Site icon Vistara News

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಇನ್ನೂ ಎನ್‌ಐಎಗೆ ಹಸ್ತಾಂತರವಾಗಿಲ್ಲ, ಪೊಲೀಸರಿಂದಲೇ ತನಿಖೆ: ಎಡಿಜಿಪಿ

alok kumar

ಬೆಳ್ಳಾರೆ(ಸುಳ್ಯ ತಾಲೂಕು): ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣವನ್ನು ಇನ್ನೂ ಎನ್‌ಐಎಗೆ ಹಸ್ತಾಂತರಿಸಲಾಗಿಲ್ಲ. ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಮೋಹನ್‌ ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ತನಿಖೆಯನ್ನು ಎನ್ಐಎಗೆ ವಹಿಸಿದ್ದರೂ ಅದಿನ್ನೂ ಹಸ್ತಾಂತರವಾಗಿಲ್ಲ. ಈಗಲೂ ಕರ್ನಾಟಕ ಪೊಲೀಸರೇ ತನಿಖೆ ಮಾಡುತ್ತಿದ್ದಾರೆ. ಎನ್ ಐಎಗೆ ಹಸ್ತಾಂತರ ಆದ ತಕ್ಷಣ ಅವರು ಬಂದು ಮಾಹಿತಿ ಪಡೀತಾರೆ. ನಾವು ಈಗಾಗಲೇ ಎನ್ಐಎ ಸಂಪರ್ಕದಲ್ಲಿದ್ದು, ನಾವು ಅವರಿಗೆ ಮಾಹಿತಿ ನೀಡುತ್ತಿದ್ದೇವೆ. ಎನ್ ಐಎ ಹಾಗೂ ಬೇರೆ ಕೇಂದ್ರಿಯ ತನಿಖಾ ದಳದ ಜೊತೆಗೂ ಪ್ರವೀಣ್ ಕೊಲೆ ಪ್ರಕರಣದ ಮಾಹಿತಿ ಹಂಚಿದ್ದೇವೆ ಎಂದು ಹೇಳಿದರು.

ʻʻನಾನು ಪ್ರವೀಣ್ ನೆಟ್ಟಾರು ಮತ್ತು ಕಳಂಜ ಮಸೂದ್ ಪ್ರಕರಣದ ತನಿಖೆ ಮಾಹಿತಿ ಪಡೆದಿದ್ದೇನೆ. ಸಂಗ್ರಹಿಸಿದ ಸಾಕ್ಷ್ಯ, ವಶಕ್ಕೆ ಪಡೆದ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲಾಗಿದೆʼʼ ಎಂದು ತಿಳಿಸಿದ ಅವರು, ನಮಗೆ ಪ್ರವೀಣ್ ಕೇಸ್‌ನಲ್ಲಿ ಭಾಗಿಯಾದವರ ಸುಳಿವು ಸಿಕ್ಕಿದೆ. ಸದ್ಯ ಪ್ರಮುಖ ಆರೋಪಿಗಳು ಅವರ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅವರು ನಮಗೆ ತುಂಬಾ ಹತ್ತಿರ ಇದ್ದಾರೆ. ಶೀಘ್ರವೇ ಹಿಡಿಯುತ್ತೇವೆʼʼ ಎಂದು ಹೇಳಿದರು ಅಲೋಕ್‌ ಮೋಹನ್‌.

ನಾಳೆಯಿಂದ ಕರ್ಫ್ಯೂ ಸ್ವಲ್ಪ ವಿನಾಯಿತಿ
ದ.ಕ ಜಿಲ್ಲೆಯಲ್ಲಿ ಶುಕ್ರವಾರದಿಂದ ನೈಟ್ ಕರ್ಪ್ಯೂನಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದೆ. ಇದುವರೆಗೆ ನೈಟ್‌ ಕರ್ಫ್ಯೂ ಸಂಜೆ ಆರು ಗಂಟೆಯಿಂದೇ ಜಾರಿಗೆ ಬರುತ್ತಿದ್ದರೆ ನಾಳೆಯಿಂದ ೯ ಗಂಟೆ ಬಳಿಕ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ. ಇದರಿಂದಾಗಿ ವ್ಯಾಪಾರ ಮುಂಗಟ್ಟುಗಳು, ಸಂಚಾರಕ್ಕೆ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ತೆರೆದಿರಲಿದೆ. ಆದರೆ, ಮದ್ಯದಂಗಡಿಗಳಿಗೆ ಸಂಜೆ ಆರು ಗಂಟೆವರೆಗೆ ಮಾತ್ರ ಅವಕಾಶ. ಈ ಆದೇಶ ಆಗಸ್ಟ್‌ ೫ರಿಂದ ಮೂರು ದಿನಗಳ ಕಾಲ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ| Praveen Murder ಬಳಿಕ ಕ್ಷೇತ್ರದಲ್ಲಿ ಓಡಾಡಲೂ ಹಿಂದೇಟು ಹಾಕುತ್ತಿರುವ ಬಿಜೆಪಿ ಶಾಸಕರು, ಮಂತ್ರಿಗಳು!

Exit mobile version