Site icon Vistara News

ಪ್ರವೀಣ್‌ ನೆಟ್ಟಾರು ಕೊಲೆ: ಏಳನೇ ಆರೋಪಿ ಸೆರೆ, ಜಟ್ಟಿಪಳ್ಳದ ಕಬೀರ್‌ ಪಾತ್ರವೇನು?

Praveen Nettaru

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರು ಪೊಲೀಸರು ಏಳನೇ ಆರೋಪಿಯನ್ನು ಬಂಧಿಸಿದ್ದಾರೆ. ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ ಸಿ.ಎ(33) ಬಂಧಿತ ಆರೋಪಿ.

ಜುಲೈ ೨೬ರಂದು ರಾತ್ರಿ ೮ ಗಂಟೆಯ ಹೊತ್ತಿಗೆ ಬೆಳ್ಳಾರೆಯ ತಮ್ಮ ಚಿಕನ್‌ ಸೆಂಟರ್‌ನಲ್ಲಿದ್ದ ಪ್ರವೀಣ್‌ ನೆಟ್ಟಾರು ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದರು. ಹಿಂದು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ, ಜನಾನುರಾಗಿಯಾಗಿದ್ದ ಪ್ರವೀಣ್‌ ಹತ್ಯೆ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ತಕ್ಷಣವೇ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಜುಲೈ ೨೮ರಂದು ಬೆಳ್ಳಾರೆ ಶಫೀಕ್‌ ಮತ್ತು ಸವಣೂರಿನ ಮಹಮ್ಮದ್‌ ಝಾಕಿರ್‌ ಎಂಬವರನ್ನು ಬಂಧಿಸಿದ್ದರು. ಆದರೆ, ಇವರು ಕೊಲೆ ಮಾಡಿದವರಲ್ಲ, ಕೊಲೆಗೆ ಸಹಕಾರ ನೀಡಿದವರು ಎಂದು ಆಗಲೇ ಹೇಳಲಾಗಿತ್ತು.

ಈ ನಡುವೆ ಕೊಲೆ ಮಾಡಿದ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಬಂದಿತ್ತು. ಅದಕ್ಕೆ ಪೂರಕವಾಗಿ ಕೇರಳದ ಪೊಲೀಸರ ಸಹಕಾರ ಪಡೆದು ಬಲೆ ಬೀಸಲಾಗಿದೆಯಾದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಇದೇ ವೇಳೆ ಆಗಸ್ಟ್‌ ೧ರಂದು ಪಲ್ಲಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಸುಳ್ಯದ ಹ್ಯಾರಿಸ್‌ ಎಂಬವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸಕ್ಕೆ ಇದ್ದ ಇವರು ಕೊಲೆ ನಡೆದ ದಿನ ಬೆಳ್ಳಾರೆಯಲ್ಲಿದ್ದರು ಎಂದು ಹೇಳಲಾಗಿತ್ತು.

ಅಗಸ್ಟ್ ೭ರಂದು ಸುಳ್ಯದ ನಾವೂರು ನಿವಾಸಿ ಅಬೀದ್(22) ಮತ್ತು ಬೆಳ್ಳಾರೆ ನಿವಾಸಿ ನೌಫಲ್(28) ನನ್ನು ಬಂಧಿಸಲಾಗಿತ್ತು. ಇದರಲ್ಲಿ ಅಬೀದ್‌ ಕೇರಳದ ತಲಶ್ಶೇರಿಯಲ್ಲಿದ್ದ. ಈತ ಮೊದಲು ಬಂಧಿತನಾದ ಶಫೀಕ್‌ ಜತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಜತೆಗೆ ಕೇರಳದ ಕೆಲವು ಧಾರ್ಮಿಕ ಸಂಘಟನೆಗಳ ಜತೆಗೂ ಇವನ ನಂಟಿತ್ತು ಎನ್ನಲಾಗಿದೆ. ಈ ಇಬ್ಬರು ಆರೋಪಿಗಳಿಗೆ ಪಿಎಫ್‌ಐ ಜತೆಗೆ ಸಂಬಂಧವಿದೆ ಎಂದು ಹೇಳಲಾಗಿದೆ.

ಇದೀಗ ಏಳನೇ ಆರೋಪಿಯಾಗಿ ಅಬ್ದುಲ್ ಕಬೀರ್ ಸಿ.ಎ(33) ನನ್ನು ಬಂಧಿಸಲಾಗಿದೆ. ಕೊಲೆಯಲ್ಲಿ ಈತನ ಪಾಲುದಾರಿಕೆ ಏನು ಎನ್ನುವುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ಈತನೂ ಜುಲೈ ೨೬ರಂದು ಬೆಳ್ಳಾರೆಗೆ ಬಂದು ಕೊಲೆ ಮಾಡಿ ಹೋದ ಮೂವರು ದುಷ್ಕರ್ಮಿಗಳಿಗೆ ಸಹಕಾರ ನೀಡಿರುವ ಸಾಧ್ಯತೆಗಳಿವೆ. ಕೊಲೆ ಮಾಡಿ ಪರಾರಿಯಾದ ಆರೋಪಿಗಳ ಪತ್ತೆಗೆ ಈತನಿಂದ ಮಾಹಿತಿ ಸಿಗಬಹುದು ಎನ್ನುವ ನಿರೀಕ್ಷೆ ಇದೆ.

ಇದನ್ನೂ ಓದಿ| Praveen Nettaru | ಆರೋಪಿಗಳನ್ನು ಸುಳ್ಯದ ಪಿಎಫ್‌ಐ ಕಚೇರಿಗೆ ಕರೆತಂದು ಮಹಜರು

Exit mobile version