Site icon Vistara News

Loksabha 2024: ಎಚ್‌.ಡಿ. ದೇವೇಗೌಡರ ಆಶೀರ್ವಾದ ಪಡೆದ ಪ್ರತಾಪ್‌ ಸಿಂಹ; ಲೋಕಸಭೆ ಚುನಾವಣಾ ಲೆಕ್ಕಾಚಾರವೆಂದ ನೆಟ್ಟಿಗರು!

Pratap Simha and Deve Gowda in new Parliament house

ಬೆಂಗಳೂರು: ನೂತನ ಸಂಸತ್‌ ಭವನವು (New Parliament Building) ಭಾನುವಾರ ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಗಣ್ಯರು ಸಾಕ್ಷಿಯಾಗಿದ್ದರು. ಈ ಸಮಾರಂಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರೂ ಪಾಲ್ಗೊಂಡಿದ್ದರು. ಈ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್‌ ಸಿಂಹ ಅವರು ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರು. ಇದಕ್ಕೆ ನೆಟ್ಟಿಗರು ಸಹ ಖುಷಿಯಿಂದಲೇ ಅವರ ಕಾಲೆಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಮುಂದಿನ ಲೋಕಸಭಾ ಚುಣಾವಣೆಯ (Loksabha 2024) ಲೆಕ್ಕಾಚಾರ ಎಂದು ಹೇಳಿದ್ದಾರೆ!

ನೂತನ ಸಂಸತ್‌ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಲವು ವಿರೋಧ ಪಕ್ಷಗಳು ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಲ್ಲದೆ, ಸಮಾರಂಭವನ್ನು ಬಹಿಷ್ಕಾರ ಮಾಡಿದ್ದರು. ಆದರೆ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮಾತ್ರ ಇದಕ್ಕೆ ಪ್ರತಿರೋಧ ತೋರದೆ, ಹೊಸ ಸಂಸತ್‌ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ನವ ದೆಹಲಿಗೆ ಆಗಮಿಸಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಸಹ ಎಚ್.ಡಿ. ದೇವೇಗೌಡ ಮೇಲೆ ವಿಶೇಷವಾದ ಗೌರವವನ್ನು ಇಟ್ಟುಕೊಂಡಿದ್ದೂ ಸಹ ಇದಕ್ಕೊಂದು ಕಾರಣ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: EPFO Nomination update : ಇಪಿಎಫ್‌ಒ ನಾಮಿನೇಶನ್‌ ಬಾಕಿ ಇದೆಯೇ? ಹೀಗೆ ಮಾಡಿ…

ಈ ವೇಳೆ ಸಮಾರಂಭವನ್ನು ವೀಕ್ಷಿಸುತ್ತಿದ್ದ ಎಚ್.ಡಿ. ದೇವೇಗೌಡರ ಬಳಿ ಬಂದ ಪ್ರತಾಪ್‌ ಸಿಂಹ, ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಅಲ್ಲದೆ, ದೇವೇಗೌಡರಿಂದ ಆಶೀರ್ವಾದವನ್ನೂ ಪಡೆದುಕೊಂಡರು. ಬಳಿಕ ಈ ಫೋಟೊವನ್ನು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಪೋಸ್ಟ್‌ ಮಾಡಿದ್ದು, “ಹೊಸ ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ಹಿರಿಯ ಚೇತನ, ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ ಪಡೆದುಕೊಳ್ಳಲಾಯಿತು” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಲವಾರು ಕಮೆಂಟ್‌ಗಳು ಬಂದಿದ್ದು, ಕೆಲವರು ಶುಭ ಹಾರೈಸಿದರೆ, ಮತ್ತೆ ಕೆಲವರು ಮುಂದಿನ ಚುನಾವಣೆಯ ತಯಾರಿ ಎಂದು ಕಾಲೆಳೆದಿದ್ದಾರೆ.

ಕಮೆಂಟ್‌ನಲ್ಲೇನಿದೆ?

“ಮೋದಿಜಿಯವರ ನೂತನ ಸಂಸತ್ತಿನಲ್ಲಿ ಕರ್ನಾಟಕದ ಹಿರಿಯ ಧ್ರುವತಾರೆ ಮತ್ತು ಕಿರಿಯ ಅಭಿವೃದ್ಧಿಯ ನವಚೇತನ ಸಂಗಮ” ಎಂದು ಕಿರಣ್‌ ಬಿ ಗೌಡ ಎಂಬುವವರು ಕಮೆಂಟ್‌ ಮಾಡಿದರೆ, ಯಶ್ವಂತ್‌ ಶೆಟ್ಟಿ ಎಂಬುವವರು, “ಈ ಚಿತ್ರಕ್ಕೆ ನಿಮಗೆ ನೂರಕ್ಕೆ ನೂರು ಅಂಕಗಳು…. ನಮ್ಮ ಭಾರತ ಮಾಜಿ ಪ್ರಧಾನಿಗೆ ಕೊಟ್ಟ ಗೌರವ ಚೆನ್ನಾಗಿದೆ” ಎಂದು ಬರೆದುಕೊಂಡಿದ್ದಾರೆ.

ರಾಜಶೇಖರ್‌ ಮೂರ್ತಿ ಎಂಬುವವರು, “ಅವರ ಆಶೀರ್ವಾದ ಇಲ್ಲ ಎಂದರೆ ನಿನ್ನ ಸೋಲು ಕಟ್ಟಿಟ್ಟ ಬುತ್ತಿ ಸಹೋದರ” ಎಂದು ಬರೆದುಕೊಂಡಿದ್ದಾರೆ. ಮಹಾದೇವಸ್ವಾಮಿ ಕೆ.ಜಿ. ಎಂಬುವವರು, “2024ರ ಚುನಾವಣೆಗೆ ನೀವು ಸಿದ್ಧರಾಗುತ್ತಿದ್ದೀರಾ?” ಎಂದು ಪ್ರಶ್ನೆ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಫೋಟೊ ಹಂಚಿಕೊಂಡ ಸಂಸದ ಪ್ರತಾಪ್‌ ಸಿಂಹ

ಮೈಸೂರು ರಾಜಕೀಯ ಚಿತ್ರಣ ಹೇಗಿದೆ?

ಹಳೇ ಮೈಸೂರು ಸೇರಿದಂತೆ ಮೈಸೂರಿನಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಾರುಪತ್ಯವಿದೆ. ಇಲ್ಲಿ ಬಿಜೆಪಿ ತನ್ನ ಸಂಘಟನೆಯಲ್ಲಿ ಬಹಳವೇ ಹಿಂದಿದೆ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಂದಷ್ಟು ಮತಗಳನ್ನು ಸಂಗ್ರಹಿಸುವಲ್ಲಿ ಬಿಜೆಪಿ ಯಶಸ್ವಿಯೂ ಆಗಿದೆ. ಒಟ್ಟಾರೆಯಾಗಿ ರಾಜ್ಯ ಅಥವಾ ಸ್ಥಳೀಯ ರಾಜಕೀಯವೇ ಬೇರೆ, ರಾಷ್ಟ್ರಮಟ್ಟದ ರಾಜಕಾರಣವೇ ಬೇರೆಯಾಗಿದೆ. ಇನ್ನು ಲೋಕಸಭೆ ವಿಚಾರಕ್ಕೆ ಬಂದಾಗ ಮತದಾರ ಇಲ್ಲಿ ಬೇರೆ ರೀತಿಯಾಗಿಯೇ ಚಿಂತನೆ ಮಾಡುತ್ತಾ ಬಂದಿರುವುದರಿಂದ ಫಲಿತಾಂಶವನ್ನು ಹೀಗೇ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ. ಆದರೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರತಾಪ್‌ ಸಿಂಹ ಅವರು ಸತತವಾಗಿ 2 ಬಾರಿ ಆರಿಸಿಬಂದಿದ್ದಾರೆ.

ಇದನ್ನೂ ಓದಿ: Karnataka Cabinet: ಬಸ್‌ ಓಡಿಸೋದಿಲ್ಲ ಎಂದಿದ್ದ ರಾಮಲಿಂಗಾರೆಡ್ಡಿ: ಡಿ.ಕೆ. ಬ್ರದರ್ಸ್‌ ʼಗ್ಯಾರಂಟಿಗೆʼ ಸಮ್ಮತಿ

ಇಲ್ಲಿ ಒಕ್ಕಲಿಗ ಸಮುದಾಯದವರ ಪ್ರಾಬಲ್ಯ ಹೆಚ್ಚಿದೆ. ಅಲ್ಲದೆ, ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಹಾಗೂ ಮತ್ತವರ ಕುಟುಂಬದ ಬಗ್ಗೆ ಜನರಲ್ಲಿ ವಿಶೇಷ ಪ್ರೀತಿಯನ್ನಿಟ್ಟುಕೊಂಡಿದ್ದಾರೆ. ಅಲ್ಲದೆ, ಪ್ರತಾಪ್‌ ಸಿಂಹ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಈಗ ಮುಂದಿನ ವರ್ಷ (2024) ಲೋಕಸಭಾ ಚುನಾವಣೆ ನಡೆಯುವುದರಿಂದ ಅವರ ಆಶೀರ್ವಾದವನ್ನು ಪಡೆದುಕೊಂಡಿರುವುದನ್ನು ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯ ತಯಾರಿ ಎಂಬುದಾಗಿ ಹೇಳಿದ್ದಾರೆ.

Exit mobile version