Site icon Vistara News

Praveen Murder ಬಳಿಕ ಕ್ಷೇತ್ರದಲ್ಲಿ ಓಡಾಡಲೂ ಹಿಂದೇಟು ಹಾಕುತ್ತಿರುವ ಬಿಜೆಪಿ ಶಾಸಕರು, ಮಂತ್ರಿಗಳು!

Praveen Nalin vehicle

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿದ್ದ ಪ್ರವೀಣ್‌ ನೆಟ್ಟಾರು ಅವರ ಕೊಲೆಯ ಬಳಿಕ ಪಕ್ಷದ ಕಾರ್ಯಕರ್ತರ ಆಕ್ರೋಶ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಸ್ವತಃ ಶಾಸಕರು ಅವರ ಕ್ಷೇತ್ರದಲ್ಲೇ ಓಡಾಡಲೂ ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ತಮ್ಮ ಊರಿನಲ್ಲಿ ರಾಜರಂತೆ ಮೆರೆಯುತ್ತಿದ್ದ ನಾಯಕರೆಲ್ಲ ಈಗ ಮನೆಯಿಂದ ಹೊರಗೆ ಕಾಲಿಡಲು ನೂರು ಸಾರಿ ಯೋಚನೆ ಮಾಡುವಂತಾಗಿದೆ.

ಅದರಲ್ಲೂ ಮುಖ್ಯವಾಗಿ ಕರಾವಳಿ ಹಾಗೂ ಮಲೆನಾಡು ಭಾಗದ ಶಾಸಕರು, ಆ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಭಾರಿ ಪ್ರಮಾಣದ ಆತಂಕ ಎದುರಾಗಿದೆ. ಬೆಂಗಳೂರಿನ ಜಯಮಹಲ್‌ನಲ್ಲಿರುವ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸರಕಾರಿ ಕಚೇರಿಗೆ ಎಬಿವಿಪಿ ಕಾರ್ಯಕರ್ತರೇ ನುಗ್ಗಿದ್ದನ್ನು ನೋಡಿದ ಮೇಲೆ ಉಳಿದ ಜನಪ್ರತಿನಿಧಿಗಳಲ್ಲೂ ಅಳುಕು ಶುರುವಾಗಿದೆ.

ನಳಿನ್‌ ಕಾರನ್ನೇ ಅಲುಗಾಡಿಸಿದ ಮೇಲೆ!
ಬಿಜೆಪಿ ನಾಯಕರು ಪಕ್ಷದ ಕಾರ್ಯಕರ್ತರನ್ನು ಮರೆತಿದ್ದಾರೆ. ಅವರ ಯಾವ ಸಮಸ್ಯೆಯನ್ನೂ ಕೇಳಿಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಬಿಜೆಪಿಯ ಭದ್ರಕೋಟೆ ಎನಿಸಿರುವ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹಿಂದಿನಿಂದಲೂ ಇದೆ. ಏನೇ ಮಾಡಿದರೂ ಅವರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎನ್ನುವ ಗಟ್ಟಿ ಧೈರ್ಯವೇ ಜನಪ್ರತಿನಿಧಿಗಳ ಹುಂಬತನಕ್ಕೆ ಕಾರಣ ಎನ್ನುವುದು ಕೂಡಾ ಸ್ಪಷ್ಟವಿದೆ.
ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ನಾಯಕರನ್ನು ಛೇಡಿಸುವ, ಗೇಲಿ ಮಾಡುವ, ಟ್ರೋಲ್‌ ಮಾಡುವ ಪ್ರಕ್ರಿಯೆಗಳು ನಡೆಯುತ್ತಲೇ ಬಂದಿವೆ. ಈ ವಿಚಾರದಲ್ಲಿ ಕೆಲವು ಕಾರ್ಯಕರ್ತರನ್ನು ನಾಯಕರು ಟಾರ್ಗೆಟ್‌ ಮಾಡಿದ ಘಟನೆಗಳೂ ನಡೆದಿವೆ. ಆದರೆ ಇದೆಲ್ಲವೂ ಒಳಗಿಂದೊಳಗೇ ಇತ್ತು. ಯಾವುದೆ ನಾಯಕನನ್ನು ನೇರವಾಗಿ ಸಾರ್ವಜನಿಕವಾಗಿ ಪ್ರಶ್ನೆ ಮಾಡಿರಲಿಲ್ಲ.

ಆದರೆ, ಕಳೆದ ಮಂಗಳವಾರ ರಾತ್ರಿ ಪ್ರವೀಣ್‌ ನೆಟ್ಟಾರು ಕೊಲೆ ನಡೆದ ಬಳಿಕ ಈ ಎಲ್ಲ ಆಕ್ರೋಶಗಳು ಭುಗಿಲೆದ್ದಿವೆ. ಕೊಲೆಯಾದ ಕ್ಷಣದಿಂದಲೇ ರಾಜ್ಯದ ಬಿಜೆಪಿ ಸರಕಾರ, ಜನಪ್ರತಿನಿಧಿಗಳನ್ನು ನೇರವಾಗಿ ಜನರು ಪ್ರಶ್ನಿಸಲು ಆರಂಭಿಸಿದ್ದಾರೆ. ಸವಾಲು ಹಾಕಲು ಶುರು ಮಾಡಿದ್ದಾರೆ. ಅದೆಲ್ಲದರ ತೀವ್ರ ರೂಪ ಎಂಬಂತೆ ಬೆಳ್ಳಾರೆಯಲ್ಲಿ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಕಾರನ್ನೂ ಸಾವಿರಾರು ಕಾರ್ಯಕರ್ತರು ಅಡ್ಡಗಟ್ಟಿದ್ದು. ಕಾರ್ಯಕರ್ತರ ಆಕ್ರೋಶ ಕಂಡು ಆವತ್ತು ಪೊಲೀಸರ ದಿಕ್ಕು ತೋಚದಂತಾಗಿದ್ದರು. ಕೊನೆಗೆ ಹೇಗೋ ಮಾಡಿ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಶಾಸಕ ಅಂಗಾರ ಅವರನ್ನು ರಕ್ಷಿಸಬೇಕಾಯಿತು. ಒಂದು ಕಾಲದಲ್ಲಿ ಬಿಜೆಪಿ ನಾಯಕರು ಬಂದರೆಂದರೆ ರ‍್ಯಾಲಿಗಳ ಮೂಲಕ ಸ್ವಾಗತಿಸುತ್ತಿದ್ದ ಜನ ನಮ್ಮೂರಿಗೆ ಬಂದರೆ ಹುಷಾರ್‌, ತೊಲಗಿ ಇಲ್ಲಿಂದ ಎಂಬಷ್ಟು ಆಕ್ರೋಶಕ್ಕೆ ಒಳಗಾಗಿದ್ದು ನಂಬಲಿಕ್ಕೆ ಅಸಾಧ್ಯವಾದ ಘಟನೆ. ಅದರಲ್ಲೂ ನಳಿನ್‌ ಕುಮಾರ್‌ ಅವರು ಬಂದಿದ್ದ ಕಾರಿನ ಚಕ್ರಗಳ ಗಾಳಿ ತೆಗೆದು, ವಾಹನವನ್ನೇ ಮಗುಚಿ ಹಾಕಲು ಯತ್ನಿಸಿದ ದೃಶ್ಯಗಳು ರಾಜಕಾರಣಿಗಳ ನಂಬಿಕೆಗಳನ್ನೇ ಬುಡಮೇಲು ಮಾಡುವಂತೆ ಕಂಡುಬಂತು.

ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಆಕ್ರೋಶದ ಒಂದು ನೋಟ

ಯಾಕೆ ಈ ರೀತಿಯ ಆಕ್ರೋಶ
ಕರಾವಳಿ ಮತ್ತು ಮಲೆನಾಡಿನ ಬಹುತೇಕ ಭಾಗಗಳು ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿವೆ. ಇಲ್ಲಿ ಯಾರು ನಿಂತರೂ ಗೆಲ್ಲುತ್ತಾರೆ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ. ಸ್ವತಃ ನಳಿನ್‌ ಕುಮಾರ್‌ ಕಟೀಲ್‌ ಅವರು ಕೂಡಾ ೧೫ ವರ್ಷದ ಹಿಂದೆ ಒಬ್ಬ ಅಜ್ಞಾತ ಕಾರ್ಯಕರ್ತನಾಗಿದ್ದೇ ಬಿಜೆಪಿಯ ಗಟ್ಟಿ ಮತಗಳ ಬೆಂಬಲದಿಂದಲೇ ಗೆಲ್ಲುತ್ತಿರುವವರು. ಆದರೆ, ಒಮ್ಮೆ ಆಯ್ಕೆಯಾದ ಮೇಲೆ ಅವರು ತಮ್ಮನ್ನು ಆರಿಸಿದ, ತಮ್ಮ ಗೆಲುವಿಗಾಗಿ ಹಗಲಿರುಳು ದುಡಿದ, ಈಗಲೂ ಪ್ರತಿ ನಿತ್ಯವೂ ಹಿಂದುತ್ವಕ್ಕಾಗಿ, ಪಕ್ಷಕ್ಕಾಗಿ ಹೋರಾಟ ಮಾಡುವ ಕಾರ್ಯಕರ್ತರನ್ನು ಮರೆಯುತ್ತಾರೆ ಎನ್ನುವುದು ಅವರ ಸಿಟ್ಟು.
ಧರ್ಮಕ್ಕೆ ಸಂಬಂಧಿಸಿ, ಗೋ ಸಾಗಾಟಕ್ಕೆ ಸಂಬಂಧಿಸಿ ಆಗಾಗ ನಡೆಯುವ ಗಲಾಟೆಗಳ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ. ಕೊಲೆಯಂಥ ಘಟನೆಗಳು ನಡೆದರೂ ಬಾಯುಪಚಾರಕ್ಕೆ ಸೀಮಿತಗೊಳ್ಳುತ್ತಾರೆ. ಹಿಂದೂಗಳನ್ನು ಕೊಂದ ಆರೋಪಿಗಳಿಗೆ ಬೇಗನೆ ಜಾಮೀನು ಸಿಗುತ್ತದೆ, ಮುಸ್ಲಿಮರನ್ನು ಕೊಂದ ಹಿಂದೂಗಳಿಗೆ ಜೈಲುವಾಸ ಕಾಯಂ ಆಗುತ್ತದೆ ಎಂಬೆಲ್ಲ ಸಿಟ್ಟುಗಳು ಮಡುಗಟ್ಟಿದ್ದವು. ಈ ಸಿಟ್ಟು ಆರೆಸ್ಸೆಸ್‌ನ ಪ್ರಮುಖ ನಾಯಕ, ಕರಾವಳಿಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಪಕ್ಷದ ಮೇಲೆ ಹಿಡಿತ ಹೊಂದಿರುವ ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನೂ ಬಿಟ್ಟಿಲ್ಲ. ಅವರನ್ನೂ ಜನ ಹಿಂದಕ್ಕೆ ಕಳುಹಿಸಿದ್ದಾರೆ.

ಮುಖ್ಯಮಂತ್ರಿಗೂ ಕಾದಿತ್ತು ಬಿಸಿ
ನಿಜವೆಂದರೆ, ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ನಾಯಕರು ಪ್ರವೀಣ್‌ ನೆಟ್ಟಾರು ಅವರ ಮನೆಗೆ ಕಾಲಿಡಲು ಕಾರಣವಾಗಿದ್ದು ಕೇವಲ ಅವರು ಮುಖ್ಯಮಂತ್ರಿಗಳ ಜತೆ ಬಂದಿದ್ದಾರೆ ಎಂಬ ಕಾರಣಕ್ಕಾಗಿ ಮಾತ್ರ. ಕೊಲೆ ನಡೆದು ಎರಡು ದಿನಗಳ ಬಳಿಕವಷ್ಟೇ ಅವರಿಗೆ ಆ ಮನೆಗೆ ಎಂಟ್ರಿ ಸಿಕ್ಕಿದೆ. ಮಂಗಳವಾರ ಕೊಲೆ ನಡೆದರೆ ಬುಧವಾರ ಅಂತ್ಯಕ್ರಿಯೆಗೆಂದು ಹೋಗಿದ್ದ ನಾಯಕರನ್ನು ಜನರೇ ತಡೆದು ಮರಳಿ ಕಳುಹಿಸಿದ್ದರು. ಗುರುವಾರ ಮುಖ್ಯಮಂತ್ರಿಗಳು ಭೇಟಿಗೆ ಸಮಯ ನಿಗದಿ ಮಾಡುತ್ತಿದ್ದಂತೆಯೇ ಎಲ್ಲ ನಾಯಕರು ಸಿಎಂ ಅವರಿಗಿರುವ ಬೆಂಗಾವಲಿನಲ್ಲಿ ಆ ಮನೆಯ ಹೊಸಿಲು ತುಳಿಯಬೇಕಾಯಿತು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರೆಲ್ಲರೂ ಸಿಎಂ ಜತೆಗೇ ಹೋಗಬೇಕಾಯಿತು. ಆವತ್ತು ಜನರು ಸ್ವತಃ ಸಿಎಂ ಅವರನ್ನೂ ಪ್ರಶ್ನಿಸಲೂ ಮುಂದಾಗಿದ್ದರು. ಆದರೆ, ಭದ್ರತೆಯ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಪ್ರವೀಣ್‌ ನೆಟ್ಟಾರು ಅವರ ಪತ್ನಿಯಂತೂ ಮುಖ್ಯಮಂತ್ರಿಗಳ ಮುಂದೆ ಯಾವ ಮುಲಾಜೂ ಇಲ್ಲದೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಸಮಸ್ಯೆಯನ್ನು ಪರಿಹಾರ ಮಾಡುವ ಶಕ್ತಿ ನಿಮಗಿದೆ, ಯಾಕೆ ಪ್ರಯೋಗಿಸುತ್ತಿಲ್ಲ ಎಂದೇ ಕೇಳಿದ್ದರು. ಸಚಿವರು ಮತ್ತು ಶಾಸಕರಾದ ಅಂಗಾರ, ಶಾಸಕ ಕೆ.ಟಿ. ಬೋಪಯ್ಯ, ಸಂಜೀವ ಮಠಂದೂರು ಅವರೆಲ್ಲ ಮನೆಗೆ ಹೋದಾಗಲೂ ಮನೆಯವರು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಈ ಎಲ್ಲ ಹಿನ್ನೆಲೆಗಳಿಂದಾಗಿ ಜನಪ್ರತಿನಿಧಿಗಳಿಗೆ ಭಯವಾಗಿದೆ.

ಇದು ಕರಾವಳಿಯಲ್ಲಷ್ಟೇ ಅಲ್ಲ
ಕಾರ್ಯಕರ್ತರ ಆಕ್ರೋಶ ಕೇವಲ ಕರಾವಳಿಗೆ ಸೀಮಿತವಾಗಿಲ್ಲ. ನಿಜ ಹೇಳಬೇಕೆಂದರೆ ಅಲ್ಲೇ ಸ್ವಲ್ಪ ಕಡಿಮೆ. ಅದು ಆವತ್ತು ಕೊಲೆ ಮತ್ತು ಅದರ ಮರುದಿನಕ್ಕೆ ಸೀಮಿತವಾಗಿತ್ತು. ಆದರೆ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಳಗಾವಿ, ವಿಜಯಪುರ ಮೊದಲಾದ ಭಾಗಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಪದಾಧಿಕಾರಿಗಳು ರಾಜೀನಾಮೆ ನೀಡುವ, ಪ್ರತಿಭಟನೆ ನಡೆಸುವ ಪ್ರಕ್ರಿಯೆಗಳು ಈಗಲೂ ಚಾಲ್ತಿಯಲ್ಲಿವೆ. ಎಲ್ಲ ಕಡೆಗಳಲ್ಲಿ ಕಾರ್ಯಕರ್ತರು ಬಿಜೆಪಿ ಜನಪ್ರತಿನಿಧಿಗಳ ಮೇಲೆ ನೇರ ಸಂಗ್ರಾಮಕ್ಕೆ ಇಳಿದಿದ್ದಾರೆ.

ಹೀಗಾಗಿ, ಯಾವ ಜನಪ್ರತಿನಿಧಿಗಳಿಗೂ ಕಾರ್ಯಕರ್ತರನ್ನು ಎದುರಿಸುವ ನೈತಿಕ ಶಕ್ತಿ ಕಂಡುಬರುತ್ತಿಲ್ಲ. ರಾಜ್ಯ ಸರಕಾರದ ವಿರುದ್ಧವೇ ಜನರು ಸಿಡಿದುಬಿದ್ದಿರುವುದರಿಂದ ಉಸ್ತುವಾರಿ ಸಚಿವರ ಕೂಡ ಜಿಲ್ಲೆಗೆ ಭೇಟಿ ನೀಡಬೇಕಾ ಎಂಬ ಅನುಮಾನದಲ್ಲಿದ್ದಾರೆ. ಒಂದೊಮ್ಮೆ ಪ್ರತಿಭಟನೆ ಎದುರಾದರೆ ಎಂಬುದು ಅವರ ಪ್ರಧಾನ ಆತಂಕ. ಹಾಗಾಗಿ ಎರಡನೇ ಹಂತದ ನಾಯಕರ ಅಭಿಪ್ರಾಯ ಪಡೆದು ಅತ್ತಿತ್ತ ಓಡಾವಂತಾಗಿದೆ.

ಇದನ್ನೂ ಓದಿ| ಬಿಜೆಪಿ ಕಾರ್ಯಕರ್ತರ ಬಂಡಾಯದ ಮೂಲ ಏನು? ಹಿಂದು ಮುಖಂಡರು-ಚಿಂತಕರು ಏನೆನ್ನುತ್ತಾರೆ?

Exit mobile version