Site icon Vistara News

Praveen Nettaru | ಬಂಧಿತ ಶಫೀಕ್‌, ಝಾಕಿರ್‌ ಐದು ದಿನ ಪೊಲೀಸ್‌ ಕಸ್ಟಡಿಗೆ, ಹೆಚ್ಚಿನ ವಿಚಾರಣೆ

Praveen Nettar Murder Accused zakir and Shafik

ಪುತ್ತೂರು (ದಕ್ಷಿಣ ಕನ್ನಡ): ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ಐದು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಜುಲೈ ೨೬ರಂದು ರಾತ್ರಿ ನೆಟ್ಟಾರಿನ ಚಿಕನ್‌ ಸೆಂಟರ್‌ನಲ್ಲಿದ್ದ ಪ್ರವೀಣ್‌ ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಟ್ಟಾಡಿಸಿ ಕೊಂದು ಹಾಕಿದ ಈ ಪ್ರಕರಣದಲ್ಲಿ ಹಂತಕರಿಗೆ ಸಹಾಯ ಮಾಡಿದ್ದಾರೆ, ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ಬೆಳ್ಳಾರೆಯ ಶಫೀಕ್ ಮತ್ತು ಸವಣೂರಿನ ಝಾಕೀರ್ ಎಂಬವರನ್ನು ಜುಲೈ ೨೮ರಂದು ಬಂಧಿಸಲಾಗಿತ್ತು. ಆವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಬೇಕು ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ ಅವರಿಬ್ಬರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲು ಅನುಮತಿ ನೀಡಿದೆ.

ಈ ಆರೋಪಿಗಳನ್ನು ಶನಿವಾರದಿಂದಲೇ ಜಾರಿಗೆ ಬರುವಂತೆ ಐದು ದಿನಗಳ ಕಾಲ ಪೊಲೀಸರಿಗೆ ಒಪ್ಪಿಸಲಾಗಿದೆ. ಇದೀಗ ಅವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ಅವಕಾಶ ಸಿಕ್ಕಿದೆ.‌

ಬಂಧಿತರಲ್ಲಿ ಒಬ್ಬನಾದ ಝಾಕಿರ್‌ ಎಸ್‌ಡಿಪಿಐ ಕಾರ್ಯಕರ್ತನಾಗಿದ್ದ. ಆತ ಗುತ್ತಿಗಾರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಶಫೀಕ್‌ ಪ್ರವೀಣ್‌ ಜತೆ ಉತ್ತಮ ಬಾಂಧವ್ಯ ಹೊಂದಿದ್ದವನೆ. ಶಫೀಕ್‌ನ ತಂದೆ ಪ್ರವೀಣ್‌ ನೆಟ್ಟಾರು ಅವರಿಗೆ ಸೇರಿದ ಚಿಕನ್‌ ಸೆಂಟರ್‌ನಲ್ಲಿ ಸ್ವಲ್ಪ ಸಮಯ ಕೆಲಸವನ್ನೂ ಮಾಡುತ್ತಿದ್ದರು ಎನ್ನಲಾಗಿದೆ. ಪ್ರವೀಣ್‌ ಹತ್ಯೆಯಾದ ಮರುದಿನ (ಜುಲೈ ೨೭-ಬುಧವಾರ) ಮಧ್ಯಾಹ್ನದವರೆಗೂ ಶಫೀಕ್‌ ಬೆಳ್ಳಾರೆಯಲ್ಲೇ ಇದ್ದ ಎನ್ನಲಾಗಿದೆ. ಅಂದು ಪ್ರವೀಣ್‌ ಅವರ ಶವವನ್ನು ಮನೆಗೆ ತರುವ ವೇಳೆ ನಡೆದ ಪ್ರತಿಭಟನೆಯನ್ನೂ ದೂರದಿಂದಲೇ ನೋಡುತ್ತಿದ್ದ ಎನ್ನಲಾಗಿದೆ.

ಹೆಚ್ಚಿನ ವಿಚಾರಣೆ
ಪ್ರವೀಣ್‌ ಹತ್ಯೆಯಲ್ಲಿ ಈ ಇಬ್ಬರು ಆರೋಪಿಗಳ ಪಾತ್ರ ಏನು ಎನ್ನುವುದರ ಬಗ್ಗೆ ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ, ಇವರಿಬ್ಬರೂ ಹತ್ಯೆಯಲ್ಲಿ ನೇರವಾಗಿ ಭಾಗಿಯಾದವರಲ್ಲ. ಬದಲಾಗಿ ಕೊಲೆ ಸಂಚಿನಲ್ಲಿ ಭಾಗವಹಿಸಿದ್ದವರು ಎನ್ನಲಾಗಿದೆ. ಪ್ರವೀಣ್‌ ಅವರ ಚಲನವಲನಗಳ ಮಾಹಿತಿಯನ್ನು ಹಂತಕರಿಗೆ ನೀಡುವುದು ಸೇರಿದಂತೆ ಕೊಲೆಯಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ, ಕೊಲೆಯಲ್ಲಿ ನೇರವಾಗಿ ಪಾಲ್ಗೊಂಡ ಆರೋಪಿಗಳ ಪತ್ತೆಗೆ ಇವರಿಂದ ಮಾಹಿತಿ ಪಡೆಯುವುದು ಪೊಲೀಸರಿಗೆ ಅಗತ್ಯವಾಗಿದೆ.

ಇದನ್ನೂ ಓದಿ | Praveen Nettaru |  ಹತ್ಯೆ ಆರೋಪಿಗಳಾದ ಶಫೀಕ್‌, ಝಾಕೀರ್‌ ಆ.11ರವರೆಗೆ ನ್ಯಾಯಾಂಗ ಬಂಧನಕ್ಕೆ

Exit mobile version