Site icon Vistara News

ಪ್ರತಿಷ್ಠಾನ ನೇಮಕಾತಿಯಲ್ಲಿ ಸರ್ಕಾರ ಎಡವಟ್ಟು, ದಿ.ರಾಜೇಶ್ವರಿ ತೇಜಸ್ವಿ ನೇಮಕ, ಅಧ್ಯಕ್ಷತೆಗೆ ದೇರ್ಲ ನಕಾರ

tejaswi

ಶಿವಮೊಗ್ಗ: ವಿವಿಧ ಟ್ರಸ್ಟ್​ ಮತ್ತು ಪ್ರತಿಷ್ಠಾನಗಳಿಗೆ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ದಿ.ರಾಜೇಶ್ವರಿ ತೇಜಸ್ವಿ ಅವರನ್ನೂ ಸದಸದ್ಯರನ್ನಾಗಿ ನೇಮಿಸಿದೆ. ಈ ನಡುವೆ, ಪ್ರತಿಷ್ಠಾನದ ಅಧ್ಯಕ್ಷರಾಗಲು ಸಾಹಿತಿ ನರೇಂದ್ರ ರೈ ದೇರ್ಲ ನಿರಾಕರಿಸಿದ್ದಾರೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನೇಮಕಾತಿಯಲ್ಲಿ ಎಡವಟ್ಟು ನಡೆದಿದೆ. ರಾಜೇಶ್ವರಿ ತೇಜಸ್ವಿ ಕಳೆದ ವರ್ಷ ಡಿ.14ರಂದು ನಿಧನರಾಗಿದ್ದು, ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ನರೇಂದ್ರ ರೈ ದೇರ್ಲ ಅವರನ್ನು ಪ್ರತಿಷ್ಠಾನದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಉಳಿದಂತೆ ಪ್ರಭುಲಿಂಗ ಶಾಸ್ತ್ರಿ, ದೀಪಕ್​ ದೊಡ್ಡಯ್ಯ, ಶಿವಾನಂದ ಕಳವೆ, ವಿನೋದಕುಮಾರ್​ ನಾಯಕ್​, ಲಕ್ಷ್ಮೀನಾರಾಯಣ ಕಜೆಗದ್ದೆ, ಮಾರ್ಷಲ್​ ಷರಾಮ್​ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.

ಪ್ರತಿಷ್ಠಾನದ ಅಧ್ಯಕ್ಷತೆ ವಹಿಸಿಕೊಳ್ಳಲು ನರೇಂದ್ರ ರೈ ದೇರ್ಲ ಅರು ನಿರಾಕರಿಸಿದ್ದಾರೆ. ಕಾರ್ಯಭಾರದ ಒತ್ತಡ ಹಾಗೂ ತಮ್ಮ ಪೂರ್ವಾನುಮತಿ ಪಡೆಯದಿದ್ದುದು ಇದಕ್ಕೆ ಕಾರಣಗಳು ಎಂದಿದ್ದಾರೆ. ಅವರು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಈ ಕುರಿತು ಬರೆದ ಪತ್ರದ ಪೂರ್ಣ ಪಾಠ ಹೀಗಿದೆ:

ʼʼಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ʻಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ’ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು .ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ. ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ .ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟು ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ದಟತನವೆಂದು ಭಾವಿಸಬಾರದು. ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ. ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ. ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ.ʼʼ

ಇದನ್ನೂ ಓದಿ: ಕನ್ನಡ ಸಂಸ್ಕೃತಿ ಇಲಾಖೆ ಟ್ರಸ್ಟ್‌ಗಳಿಗೆ ನೇಮಕ: ತಿರಸ್ಕರಿಸಿದ ಚಕ್ರವರ್ತಿ ಸೂಲಿಬೆಲೆ

Exit mobile version