ಪುತ್ತೂರು: ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ಳಾರೆ ನಿವಾಸಿಯಾಗಿರುವ ಈ ವ್ಯಕ್ತಿ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಮಂಗಳವಾರ ರಾತ್ರಿ ೯ ಗಂಟೆಯ ಹೊತ್ತಿಗೆ ನೆಟ್ಟಾರಿನಲ್ಲಿರುವ ತಮ್ಮ ಚಿಕನ್ ಸೆಂಟರ್‌ನ ಬಾಗಿಲು ಮುಚ್ಚಿ ಹೊರಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಪ್ರವೀಣ್ ಅವರನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದರು.
ಬೈಕ್‌ನಲ್ಲಿ ಬಂದ ಮೂವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಉಳಿದ ಇಬ್ಬರ ಬಗ್ಗೆಯೂ ಮಾಹಿತಿ ಇದ್ದು ಅವರು ಕೇರಳದವರು ಎಂದು ತಿಳಿದುಬಂದಿದೆ.
ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಂಧನವನ್ನು ಇನ್ನೂ ದೃಢೀಕರಿಸಿಲ್ಲ.
ಪ್ರವೀಣ್ ಕೊಲೆಗೆ ಸಂಬಂಧಿಸಿ ಪೊಲೀಸರು ಈಗಾಗಲೇ ಹತ್ತಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ನಡುವೆ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಲಾಗಿದೆ.