ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (praveen nettaru) ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ- ಎಸ್‌ಡಿಪಿಐ ಕೈವಾಡದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಮುಂಜಾನೆ ಸಂಘಟನೆಯ ರಾಷ್ಟ್ರೀಯ ನಾಯಕನ ಮನೆಗೆ ದಾಳಿ ನಡೆಸಿ ತನಿಖೆ ನಡೆಸಿತು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮನೆಗೆ ಗುರುವಾರ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದರು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಪರ್ಲಿಯಾ ಎಂಬಲ್ಲಿರುವ ರಿಯಾಜ್ ನಿವಾಸಕ್ಕೆ ಬಂಟ್ವಾಳ ಪೊಲೀಸರ ನೆರವು ಪಡೆದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದರು. ರಿಯಾಜ್ ಮೊಬೈಲ್ ವಶಕ್ಕೆ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸಿದರು.
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಾನಾ ಕಡೆ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿರುವ ಎನ್‌ಐಎ, ದಾಳಿ ಮುಂದುವರಿಸಿದೆ. ಮಂಗಳವಾರ, ಬುಧವಾರ ಕೂಡ ದಕ್ಷಿಣ ಕನ್ನಡ ಜಿಲ್ಲೆಯ 33 ಕಡೆ ದಾಳಿ ನಡೆಸಿ ಪರಿಶೀಲಿಸಲಾಗಿತ್ತು. ಪ್ರಕರಣದಲ್ಲಿ ಪಿಎಫ್‌ಐ ಕೈವಾಡವಿದೆ ಎಂದು ಎನ್‌ಐಎ ಬುಧವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿತ್ತು. ಇದೀಗ ಎಸ್‌ಡಿಪಿಐ ಕೈವಾಡದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆಯಲ್ಲಿ ಪಿಎಫ್‌ಐ ಕೈವಾಡದ ಕಡೆಗೆ ಬೊಟ್ಟು ಮಾಡಿದ ಎನ್‌ಐಎ