ಮೈಸೂರು: ಬಿಡದಿ ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore-Mysore Expressway) ಸೇತುವೆ ಮೇಲೆ ಡಾಂಬರು ಕಿತ್ತು ಹೋಗಿಲ್ಲ, ಎಕ್ಸ್‌ಪ್ಯಾನ್ಶನ್ ಜಾಯಿಂಟ್ ಬಳಿ ನೀರು ಹೋಗಲು ವ್ಯವಸ್ಥೆ ಮಾಡಲಾಗಿದೆ. ಜಾಯಿಂಟ್ ಹತ್ತಿರ ಹಾಕಿದ ಸಿಮೆಂಟ್ ಕ್ಯೂರಿಂಗ್ ಆಗಿಲ್ಲ, ಅದನ್ನು ಕಟ್ ಮಾಡಿ ಸರಿ ಪಡಿಸುವ ಕೆಲಸ ಮಾಡಲಾಗುತ್ತಿದೆ. ಜನರಿಗೆ ಅರ್ಥ ಮಾಡಿಸಲು ಎಕ್ಸ್‌ಪ್ಯಾನ್ಶನ್ ಜಾಯಿಂಟ್ ಫೋಟೊ ಹಾಕಿದ್ದೆ ಎಂದು ಹೆದ್ದಾರಿ ಕಳಪೆ ಕಾಮಗಾರಿ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಹೆದ್ದಾರಿ ಕಳಪೆ ಕಾಮಗಾರಿ ಆರೋಪಕ್ಕೆ ನವ ದೆಹಲಿಯಲ್ಲಿ ಬುಧವಾರ ಪ್ರತಿಕ್ರಿಯಿಸಿರುವ ಅವರು, ಮನೆ ಕಟ್ಟಿದರೂ ಅನೇಕ ಸಮಸ್ಯೆ ಬರುತ್ತದೆ. ಹಾಗೆಯೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕೂಡ ದೊಡ್ಡ ಕಾಮಗಾರಿಯಾಗಿದೆ. ಈಗ ಸಣ್ಣ ನ್ಯೂನತೆ ಸರಿಪಡಿಸಲಾಗುತ್ತಿದೆ. ಆದರೆ, ರಸ್ತೆ ಕಿತ್ತು ಹೋಗಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಹೇಳಿದ್ದಾರೆ.
ನೈಸ್ ರಸ್ತೆಯಲ್ಲಿ ಯಾವ ಯಾವ ರಾಜಕಾರಣಿಗಳ ಹಿತಾಸಕ್ತಿ ಇದೆ ಎಂದ ಅವರು, ಪ್ರತಿ ಕಿ.ಮೀ.ಗೆ 4 ರೂಪಾಯಿ ಟೋಲ್ ಹಾಕಲಾಗುತ್ತಿದೆ. ಎಷ್ಟು ಟೋಲ್ ಹಾಕಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡುತ್ತದೆ. ದೇಶದಲ್ಲಿ ಎಲ್ಲ ರಾಜ್ಯಗಳಲ್ಲಿ ಏನು ನಿಯಮ ಇದೆ, ಅದೇ ನಿಯಮ ಕರ್ನಾಟಕದಲ್ಲೂ ಇದೆ ಎಂದು ಪರೋಕ್ಷವಾಗಿ ಟೋಲ್ ಬದಲಿಸಲು ಸಾಧ್ಯವಿಲ್ಲ ತಿಳಿಸಿದ್ದಾರೆ.
ಇದನ್ನೂ ಓದಿ | Bangalore-Mysore Highway: ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಗೊಂದಲ; ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಹೈಕೋರ್ಟ್
ದೇಶದ ಯಾವುದೇ ಎಕ್ಸ್‌ಪ್ರೆಸ್ ವೇಗೆ ಹೋದರೂ ಟೋಲ್ ಇದೆ. ಸರ್ವಿಸ್ ರಸ್ತೆ ಇಲ್ಲದ ರಸ್ತೆಗಳಿಗೂ ಟೋಲ್ ಹಾಕಲಾಗುತ್ತದೆ. ನೈಸ್ ರಸ್ತೆಗೂ ಟೋಲ್ ಹಾಕುತ್ತಿಲ್ಲವೇ? ರಾಜ್ಯ ಹೆದ್ದಾರಿಗಳಿಗೂ ಕಾಂಗ್ರೆಸ್ ಸರ್ಕಾರ ಟೋಲ್ ಹಾಕಿದೆ. ಜಗತ್ತಿನಲ್ಲಿ ಎಲ್ಲ ಹೆದ್ದಾರಿಗಳಿಗೂ ಟೋಲ್ ಕಟ್ಟಿಸಿಕೊಳ್ಳುತ್ತಾರೆ. ಅಪಘಾತಗಳು ಆಗಬಾರದು ಎಂಬ ಕಾರಣಕ್ಕೆ ದ್ವಿ ಮತ್ತು ತ್ರಿಚಕ್ರ ವಾಹನಗಳನ್ನು ಬಿಡುತ್ತಿಲ್ಲ. ಕ್ರೈಸ್ತ್ ಕಾಲೇಜ್ ಬಳಿ ಕಾನೂನಿನ ತೊಡಕಿರುವ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ಮಾಡಿಲ್ಲ, ಅದನ್ನು ಸರಿಪಡಿಸುವ ಕೆಲಸ ಆಗುತ್ತಿದೆ ಎಂದರು.
ರಾಮನಗರ, ಚನ್ನಪಟ್ಟಣದವರಿಗೆ ಈಗ ಟೋಲ್ ಕಟ್ಟುವ ಪರಿಸ್ಥಿತಿ ಬಂದಿದೆ. ಅವರಿಗೂ ಸರ್ವಿಸ್ ರೋಡ್ ಸಿಗಲಿದೆ. 20 ಕಿಮೀ ವ್ಯಾಪ್ತಿಯಲ್ಲಿರುವ ಜನರಿಗೆ ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ನೀಡಲು ಕೇಂದ್ರ ಸೂಚನೆ ನೀಡಿದೆ ಎಂದು ಹೇಳಿದರು.