ಮಂಗಳೂರು: ಬಿಜೆಪಿ ಯುವ ಮುಖಂಡ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಶನಿವಾರ (ನ. ೫) ಎನ್‌ಐಎ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.
ಶನಿವಾರ ಮುಂಜಾನೆ ಎನ್‌ಐಎ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಬೆಳಗಿನ ಜಾವ ೩ ಗಂಟೆ ಹೊತ್ತಿಗೆ ದಾಳಿ ಮಾಡಿ ಬಂಧಿಸಲಾಗಿದೆ. ಈ ಮೂವರೂ ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು ಎನ್ನಲಾಗಿದೆ.
ಬೆಳ್ಳಾರೆಯ ಗ್ರಾಮ ಪಂಚಾಯಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸುಳ್ಯ ನಾವುರ ನಿವಾಸಿ ಇಬ್ರಾಹಿಂ ಷಾ ಇಬ್ಬರ ಮನೆಗೆ ಎನ್‌ಐಎ ದಾಳಿ ನಡೆಸಿದ್ದು, ಆ ವೇಳೆ ಮನೆಯಲ್ಲೇ ಇದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಶಾಫಿ ಬೆಳ್ಳಾರೆಯನ್ನು ಬಂಧನ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಕ್ಬಾಲ್ ಬೆಳ್ಳಾರೆ ಹಾಗೂ ಇಬ್ರಾಹಿಂ ಷಾರನ್ನು ಎನ್‌ಐಎ ಅಧಿಕಾರಗಳ ತಂಡವು ಪುತ್ತೂರಿಗೆ ಕರೆತಂದಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ಪೂರ್ಣವಾದ ಬಳಿಕ ಬೆಂಗಳೂರಿಗೆ ಕರೆತರಲಾಗಿದೆ.
ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ
ಜುಲೈ ೨೬ರಂದು ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಬೈಕ್‌ವೊಂದರಲ್ಲಿ ಬಂದ ಮೂವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕೊಲೆ ಸಂಬಂಧ ವ್ಯಾಪಕ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಹಲವರ ಬಂಧನವಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಂಧಿತರಿಂದ ದೊರೆತ ಮಾಹಿತಿಯನ್ನಾಧರಿಸಿ ಮತ್ತೂ ಕೆಲವರ ಬಂಧನ ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಹತ್ಯೆ | ಬೆಳ್ಳಾರೆಯ ಇಬ್ಬರು ಎಸ್‌ಡಿಪಿಐ ಮುಖಂಡರ ಬಂಧನ