಿಎಸ್‌ನಿಂದ ದೂರು

Prashant sambargi

#image_title

ಬೆಂಗಳೂರು: ʻಎಲ್ಲ ಕಳ್ಳರ ಹೆಸರೂ ಮೋದಿ ಎಂದೇ ಯಾಕಿರುತ್ತದೆ?ʼ ಎಂಬ ಪ್ರಶ್ನೆ ಕೇಳುವ ಮೂಲಕ ವಿವಾದಕ್ಕೊಳಗಾಗಿ ಈಗ ಜೈಲು ಶಿಕ್ಷೆಗೂ ಒಳಗಾಗಿರುವ, ಜತೆ ಸಂಸತ್‌ ಸದಸ್ಯತ್ವವನ್ನೂ ಕಳೆದುಕೊಂಡಿರುವ ರಾಹುಲ್‌ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ (Prashant Sambargi) ದೇವೇಗೌಡರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬಿಗ್‌ಬಾಸ್‌ನಲ್ಲೂ ಭಾಗವಹಿಸಿ ಬಂದಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ನೇರ ನುಡಿ ಮತ್ತು ವಿವಾದಾತ್ಮಕ ಮಾತುಗಳಿಗೆ ಫೇಮಸ್‌. ಅವರು ಈಗ ಹಿಂದೂ ಜಾಗೃತಿ ಸಂಘಟನೆ ಜತೆಗೂ ಗುರುತಿಸಿಕೊಂಡಿದ್ದಾರೆ. ಇವರು ರಾಹುಲ್‌ ಗಾಂಧಿ ಅವರನ್ನು ಟೀಕಿಸಲು ಹೋಗಿ, ದೇವೇಗೌಡರ ಹೆಸರನ್ನು ಎಳೆದುತಂದಿದ್ದಾರೆ. ಇದು ದೇವೇಗೌಡರ ಅಭಿಮಾನಿಗಳನ್ನು ಸಿಟ್ಟಿಗೇರುವಂತೆ ಮಾಡಿದೆ.

ಹಾಗಿದ್ದರೆ ಸಂಬರ್ಗಿ ಹೇಳಿದ್ದೇನು?

ʻʻದೇವೇ ಗೌಡ ಕಳ್ಳ ಅನ್ನೋದಕ್ಕೂ,ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದಕ್ಕೆ ದೇವೇ ಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೇ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿʼʼ ಎಂದು ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇದರ ವಿರುದ್ಧ ದೇವೆಗೌಡರ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಬರ್ಗಿ ಕ್ಷಮೆ ಯಾಚಿಸಬೇಕು ಎಂದು ಕೆಲವರು ಹೇಳಿದ್ದಾರೆ.

ವಿಷಯ ಈಗಾಗಲೇ ಗಂಭೀರವಾಗಿದ್ದು, ಅನವಶ್ಯಕವಾಗಿ ದೇವೇಗೌಡರ ಹೆಸರು ಬಳಸಿಕೊಂಡಿದ್ದು ಜನರನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಬೆದರಿಸುವ ರೀತಿಯಲ್ಲಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಜೆಡಿಎಸ್‌ ಸಲ್ಲಿಸಿರುವ ದೂರು
ಜೆಡಿಎಸ್‌ ಕಾನೂನು ವಿಭಾಗದಿಂದ ಸಂಬರ್ಗಿ ವಿರುದ್ಧ ಪೊಲೀಸರಿಗೆ ದೂರು

ಜೆಡಿಎಸ್‌ ಕಾನೂನು ವಿಭಾಗದಿಂದ ದೂರು
ದೇವೇಗೌಡರ ಅವಹೇಳನವನ್ನು ಖಂಡಿಸಿರುವ ಜೆಡಿಎಸ್‌ ಪ್ರಶಾಂತ್ ಸಂಬರ್ಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದೆ. ಜೆಡಿಎಸ್ ಲೀಗಲ್ ಸೆಲ್‌ನಿಂದ ಡಿಸಿಪಿ ಶ್ರೀನಿವಾಸ‌ಗೌಡಗೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣ ಮಾತ್ರವಲ್ಲ, ಸಂಬರ್ಗಿ ಈ ಹಿಂದೆಯೂ ಜೆಡಿಎಸ್‌ ನಾಯಕರನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : Rahul Gandhi Disqualified: ರಾಹುಲ್‌ ಗಾಂಧಿ ಅನರ್ಹತೆ ಬೆನ್ನಲ್ಲೇ ಜನಪ್ರತಿನಿಧಿ ಕಾಯ್ದೆ ಮಾನ್ಯತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

Exit mobile version