ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು, ನಗರದ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸರನ್ನು ಸಂಸದ ಪ್ರತಾಪ್ ಸಿಂಹ ಅವರು ತಬ್ಬಿಕೊಂಡು, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಸಿಕ್ಕಿದೆ ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.
ಕೃಷ್ಣರಾಜ ಕ್ಷೇತ್ರ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಮಾತನಾಡಿ, ಪಕ್ಷ ನಿಷ್ಠೆಯ ಕಾರಣಕ್ಕೆ ನನಗೆ ಟಿಕೆಟ್ ಸಿಕ್ಕಿದೆ. ಇದರಿಂದಾಗಿ ಸಾಮಾನ್ಯ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡುತ್ತಿದೆ. ಶಾಸಕ ರಾಮದಾಸ್, ಎಚ್.ವಿ.ರಾಜೀವ್ ಮತ್ತು ನಾನು ಒಳ್ಳೆಯ ಸ್ನೇಹಿತರು. ರಾಮದಾಸ್ 30 ವರ್ಷ ಶಾಸಕರಾಗಿದ್ದರು. ರಾಜೀವ್ ಮುಡಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿದೆ. ಅವರಿಬ್ಬರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುತ್ತಾರೆ. ರಾಮದಾಸ್, ರಾಜೀವ್ ನನ್ನ ವಿರುದ್ಧ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ಟಿಕೆಟ್ ಸಿಗಲು ಬಿ.ಎಲ್.ಸಂತೋಷ್ ಒಬ್ಬರೇ ಕಾರಣವಲ್ಲ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶಿಫಾರಸು ಮಾಡಿರಬಹುದು. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನನಗೆ ರಾಜ್ಯಮಟ್ಟದ ಪಕ್ಷದ ಜವಾಬ್ದಾರಿ ನೀಡಿದ್ದರು. ಕೃಷ್ಣರಾಜ ಕ್ಷೇತ್ರದಲ್ಲಿ ನಾವು ಜನಸಂಘದ ಕಾಲದಿಂದಲೂ ಗೆದ್ದಿದ್ದೇವೆ. ಈ ಬಾರಿಯೂ ಬಿಜೆಪಿಗೆ ಕ್ಷೇತ್ರದಲ್ಲಿ ಗೆಲುವು ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ | Karnataka Election 2023: ಡಿ.ಕೆ.ಶಿವಕುಮಾರ್ ಸೇರಿ ವಿವಿಧ ಕಾಂಗ್ರೆಸ್ ನಾಯಕರಿಂದ ನಾಮಪತ್ರ ಸಲ್ಲಿಕೆ
4 ಬಾರಿಯ ಶಾಸಕ ರಾಮದಾಸ್
ಕೃಷ್ಣರಾಜ ಕ್ಷೇತ್ರದಲ್ಲಿ 4 ಬಾರಿ ಗೆದ್ದಿರುವ ಹಾಲಿ ಶಾಸಕ ಎಸ್.ಎ.ರಾಮದಾಸ್ ಬದಲಿಗೆ ಹೊಸಮುಖಕ್ಕೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಸೇರಿ ಹಲವು ಹಿರಿಯ ಶಾಸಕರಿಗೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ದಾಗ ರಾಮದಾಸ್ ಅವರಿಗೂ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಶನಿವಾರ ಸಂಜೆ ರಾಮದಾಸ್ ನಿವಾಸದ ಬಳಿ ನೂರಾರು ಬೆಂಬಲಿಗರು ಜಮಾಯಿಸಿದ್ದರು. ಈ ವೇಳೆ ಶಾಸಕ ರಾಮದಾಸ್ ಕಣ್ಣೀರು ಹಾಕಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಕ್ಷೇತ್ರದಲ್ಲಿ ಬೇರೊಬ್ಬರಿಗೆ ಟಿಕೆಟ್ ನೀಡಿರುವುದು ಕಂಡುಬಂದಿದೆ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ರಾಮದಾಸ್ ನಡುವೆ ಹಲವು ವರ್ಷಗಳಿಂದ ಶೀತಲ ಸಮರ ನಡೆಯುತ್ತಿದೆ. ಕ್ಷೇತ್ರದಲ್ಲಿ ಗುಂಬಜ್ ಮಾದರಿಯ ಬಸ್ ತಂಗುದಾಣಗಳನ್ನು ನಿರ್ಮಿಸಿದ್ದಕ್ಕೆ ರಾಮದಾಸ್ ವಿರುದ್ಧ ಪ್ರತಾಪ್ ಸಿಂಹ ಬಹಿರಂಗವಾಗಿ ಆಕ್ರೋಶ ಹೊರಹಾಕಿ, ಗುಂಬಜ್ ಮಾದರಿಯ ರಚನೆಗಳನ್ನು ತೆಗೆಯದಿದ್ದರೆ ತಾವೇ ತೆರವು ಮಾಡುವುದಾಗಿ ಕಿಡಿ ಕಾರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಮದಾಸ್, ತಮ್ಮನ್ನು ಪಕ್ಷದಿಂದ ಬಿಡಿಸಲು ಹುನ್ನಾರ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಇದೇ ಅಲ್ಲದೇ ಯೋಗ ದಿನ ಕಾರ್ಯಕ್ರಮ ಆಯೋಜನೆ ಸೇರಿ ವಿವಿಧ ಸಂದರ್ಭಗಳಲ್ಲಿ ಈ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಹಲವು ಬಾರಿ ಬಹಿರಂಗವಾಗಿತ್ತು.
ಇದನ್ನೂ ಓದಿ | Karnataka Election 2023: ಶಾಸಕ ಎಸ್.ಎ. ರಾಮದಾಸ್‌ಗೆ ಟಿಕೆಟ್ ಕೈತಪ್ಪಲು ಕಾರಣ ಬಿ.ಎಲ್. ಸಂತೋಷ್?; ಏನಿದು ಕಾರಣ?
4 ಬಾರಿಯ ಶಾಸಕರಾದ ರಾಮದಾಸ್, ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಲಿಂಗಾಯತ ಸಮುದಾಯ ಇತ್ತೀಚೆಗೆ ಒತ್ತಾಯ ಮಾಡಿತ್ತು. ಇದಕ್ಕೂ ಮುನ್ನಾ ಶಾಸಕರ ಆಡಳಿತ ವೈಖರಿ ವಿರುದ್ಧ ಬ್ರಾಹ್ಮಣ ಸಮುದಾಯ ಕೂಡ ಅಸಮಾಧಾನ ಹೊರಹಾಕಿತ್ತು. ಇವು ಕೂಡ ಹಾಲಿ ಶಾಸಕರನ್ನು ಬದಲಿಸಲು ಪ್ರಮುಖ ಕಾರಣ ಎನ್ನಲಾಗಿದೆ.
ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿದಾಗ ಶಾಸಕ ರಾಮದಾಸ್ ಬೆನ್ನಿಗೆ ಗುದ್ದಿ ಆತ್ಮೀಯತೆ ತೋರುತ್ತಿದ್ದರು. ಇದರಿಂದ ರಾಮದಾಸ್‌ಗೆ ಪ್ರಧಾನಿಗಳ ಕೃಪಾಕಟಾಕ್ಷ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಈಗ ಅವರಿಗೇ ಟಿಕೆಟ್ ಕೈತಪ್ಪಿರುವುದು ಚರ್ಚೆಗೆ ಗ್ರಾಸವಾಗಿದ್ದು, ಶಾಸಕ ರಾಮದಾಸ್ ಅವರ ಮುಂದಿನ ನಡೆ ಏನು ಎಂಬುವುದರ ಬಗ್ಗೆ ಕುತೂಹಲ ಮೂಡಿದೆ.