Site icon Vistara News

Praveen Nettaru | ಬಿಜೆಪಿ ಕಾರ್ಯಕರ್ತರ ಸಮಾಧಾನ ಮಾಡಲು PFI ಟಾರ್ಗೆಟ್‌ ಮಾಡುತ್ತಿರುವ NIA: ಆರೋಪ

Praveen Nettaru

ಮಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿದ್ದ ಪ್ರವೀಣ್‌ ನೆಟ್ಟಾರು ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳವು (NIA) ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡುವುದಕ್ಕಾಗಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ವನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಪಿಎಫ್‌ಐ ಆರೋಪಿಸಿದೆ.

ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಅವರು ಪ್ರವೀಣ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ‌ಎನ್‌ಐಎಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ʻʻಶಿವಮೊಗ್ಗದ ಹರ್ಷ ‌ಮತ್ತು ಪ್ರವೀಣ್ ಕೊಲೆ ಪ್ರಕರಣಗಳನ್ನು ಎನ್ಐಎಗೆ ವಹಿಸಲಾಗಿದೆ. ಸರಿ ಎಂದು ಒಪ್ಪೋಣ. ಹಾಗಿದ್ದರೆ ಬೆಳಗಾವಿಯ ಅರ್ಬಾಝ್, ಶಮೀರ್ ಕೇಸನ್ನು ಯಾಕೆ ಎನ್‌ಐಎಗೆ ವಹಿಸಿಲ್ಲ? ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣವನ್ನು ಯಾಕೆ ವಹಿಸಿಲ್ಲ?ʼʼ ಎಂದು ಪ್ರಶ್ನಿಸಿದ ಅಶ್ರಫ್‌, ಇದು ಸರಕಾರದ ದ್ವಿಮುಖ ನೀತಿಗೆ ನಿದರ್ಶನ. ಸಂಘ ಪರಿವಾರದ ಕಾರ್ಯಕರ್ತರು ಇರುವ ಪ್ರಕರಣಗಳನ್ನು ಯಾವುದನ್ನೂ ಎನ್‌ಐಎಗೆ ವಹಿಸಲಾಗಿಲ್ಲ. ಮುಸ್ಲಿಂ ಯುವಕರು ಆರೋಪಿಗಳಾಗಿರುವ ಕೇಸ್ ಗಳನ್ನ ಮಾತ್ರ ಎನ್ಐಎಗೆ ವಹಿಸಲಾಗುತ್ತಿದೆ ಎಂದು ಹೇಳಿದರು. ಪಿಎಫ್ ಐ ನಾಯಕರು ಅನ್ನೋ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ್‌ ನೆಟ್ಟಾರು ಕೊಲೆಯಲ್ಲಿ ಭಾಗಿಯಾದ ಸಂಶಯವನ್ನು ನೆಪ ಮಾಡಿಕೊಂಡು ಎನ್‌ಐಎ ಮಂಗಳವಾರ ೩೦ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿದೆ. ಕೆಲವು ಪಿಎಫ್ಐ ಕಾರ್ಯಕರ್ತರು ಮತ್ತು ನಾಯಕರ ಮನೆಗಳ ಜೊತೆ ಮುಸ್ಲಿಂ ಯುವಕರ ಮನೆಗಳಿಗೆ ದಾಳಿ‌ ನಡೆಸಲಾಗಿದೆ. ಇದು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ದಾಳಿ. ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡಿ ಸರಿಪಡಿಸಲು ಎನ್‌ಐಎಗೆ ವಹಿಸಲಾಗಿದೆ. ಎನ್‌ಐಎ ಕೂಡಾ ಬಿಜೆಪಿ ಹೇಳಿದಂತೆ ಕೇಳುತ್ತಿದೆ ಎಂದು ಹೇಳಿದರು.

ʻʻಬಿಜೆಪಿ ಸರ್ಕಾರ ವೈಫಲ್ಯ ಮುಚ್ಚಿ ಹಾಕಲು ಈ ಕೆಲಸ ಮಾಡುತ್ತಿದೆ. ಪಿಎಫ್ ಐ ವಿರುದ್ದ ಎನ್ಐಎ ಮತ್ತು‌ ಇಡಿ ಛೂ ಬಿಟ್ಟು ಕಿರುಕುಳ ಕೊಡಲಾಗುತ್ತಿದೆʼʼ ಎಂದಿರುವ ಅವರು, ಪ್ರವೀಣ್ ‌ನೆಟ್ಟಾರು ಕೊಲೆ ಸ್ಥಳೀಯ ಮಟ್ಟದ ಪ್ರತೀಕಾರದ ಪ್ರಕರಣ. ಸ್ಥಳೀಯ ಪೊಲೀಸರೇ ಇದರ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಈ ಘಟನೆಯನ್ನು ಭಯೋತ್ಪಾದನೆ ಘಟನೆ ಅಂತ ತಿರುಚಲು ಎನ್.ಎ.ಗೆ ಅಸೈನ್ ಮೆಂಟ್ ಕೊಡಲಾಗಿದೆ. ಎನ್ಐಎ ದಾಳಿ ವೇಳೆ ಭಯೋತ್ಪಾದಕರನ್ನು ಹಿಡಿಯುವ ರೀತಿ ವಾತಾವರಣ ಸೃಷ್ಟಿಸಲಾಗಿದೆʼʼ ಎಂದರು.

ʻʻಪ್ರವೀಣ್ ಕೊಲೆ ಕೇಸ್ ಅಂತಾರಾಜ್ಯ ನಂಟಿನ ಪ್ರಕರಣ ಎಂದು ಗೃಹ ಸಚಿವರು ಹೇಳಿದ್ದರು. ಆದರೆ ಆರೋಪಿಗಳ ಬಂಧನ ಆದ ನಂತರ ಅವರು ಸ್ಥಳೀಯರು ಅಂತ ಗೊತ್ತಾಗಿದೆʼʼ ಎಂದ ಅಶ್ರಫ್‌, ಮೊದಲೇ ಇದನ್ನು ಭಯೋತ್ಪಾದನೆ ಎಂದು ಬಿಂಬಿಸುವ ಸಂಚು ಇದರಲ್ಲಿ ಅಡಗಿದೆ ಎಂದರು.

ʻʻಸರ್ಕಾರಕ್ಕೆ ಪ್ರವೀಣ್ ಕೇಸಲ್ಲಿ ಮಾತ್ರ ಯಾಕೆ ಆಸಕ್ತಿ? ಅದೇ ಆಸಕ್ತಿ ಮಸೂದ್ ಮತ್ತು ಫಾಜಿಲ್ ಕೇಸ್‌ನಲ್ಲಿ ಯಾಕಿಲ್ಲ? ಪ್ರವೀಣ್ ಹತ್ಯೆ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಹತ್ಯೆ‌ ನಡೆದಿದೆ ಅಂತ ಮಾಧ್ಯಮಗಳಲ್ಲಿ ಬಂದಿದೆ. ಅದರ ಬಗ್ಗೆ ಯಾಕೆ ಮೌನʼʼ ಎಂದು ಅವರು ಪ್ರಶ್ನಿಸಿದರು.

ʻʻನಮ್ಮ ತಾಲೂಕು ಘಟಕದ ಕೆಲವು ನಾಯಕರ ಮನೆಗಳಿಗೆ ದಾಳಿ ಮಾಡಿದ್ದಾರೆ. ಕೆಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಅಂತ ಎನ್.ಐ.ಎ ಹೇಳಿದೆ. ಅದನ್ನು ಅವರು ಬೆಂಗಳೂರಿನಿಂದ ತಂದ್ರಾ? ದೆಹಲಿಯಿಂದ ತಂದ್ರಾ ಅಂತ ಎನ್ ಐಎ ಹೇಳಬೇಕುʼʼ ಎಂದು ಕೆಣಕಿದರು ಅಶ್ರಫ್‌.

ʻʻನಾವು ಸಭೆ ಮಾಡುವುದೇನು ದೊಡ್ಡ ಸಂಗತಿಯಾ? ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಹಾಲ್ ಗಳಲ್ಲಿ ನಮ್ಮ ಸಭೆಗಳು ನಡೆಯುತ್ತವೆ. ಅದೇ ರೀತಿ ಪೊಲೀಸರಿಗೆ ‌ಮಾಹಿತಿ ನೀಡಿ ಮಿತ್ತೂರಿನ ಕಮ್ಯುನಿಟಿ ಹಾಲ್ ನಲ್ಲೂ ಸಭೆ ಮಾಡಿದ್ದೇವೆʼʼ ಎಂದು ಹೇಳಿದ ಅಶ್ರಫ್‌ ಸಭೆ ನಡೆಸುವುದು ತಪ್ಪೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | ಪ್ರವೀಣ್‌ ನೆಟ್ಟಾರು ಕೊಲೆಯ ಹಿಂದಿನ ಅಸಲಿ ಕಾರಣ ಗುರುತಿಸಿದ NIA REPORT: ಏನು ಹೇಳುತ್ತೆ ಅದು?

Exit mobile version