Site icon Vistara News

Praveen Nettaru | 8 ಗಂಟೆಯಿಂದಲೇ ಸುಳಿದಾಡುತ್ತಿದ್ದ ಹಂತಕರು, 8.40ಕ್ಕೆ ಮರ್ಡರ್‌, ಸಿಸಿಟಿವಿಯಲ್ಲಿ ದಾಖಲು

Praveen CC TV

ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರು ಅವರ ಕೊಲೆಗಾಗಿ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಎಂಟು ಗಂಟೆಯಿಂದಲೇ ಸಿದ್ಧರಾಗಿದ್ದು, ೮.೪೦ಕ್ಕೆ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದ ಸಮೀಪದ ಸಿಸಿಟಿವಿಯಲ್ಲಿ ದಾಖಲಾದ ಒಂದು ಫೂಟೇಜ್‌ ಪ್ರಕಾರ, ೮ ಗಂಟೆಯ ಹೊತ್ತಿಗೇ ಬೈಕೊಂದು ಆ ಭಾಗದಲ್ಲಿ ಸುಳಿದಾಡಲು ಆರಂಭಿಸಿದ್ದು ಕಂಡುಬಂದಿದೆ.

ಸಿಸಿಟಿವಿ ದೃಶ್ಯಗಳ ಪ್ರಕಾರ, ಬೈಕ್‌ ಸುಮಾರು ೪೦ ನಿಮಿಷಗಳ ಕಾಲ ನೆಟ್ಟಾರಿನ ಆ ರಸ್ತೆಯ ಕೆಲವೇ ಮೀಟರ್‌ಗಳ ಅಂತರದಲ್ಲಿ ಸುತ್ತಾಡಿದೆ. ತುಂಬಾ ಹೊತ್ತು ಪ್ರವೀಣ್‌ ಅವರ ಚಿಕನ್‌ ಅಂಗಡಿಯ ಎದುರು ಭಾಗದಲ್ಲಿ ಓಡಾಡಿದೆ. ಇದೀಗ ಬೆಳ್ಳಾರೆ ಪೊಲೀಸರು ಆ ಬೈಕ್‌ನ್ನು ಬೆನ್ನು ಹತ್ತಿದ್ದಾರೆ.

ಜತೆಗೆ ಇದೇ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಕೂಡಾ ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ.

ಮಂಗಳವಾರ ರಾತ್ರಿ ೮.೨೯ಕ್ಕೆ ಬೈಕೊಂದು ದೂರದಲ್ಲಿ ನಿಂತಿರುವುದನ್ನು ಕಾಣಬಹುದು.

ಸಿಸಿಟಿವಿ ದಾಖಲೆಯಲ್ಲಿ ಏನಿದೆ?
ಸಿಸಿಟಿವಿ ದಾಖಲೆ ಪ್ರಕಾರ, ಸರಿಯಾಗಿ 8 ಗಂಟೆ 1 ನಿಮಿಷ 51 ಸೆಕೆಂಡ್ ಗೆ ಬೈಕ್ ಪ್ರವೀಣ್ ಅಂಗಡಿ ಬಳಿ ಎಂಟ್ರಿಯಾಗುತ್ತದೆ, 8 ಗಂಟೆ 1 ನಿಮಿಷ 57 ಸೆಕೆಂಡ್ ಗೆ 50 ಮೀಟರ್ ದೂರದಲ್ಲಿ ನಿಂತುಕೊಳ್ಳುತ್ತದೆ. 8 ಗಂಟೆ 33 ನಿಮಿಷಕ್ಕೆ ಅಂಗಡಿ ಮುಂದೆ ಹೋಗಿ ಮತ್ತದೇ ಜಾಗದಲ್ಲಿ ಬಂದು ನಿಂತುಕೊಳ್ಳುವುದನ್ನು ಕಾಣಬಹುದು. ನಂತರ 8 ಗಂಟೆ 38 ನಿಮಿಷಕ್ಕೆ ಮತ್ತೆ ಅಂಗಡಿ ದಿಕ್ಕಿನತ್ತ ಸಾಗಿದೆ. 8 ಗಂಟೆ 40 ನಿಮಿಷಕ್ಕೆ ಸರಿಯಾಗಿ ಜನ ಅಂಗಡಿಯತ್ತ ಓಡೋಡಿ ಬರುವುದು ಕಂಡಿದೆ. ಹೀಗಾಗಿ ಇದೇ ವೇಳೆಗೆ ಕೊಲೆ ನಡೆದಿರಬಹುದು ಎಂದು ಲೆಕ್ಕ ಹಾಕಲಾಗಿದೆ.

ಇದನ್ನೂ ಓದಿ| Praveen Nettaru | ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ: ಎಸ್‌ಪಿ ಋಷಿಕೇಶ್‌ ಸೋನಾವಣೆ

Exit mobile version