ಮಂಗಳೂರು: ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಪೊಲೀಸರು ಮೂವರು ಪ್ರಧಾನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಪ್ರವೀಣ್ ಅವರನ್ನು ಜುಲೈ ೨೬ರಂದು ರಾತ್ರಿ ೮ ಗಂಟೆಯ ಹೊತ್ತಿಗೆ ಬೈಕ್‌ನಲ್ಲಿ ಬಂದು ತಲವಾರಿನಿಂದ ಕಡಿದು ಕೊಂದ ಪ್ರಧಾನ ಹಂತಕರೇ ಇವರೆಂದು ಹೇಳಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇವರ ಹೆಸರು ಶಿಯಾಬ್, ರಿಯಾಜ್, ಬಶೀರ್.
ಪೊಲೀಸರು ಈ ಮಾಹಿತಿಯನ್ನು ಅಧಿಕೃತಗೊಳಿಸಿಲ್ಲ. ಮಧ್ಯಾಹ್ನ ೧೨.೩೦ಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪತ್ರಿಕಾಗೋಷ್ಠಿ ಕರೆದಿದ್ದು ಅದರಲ್ಲಿ ಇದನ್ನು ಬಹಿರಂಗಗೊಳಿಸುತ್ತಾರೆ ಎಂದು ಹೇಳಲಾಗಿದೆ.
ಎಡಿಜಿಪಿ ಅಲೋಕ್ ಕುಮಾರ್ ಅವರು ಬುಧವಾರ ಬೆಳ್ಳಾರೆ ಠಾಣೆಯಲ್ಲಿ ಎನ್‌ಐಎ ಅಧಿಕಾರಿಗಳು ಮತ್ತು ಆರು ಜಿಲ್ಲೆಗಳ ಎಸ್ಪಿಗಳ ಸಭೆಯನ್ನು ನಡೆಸಿ ಹಂತಕರು ಎಲ್ಲಿದ್ದರೂ ಬಂಧಿಸುವ ಬಗ್ಗೆ ಸ್ಪಷ್ಟ ದನಿಯಲ್ಲಿ ಮಾತನಾಡಿದ ಬೆನ್ನಿಗೇ ಈ ಬಂಧನ ನಡೆದಿದೆ.
ಕೊಲೆಗೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಇವರ್ಯಾರೂ ಕೊಲೆ ಮಾಡಿದವರಲ್ಲ. ನಿಜವಾಗಿ ಕೊಲೆ ಮಾಡಿದ ಹಂತಕರು ಇನ್ನಷ್ಟೇ ಸಿಗಬೇಕಾಗಿದೆ. ಅವರು ಯಾರು ಎನ್ನುವುದು ಗೊತ್ತಿದೆ. ಅವರ ಮನೆ ವಿಳಾಸ, ತಂದೆ-ತಾಯಿ, ಹೆಂಡತಿ, ಮಕ್ಕಳು ಎಲ್ಲ ವಿವರ ಗೊತ್ತಿದೆ. ಅವರು ಅಡಗುದಾಣಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ಹಿಡಿಯುವುದು ಇಲ್ಲಿವರೆಗೆ ಕಷ್ಟವಾಗಿದೆ. ಅವರು ಇನ್ನು ಹೆಚ್ಚು ದಿನ ಅಡಗಿಕೊಂಡಿರಲು ಸಾಧ್ಯವಿಲ್ಲ. ಎಲ್ಲಿದ್ದರೂ ಹುಡುಕಿ ತರುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಗುಡುಗಿದ್ದರು. ಮಾತ್ರವಲ್ಲ, ಆರೋಪಿಗಳ ಮನೆ, ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಿದ್ದರು. ಇದಾದ ಒಂದೇ ರಾತ್ರಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಸಹಕರಿಸಿದ ಏಳು ಮಂದಿ ಬಂಧನ
ಜುಲೈ ೨೬ರಂದು ರಾತ್ರಿ ೮ ಗಂಟೆಯ ಹೊತ್ತಿಗೆ ಬೆಳ್ಳಾರೆಯ ತಮ್ಮ ಚಿಕನ್ ಸೆಂಟರ್‌ನಲ್ಲಿದ್ದ ಪ್ರವೀಣ್ ನೆಟ್ಟಾರು ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದರು. ಹಿಂದು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ, ಜನಾನುರಾಗಿಯಾಗಿದ್ದ ಪ್ರವೀಣ್ ಹತ್ಯೆ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ತಕ್ಷಣವೇ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಜುಲೈ ೨೮ರಂದು ಬೆಳ್ಳಾರೆ ಶಫೀಕ್ ಮತ್ತು ಸವಣೂರಿನ ಮಹಮ್ಮದ್ ಝಾಕಿರ್ ಎಂಬವರನ್ನು ಬಂಧಿಸಿದ್ದರು. ಆಗಸ್ಟ್ ೧ರಂದು ಪಲ್ಲಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಸುಳ್ಯದ ಹ್ಯಾರಿಸ್ ಎಂಬವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸಕ್ಕೆ ಇದ್ದ ಇವರು ಕೊಲೆ ನಡೆದ ದಿನ ಬೆಳ್ಳಾರೆಯಲ್ಲಿದ್ದರು ಎಂದು ಹೇಳಲಾಗಿತ್ತು.
ಅಗಸ್ಟ್ ೭ರಂದು ಸುಳ್ಯದ ನಾವೂರು ನಿವಾಸಿ ಅಬೀದ್(22) ಮತ್ತು ಬೆಳ್ಳಾರೆ ನಿವಾಸಿ ನೌಫಲ್(28) ನನ್ನು ಬಂಧಿಸಲಾಗಿತ್ತು. ಇದರಲ್ಲಿ ಅಬೀದ್ ಕೇರಳದ ತಲಶ್ಶೇರಿಯಲ್ಲಿದ್ದ. ಈತ ಮೊದಲು ಬಂಧಿತನಾದ ಶಫೀಕ್ ಜತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಬಂಧನವಾಗಿರುವ ಏಳನೇ ಆರೋಪಿ ಸುಳ್ಯ ಜಟ್ಟಿಪಳ್ಳದ ಅಬ್ದುಲ್ ಕಬೀರ್ ಸಿಎ(೩೩).
ಆರು ಜಿಲ್ಲೆಗಳ ಎಸ್ಪಿಗಳ ಜತೆ ಸಭೆ
ಪ್ರಧಾನ ಹಂತಕರನ್ನು ಹೆಡೆಮುರಿ ಕಟ್ಟುವ ವಿಚಾರದಲ್ಲಿ ಎಲ್ಲರ ಸಹಕಾರ ಪಡೆಯುವ ನಿಟ್ಟಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಬುಧವಾರ ಬೆಳ್ಳಾರೆ ಠಾಣೆಯಲ್ಲಿ ಆರು ಜಿಲ್ಲೆಗಳ ಎಸ್‌ಪಿಗಳು ಮತ್ತು ಈ ಕೊಲೆ ಪ್ರಕರಣದ ತನಿಖೆಯನ್ನು ಮುಂದುವರಿಸಲಿರುವ ಎನ್‌ಐಎ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಬೆಳ್ಳಾರೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎನ್‌ಐಎ ಅಧಿಕಾರಿಗಳು ಮತ್ತು ಅವರ ಜತೆಗೆ ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಎಸ್ಪಿಗಳು ಭಾಗವಹಿಸಿದ್ದರು.
ಆಸ್ತಿ ಮುಟ್ಟುಗೋಲಿಗೆ ಕ್ರಮ ಎಚ್ಚರಿಕೆ
ʻʻಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಯಾರನ್ನೂ ಬಿಡುವುದಿಲ್ಲ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ. ಕೋರ್ಟ್ ಮೂಲಕ ವಾರಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆʼʼ ಎಂದು ಎಡಿಜಿಪಿ ಸಭೆಗೆ ಮುನ್ನ ತಿಳಿಸಿದ್ದರು. ಸಭೆಯಲ್ಲಿ ಕೂಡಾ ಈ ವಿಚಾರದಲ್ಲೇ ಚರ್ಚೆ ನಡೆದಿತ್ತು. ಆರೋಪಿಗಳಿಗೆ ಪಿಎಫ್‌ಐ ಜತೆ ಲಿಂಕ್ ಇದೆ ಎಂದು ಕೂಡಾ ಎಡಿಜಿಪಿ ಹೇಳಿದ್ದರು.
ಇದನ್ನೂ ಓದಿ| ಪ್ರವೀಣ್ ನೆಟ್ಟಾರು ಕೊಲೆ: ಏಳನೇ ಆರೋಪಿ ಸೆರೆ, ಜಟ್ಟಿಪಳ್ಳದ ಕಬೀರ್ ಪಾತ್ರವೇನು?
ಇದನ್ನೂ ಓದಿ| ಪ್ರವೀಣ್ ನೆಟ್ಟಾರು ಹಂತಕರ ಸಂಪೂರ್ಣ ಜಾತಕ ಗೊತ್ತಿದೆ, ಆಸ್ತಿ ಮುಟ್ಟುಗೋಲಿಗೂ ಚಿಂತನೆ: ಎಡಿಜಿಪಿ