ಮಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ನೇರವಾಗಿ ಕೊಲೆ ಮಾಡಿದ ಪ್ರಧಾನ ಹಂತಕರ ಸಂಪೂರ್ಣ ಜಾತಕ ನಮ್ಮ ಕೈಯಲ್ಲಿದೆ. ಅವರ ವಿಳಾಸ, ಮನೆ, ಹೆಂಡತಿ, ಮಕ್ಕಳ ವಿವರವೂ ಇದೆ. ಈಗ ಅತ್ತಿತ್ತ ಓಡಾಡಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆ. ತುಂಬ ದಿನ ಅಡಗಿಕೊಂಡಿರಲು ಸಾಧ್ಯವಿಲ್ಲ: ಹೀಗೆಂದು ಎಚ್ಚರಿಕೆ ಮತ್ತು ಮಾಹಿತಿಯ ಧ್ವನಿಯಲ್ಲಿ ಮಾತನಾಡಿದವರು ರಾಜ್ಯದ ಎಡಿಜಿಪಿ ಅಲೋಕ್ ಕುಮಾರ್.
ಬೆಳ್ಳಾರೆಯಲ್ಲಿ ಆಯೋಜನೆಗೊಂಡಿರುವ ಆರು ಜಿಲ್ಲೆಗಳ ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳಬೇಕಾಗಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳ ಜತೆ ಮಹತ್ವದ ಸಭೆಗಾಗಿ ಆಗಮಿಸಿದ್ದರು. ಈ ವೇಳೆ ಮಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.
ʻʻಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಕೇಸ್‌ನಲ್ಲಿ ಮುಖ್ಯ ಆರೋಪಿಗಳ ಬಂಧನ ಆಗಬೇಕಿದೆ. ಆರೋಪಿಗಳ ದಸ್ತಗಿರಿಗೆ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಇದರಲ್ಲಿ ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಚರ್ಚೆ ಆಗಲಿದೆʼʼ ಎಂದು ಹೇಳಿದರು.
ಆಸ್ತಿ ಮುಟ್ಟುಗೋಲಿಗೆ ಕ್ರಮ
ʻʻಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಯಾರನ್ನೂ ಬಿಡುವುದಿಲ್ಲ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ. ಕೋರ್ಟ್ ಮೂಲಕ ವಾರಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆʼʼ ಎಂದು ಅವರು ತಿಳಿಸಿದರು.
ಹಂತಕರ ಎಲ್ಲ ಮಾಹಿತಿ ಇದೆ
ʻʻಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಅವರ ಫೋಟೊ,ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆಗಾಗ ಅವರಿರುವ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆʼʼ ಎಂದು ಎಡಿಜಿಪಿ ತಿಳಿಸಿದರು.
ಆರೋಪಿಗಳಿಗೆ ಪಿಎಫ್‌ಐ ಲಿಂಕ್
ಪ್ರವೀಣ್ ಕೊಲೆ ಆರೋಪಿಗಳಲ್ಲಿ ಕೆಲವರಿಗೆ ಪಿಎಫ್‌ಐ ಜತೆಗೆ ಲಿಂಕ್ ಇದೆ. ನಾವು ದಾಖಲೆ ಇಲ್ಲದೆ ಮಾತನಾಡುವುದಿಲ್ಲ. ಅವರ ಲಿಂಕ್ ಬಗ್ಗೆ ತನಿಖೆ ನಡೆಸಿ ಯಾರಿಗೆಲ್ಲ ಪಿಎಫ್‌ಐ ಲಿಂಕ್ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇವೆ ಎಂದು ನುಡಿದ ಎಡಿಜಿಪಿ, ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ಈಗಲೇ ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು.
ಕೊಲೆಗೆ ನಿರ್ದೇಶನ ಯಾರದು?
ʻʻಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದಾರೆ. ಅವರಿಗೆ ನಿರ್ದೇಶನ ಕೊಟ್ಟಿರೋದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆʼʼ ಎಂದು ಹೇಳಿದರು ಅಲೋಕ್ ಕುಮಾರ್.
ಬೆಳ್ಳಾರೆಯಲ್ಲಿ ಆಯೋಜಿಸಿರುವ ಸಭೆಯಲ್ಲಿ ಎನ್‌ಐಎ ಅಧಿಕಾರಿಗಳು ಮತ್ತು ಅವರ ಜತೆಗೆ ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಎಸ್ಪಿಗಳು ಭಾಗವಹಿಸಿದ್ದಾರೆ.
ಇದನ್ನೂ ಓದಿ| ಪ್ರವೀಣ್ ನೆಟ್ಟಾರು ಕೊಲೆ: ಏಳನೇ ಆರೋಪಿ ಸೆರೆ, ಜಟ್ಟಿಪಳ್ಳದ ಕಬೀರ್ ಪಾತ್ರವೇನು?