ಬೆಂಗಳೂರು: ಹಿಂದು ಕಾರ್ಯಕರ್ತ ಮಂಗಳೂರಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ (Praveen Nettaru murder) ಪ್ರಕರಣದ ಪ್ರಮುಖ ಆರೋಪಿ ನಿಷೇಧಿತ ಪಿಎಫ್‌ಐ ಸಂಘಟನೆಯ ಮೋಸ್ಟ್ ವಾಂಟೆಡ್ ಮುಖಂಡ, ಮಡಿಕೇರಿ ಮೂಲದ ತುಫೈಲ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದೇ ಒಂದು ರೋಚಕವಾದರೆ, ಆತ ಮನೆಯಲ್ಲಿ ಇದ್ದಿದ್ದು ಮನೆ ಮಾಲೀಕರಿಗೇ ಗೊತ್ತಿಲ್ಲ ಎಂಬ ಸಂಗತಿ ಈಗ ಬಯಲಾಗಿದೆ!
ರಾಜ್ಯವಿಡೀ ಸುದ್ದಿಯಾಗಿದ್ದ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಈತನ ಸುಳಿವು ಕೊಟ್ಟವರಿಗೆ ಪೊಲೀಸರು 5 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಿದ್ದರು. ಈತನಿಗಾಗಿ ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಹುಡುಕಾಟ ನಡೆಸಲಾಗಿತ್ತು. ಆದರೆ, ಯಾರ ಕಣ್ಣಿಗೂ ಬೀಳದೆ ಆರಾಮವಾಗಿ ಓಡಾಡಿಕೊಂಡಿದ್ದ ಎಂದು ಈಗ ತಿಳಿದುಬಂದಿದೆ. ಈಗ ನಿಖರ ಮಾಹಿತಿ ಮೇರೆಗೆ ಎನ್‌ಐಎ ದಾಳಿ ಮಾಡಿದ್ದರಿಂದ ಆತ ಸಿಕ್ಕಿಬಿದ್ದಿದ್ದಾನೆ.
ತುಫೈಲ್ ಇದ್ದಿದ್ದೇ ಗೊತ್ತಿಲ್ಲವೆಂದ ಮನೆ ಮಾಲೀಕ
ಮಹಮ್ಮದ್ ಶಫಿ ಎಂಬಾತ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಆತ ಬಾಡಿಗೆಗೆ ಪಡೆದುಕೊಂಡು 2 ವರ್ಷವಾಗಿದೆ. ಪ್ರತಿ ಬಾರಿಯೂ ಶಫಿಯೇ ಮನೆ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದ. ಫ್ಯಾಮಿಲಿಯವರು ಇರುತ್ತೇವೆ ಎಂದು ಬಾಡಿಗೆಗೆ ಪಡೆದುಕೊಂಡಿದ್ದ. ಆದರೆ, ಹೆಂಡತಿ ಡೆಲಿವರಿಗಾಗಿ ಊರಿನಲ್ಲಿರುವುದಾಗಿ ಹೇಳಿದ್ದಾರೆ. ಇಲ್ಲಿ ಬ್ಯುಸಿನೆಸ್ ಮಾಡಿಕೊಂಡಿರುವುದಾಗಿ ಹೇಳಿದ್ದರು. ಆದರೆ, ತುಫೈಲ್ ಇಲ್ಲಿಗೆ ಬಂದಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಮನೆ ಮಾಲೀಕ ನಂಜುಡಪ್ಪ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಮಹಮ್ಮದ್ ಶಫಿ ಸೋಮವಾರಪೇಟೆ ನಿವಾಸಿಯಾಗಿದ್ದಾನೆ.
6 ತಿಂಗಳಿಂದ ವಾಸ?
ಅಮೃತಹಳ್ಳಿಯ ದಾಸರಹಳ್ಳಿಯ ಭುವನೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿಬಿದ್ದಿರುವ ತುಫೈಲ್ ಕಳೆದೆರಡು ತಿಂಗಳಿನಿಂದ ವಾಸವಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿನ ಮನೆಯಲ್ಲಿ ಈತ ವಾಸವಿದ್ದ. ಆದರೆ, ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವು ಈತನನ್ನು ನೋಡಿದ್ದೇ ಕಡಿವೆ. ಸುಮಾರು ಎರಡು ತಿಂಗಳಿನಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಮಾಹಿತಿಗಳ ಪ್ರಕಾರ ಆರು ತಿಂಗಳಿನಿಂದ ವಾಸವಾಗಿದ್ದಾನೆ ಎನ್ನಲಾಗಿದೆ.
ಉಳಿದ ಆರೋಪಿಗಳಿಗಾಗಿ ಶೋಧ
ಸದ್ಯ ತುಫೈಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಇನ್ನುಳಿದ ಮೂವರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರಿಸಿದ್ದಾರೆ. ಮಹಮ್ಮದ್ ಮುಸ್ತಾಫ್ ಪತ್ತೆಗಾಗಿ 5 ಲಕ್ಷ ರೂ., ಉಮ್ಮರ್ ಫಾರೂಖ್‌ಗೆ 2 ಲಕ್ಷ ರೂ., ಅಬೂಬಕರ್ ಸಿದ್ದಿಕ್‌ಗೆ 2 ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದೆ. ನಾಲ್ವರೂ ನಿಷೇಧಿತ ಸಂಘಟನೆ ಪಿಎಫ್‌ಐನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಅಡಗಲು ಅಚ್ಚುಕಟ್ಟು ತಾಣವನ್ನೇ ಆಯ್ದುಕೊಂಡಿದ್ದ ತುಫೈಲ್
ತುಫೈಲ್ ಅಡಗಿ ಕೂರಲು ಅಚ್ಚುಕಟ್ಟು ತಾಣವನ್ನೇ ಆಯ್ದುಕೊಂಡಿದ್ದ. ನೆಟ್ಟಾರು ಹತ್ಯೆಗೆ ಮೊದಲೇ ಮಹಮ್ಮದ್ ಶಫಿಗೆ ತುಫೈಲ್ ಪರಿಚಿತನಾಗಿದ್ದ ಎನ್ನಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಇಲ್ಲದಿರುವುದನ್ನು ಗಮನಿಸಿಕೊಂಡಿದ್ದ ಈತ ಜನರ ಓಡಾಟ ಕಡಿಮೆ ಇರುವುದನ್ನು ಗಮನಿಸಿಕೊಂಡಿದ್ದ. ತನ್ನ ಚಲನವಲನಗಳು ಎಲ್ಲಿಯೂ ತಿಳಿಯದಂತೆ ಸಾಕಷ್ಟು ಮುನ್ನೆಚ್ಚರಿಗೆ ವಹಿಸಿಕೊಂಡಿದ್ದ.
ನೆಟ್ಟಾರು ಕೊಲೆ ಬಳಿಕ ಅಲ್ಲಲ್ಲಿ ಅಡ್ಡಾಡಿ ಮಹಮ್ಮದ್ ಶಫಿ ಮನೆಯಲ್ಲಿ ಅಡಗಿದ್ದ ಎಂದು ಹೇಳಲಾಗುತ್ತಿದೆ. ತುಫೈಲ್ ಬಂದ ನಂತರ ಶಫಿ ತನ್ನ ಹೆಂಡತಿಯನ್ನು ತವರಿಗೆ ಕಳಿಸಿದ್ದ ಎನ್ನಲಾಗಿದೆ. ತುಫೈಲ್‌ಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಶಫಿ ಮಾಡಿಕೊಡ್ಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Praveen Nettaru Murder: ಪ್ರವೀಣ್ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!
ಟ್ರೇಗಟ್ಟಲೆ ಮೊಟ್ಟೆ, ವಾರಕ್ಕೆ ಬೇಕಾದ ಮಟನ್ ಸೇರಿ ಬೇಕಿದ್ದ ಆಹಾರ ಸಾಮಗ್ರಿಯನ್ನು ಶಫಿಯೇ ಪೂರೈಕೆ ಮಾಡುತ್ತಿದ್ದ. ತುಫೈಲ್ ಕೊಲೆ ಆರೋಪಿ ಎಂದು ತಿಳಿದಿದ್ದರೂ ಮಹಮ್ಮದ್ ಶಫಿ ರಕ್ಷಣೆ ನೀಡಿದ್ದ. ಆತನ ರಕ್ಷಣೆಯಲ್ಲಿಯೇ ಕಳೆದ 6 ತಿಂಗಳಿನಿಂದ ವಾಸ ಮಾಡಿದ್ದಾನೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈಗ ಕೊಲೆ ಆರೋಪಿಗೆ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಮಹಮ್ಮದ್ ಶಫಿ ಮೇಲೆಯೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಮ್ಮದ್ ಶಫಿ ಸಹ ಎಸ್ಕೇಪ್ ಆಗಿದ್ದಾನೆ. ಆತನಿಗೂ ಶೋಧ ಕಾರ್ಯ ಮುಂದುವರಿದಿದೆ.
ತುಫೈಲ್‌ಗೆ ನಾನು ಮನೆ ಬಾಡಿಗೆ ಕೊಟ್ಟಿರಲಿಲ್ಲ- ಮನೆ ಮಾಲೀಕ ಮಾತನಾಡಿದ ವಿಡಿಯೊ ಇಲ್ಲಿದೆ
ಏನಿದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ?
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ನಿಷೇಧಿತ ಪಿಎಫ್‌ಐ ಸಂಘಟನೆಯ ಹಲವರು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಇವರನ್ನು ಹತ್ಯೆ ಮಾಡಲು ಸುಳ್ಯ ಮತ್ತು ಬೆಳ್ಳಾರೆಯ ಪಿಎಫ್‌ಐ ಸದಸ್ಯರು ಸ್ಕೆಚ್ ಹಾಕಿದ್ದರು. ಅದರಂತೆ ಬೆಳ್ಳಾರೆಯಲ್ಲಿ ಜುಲೈ 26ರ ರಾತ್ರಿ ಕೊಲೆ ಮಾಡಿದ್ದರು.
ಪ್ರಕರಣದ ಆರೋಪಿಗಳು ಯಾರ್ಯಾರು?
ಸುಳ್ಯ ಪಟ್ಟಣದ ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ್, ಪಾಲ್ತಾಡಿಯ ರಿಯಾಜ್, ಸುಳ್ಯ ತಾಲೂಕಿನ ಮುಸ್ತಫಾ ಪೈಚರ್, ನೆಕ್ಕಿಲಾಡಿಯ ಮಸೂದ್ ಕೆ.ಎ., ಬಂಟ್ವಾಳದ ಕೊಡಾಜೆ ಮೊಹಮ್ಮದ್ ಶೆರಿಫ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್, ಸುಳ್ಯ ತಾಲೂಕಿನ ನೌಫಾಲ್ ಎಂ., ಬೆಳ್ಳಾರೆ ಗ್ರಾಮದ ಇಸ್ಮಾಯಿಲ್ ಶಫಿ ಕೆ., ಶೇಖ್ ಸದ್ದಾಂ ಹುಸೇನ್, ಎನ್. ಅಬ್ದುಲ್ ಹ್ಯಾರಿಸ್ ಮತ್ತು ಕೆ. ಮೊಹಮ್ಮದ್ ಇಕ್ಬಾಲ್, ಬೆಳ್ಳಾರೆಯ ಮೊಹಮ್ಮದ್ ಶಫೀಕ್, ಮಂಗಳಂತಿಯ ಶಹೀದ್ ಎಂ., ಸುಳ್ಯದ ಉಮ್ಮರ್ ಫಾರೂಕ್ ಎಂಆರ್, ಅಬ್ದುಲ್ ಕಬೀರ್, ನೆಲ್ಲೂರು ಕೆಮ್ರಾಜೆ ಗ್ರಾಮದ ಮುಹಮ್ಮದ್ ಇಬ್ರಾಹಿಂ ಶಾ, ನಾವೂರ್‌ನ ಸೈನುಲ್ ಅಬಿದ್ ವೈ, ಸವಣೂರಿನ ಝಕಿಯಾರ್ ಎ., ಮಡಿಕೇರಿಯ ತುಫೈಲ್ ಎಂ.ಎಚ್. ಪ್ರಕರಣದ ಆರೋಪಿಗಳಾಗಿದ್ದಾರೆ.
ಇಷ್ಟು ಜನ ಆರೋಪಿಗಳಲ್ಲಿ ಮುಸ್ತಫಾ ಪೈಚರ್, ಮಸೂದ್ ಕೆ.ಎ., ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕಿ, ಉಮ್ಮರ್ ಫಾರೂಕ್ ಎಂ.ಆರ್. ತಲೆಮರೆಸಿಕೊಂಡಿದ್ದ ಆರೋಪಿಗಳಾಗಿದ್ದಾರೆ. ಈಗ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಲು ಎನ್‌ಐಎ ಮುಂದಾಗಿದೆ.
ಇದನ್ನೂ ಓದಿ: BJP Politics: ಬಿಜೆಪಿಯಲ್ಲಿ ಸಂಸದ ವರ್ಸಸ್ ಶಾಸಕ: ಈರಣ್ಣ ಕಡಾಡಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120ಬಿ (ಅಪರಾಧ ಸಂಚಿನ ಶಿಕ್ಷೆ), 153ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದನೆ), 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಅನೇಕ ವ್ಯಕ್ತಿಗಳು ನಡೆಸಿರುವ ಕೃತ್ಯ), ಯುಎಪಿಎ ಕಾಯ್ದೆಯ 16, 18 ಮತ್ತು 20ನೇ ಸೆಕ್ಷನ್‌ಗಳು, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 15 (1) (a) ಅಡಿ ಪ್ರಕರಣ ದಾಖಲು ಮಾಡಲಾಗಿದೆ.