ಬೆಂಗಳೂರು: ಕಳೆದ ಜುಲೈ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಉದ್ಯಮಿ, ಬಿಜೆಪಿ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ((Praveen Nettaru murder) ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇಬ್ಬರು ಪಿಎಫ್‌ಐ ಮುಖಂಡರಿಗಾಗಿ ಶೋಧ ಮುಂದುವರಿದಿದೆ.
ಕೊಡಾಜೆ ಮಹಮ್ಮದ್ ಷರೀಫ್ ಹಾಗೂ ನೆಕ್ಕಿಲಾಡಿ ಮಸೂದ್‌ಗಾಗಿ ಎನ್‌ಐಎ ಕಳೆದ ಕೆಲವು ತಿಂಗಳುಗಳಿಂದಲೇ ಶೋಧ ನಡೆಸುತ್ತಿದೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಅದು ಈ ಇಬ್ಬರ ಮಾಹಿತಿ ನೀಡಿದವರಿಗೆ ತಲಾ ಐದು ಲಕ್ಷ ರೂ. ಬಹುಮಾನ ಕೊಡುವುದಾಗಿ ಘೋಷಿಸಿದೆ.
ಕೊಡಾಜೆ ಮಹಮ್ಮದ್ ಷರೀಫ್ ಮತ್ತು ನೆಕ್ಕಿಲಾಡಿಯ ಮಸೂದ್ ಘಟನೆ ಬಳಿಕ ತಲೆಮರೆಸಿಕೊಂಡಿದ್ದರು. ಅವರ ಮನೆ ಮತ್ತು ಇತರ ಜಾಗಗಳಲ್ಲಿ ಹುಡುಕಾಡಿದರೂ ಫಲ ನೀಡಿಲ್ಲ. ಹೀಗಾಗಿ ಎನ್‌ಐಎ ವಾಂಟೆಡ್ ಪೋಸ್ಟರ್ ಅಭಿಯಾನ ಶುರು ಮಾಡಲಾಗಿದೆ.
ಮಹಮ್ಮದ್ ಷರೀಫ್ ಪಿಎಫ್ಐ ಸಂಘಟನೆ ಕಾರ್ಯಕಾರಣಿ ಸದಸ್ಯನಾಗಿದ್ದರೆ, ಮಸೂದ್ ಕೂಡಾ ಜವಾಬ್ದಾರಿ ಹೊಂದಿದ್ದಾನೆ. ಸ್ಥಳೀಯ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಈ ಆರೋಪಿಗಳು ಇನ್ನೂ ಸಿಕ್ಕಿಲ್ಲ. ಹೀಗಾಗಿ ಇಡೀ ರಾಜ್ಯಾದ್ಯಂತ ಆರೋಪಿಗಳ ಪತ್ತೆಗೆ ವಾಂಟೆಡ್ ಪೋಸ್ಟರ್ ವಿತರಣೆ ಮಾಡಲಾಗಿದೆ. ಎಲ್ಲೆಲ್ಲಿ ಪಿಎಫ್ಐ ಕಚೇರಿಗಳಿವೆಯೋ ಆ ಭಾಗದಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿದೆ.
ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಗೆ ಪೋಸ್ಟರ್ ಗಳ ರವಾನೆ ಮಾಡಲಾಗಿದೆ. ಆಯಾ ಡಿಸಿಪಿ ಕಚೇರಿ, ಎಸ್ಪಿ ಕಚೇರಿಗಳು ಎಸಿಪಿ, ಪೊಲೀಸ್ ಠಾಣೆಗಳಿಗೆ ರವಾನೆ ಮಾಡಲಾಗಿತ್ತು, ಬಸ್ ಸ್ಟಾಂಡ್ ಸೇರಿದಂತೆ ಪ್ರಮುಖ ಜಾಗಗಳಲ್ಲಿ ಇವುಗಳನ್ನು ಹಾಕುವಂತೆ ಸೂಚಿಸಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ೧೫ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಮತ್ತು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ | Praveen Nettaru murder | ಮಸೂದ್ ಹತ್ಯೆ ಪ್ರತೀಕಾರಕ್ಕೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಎನ್‌ಐಎ ತನಿಖೆ