Site icon Vistara News

Praveen Nettaru| ಕೇರಳದ ತಲಶ್ಶೇರಿಯಲ್ಲಿ ಮೂರನೇ ಆರೋಪಿ ಬಂಧನ, ಅಲ್ಲೇನು ಮಾಡ್ತಿದ್ದ?

Praveen Nettaru

ಬೆಂಗಳೂರು: ರಾಜ್ಯಾದ್ಯಂತ ಭಾರಿ ತಲ್ಲಣಕ್ಕೆ ಕಾರಣವಾದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ತಲಶ್ಶೇರಿಯಲ್ಲಿ ಮೂರನೇ ಆರೋಪಿಯ ಬಂಧನ ನಡೆದಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆಯ ಶಫೀಕ್‌ (೨೭) ಮತ್ತು ಸವಣೂರಿನ ಝಾಕಿರ್‌ (೨೯) ಎಂಬವರನ್ನು ಬಂಧಿಸಲಾಗಿದೆ.

ಕಳೆದ ಜುಲೈ ೨೬ರಂದು ರಾತ್ರಿ ೮.೪೦ರ ಹೊತ್ತಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣ್‌ ನೆಟ್ಟಾರು ಅವರನ್ನು ಮಾರಕಾಯುಧಗಳಿಂದ ಹೊಡೆದು ಸಾಯಿಸಿದ್ದರು. ಈ ಪ್ರಕರಣ ರಾಜ್ಯದಲ್ಲಿ ತಲ್ಲಣದ ಅಲೆಗಳನ್ನು ಸೃಷ್ಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ಆದರೆ, ಬಂಧಿತರಿಬ್ಬರೂ ಕೊಲೆಗಾರರಲ್ಲ. ಕೊನೆಗೆ ಸಹಾಯ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ನಿಜವಾದ ಕೊಲೆಗಾರರು ಕೇರಳದವರೆಂದು ಈಗಾಗಲೇ ಶಂಕೆ ಇದ್ದು, ತನಿಖೆ ಆ ಭಾಗದಲ್ಲೇ ಹೆಚ್ಚು ನಡೆಯುತ್ತಿದೆ. ಈ ನಡುವೆ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ.

ಈ ನಡುವೆ, ವಿಶೇಷ ತನಿಖಾ ತಂಡವೊಂದು ಕೇರಳದ ತಲಶ್ಶೇರಿಯ ಪಾಡಾ ಎಂಬಲ್ಲಿನ ಮನೆಗೆ ಶನಿವಾರ ರಾತ್ರಿ ದಾಳಿ ಮಾಡಿದ್ದು, ಅಬೀದ್‌ ಎಂಬ ಯುವಕನನ್ನು ಬಂಧಿಸಿದೆ ಎಂದು ತಿಳಿದುಬಂದಿದೆ. ಆರೋಪಿಯು ತಲಶ್ಶೇರಿಯ ಚಿಕನ್‌ ಸೆಂಟರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈಗ ರಾಜಕೀಯ ಸಂಘಟನೆಗಳ ಜತೆಗೂ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ.

ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದವರು, ಬಂಧಿತರಿಂದ ಪಡೆದ ಮಾಹಿತಿಗಳನ್ನು ಆಧರಿಸಿ ಈತನ ಮೇಲೆ ಗುಮಾನಿ ಮೂಡಿತ್ತು. ಜುಲೈ ೨೬ರಂದು ಕೊಲೆ ನಡೆದ ದಿನ ಈತ ಚಿಕನ್‌ ಸೆಂಟರ್‌ಗೆ ಕೆಲಸಕ್ಕೆ ಬಂದಿರಲಿಲ್ಲ ಎನ್ನುವ ಅಂಶದ ಮೇಲೆ ಪ್ರಧಾನ ಸಂಶಯದ ಮೊನೆ ಇದೆ. ಜತೆಗೆ ಈತನ ಇತರ ಚಟುವಟಿಕೆಗಳು ಅವನು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ಅನುಮಾನ ಬರುವಂತೆ ಮಾಡಿದೆ.

ಎರಡು ತಿಂಗಳಿನಿಂದಲೇ ಸ್ಕೆಚ್‌
ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೂಲಗಳ ಪ್ರಕಾರ, ಪ್ರವೀಣ್‌ ಹತ್ಯೆಯ ಸ್ಕೆಚ್‌ ಕಳೆದ ಎರಡು ತಿಂಗಳುಗಳಿಂದಲೇ ನಡೆಯುತ್ತಿದೆ. ಆರೋಪಿಗಳು ವಾಟ್ಸ್‌ ಆಪ್‌ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಮತ್ತು ಪ್ರವೀಣ್‌ಗೂ ಬೆದರಿಕೆ ಕರೆ ಮಾಡಿದ್ದರು ಎಂದು ಹೇಳಲಾಗಿದೆ.

ಪ್ರವೀಣ್‌ ಕೂಡಾ ತನಗೆ ಬಂದಿರುವ ಬೆದರಿಕೆ ಕರೆಗಳ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಅಂದು ಬಂದಿರುವ ಕರೆ ಈಗ ಸಿಕ್ಕಿರುವ ಅಬೀದ್‌ಗೂ ಏನು ಸಂಬಂಧ ಎನ್ನುವ ಬಗ್ಗೆ ತನಿಖೆ ನಡೆಯಲಿದೆ. ಅಂದು ಬೈಕ್‌ನಲ್ಲಿ ಮೂವರು ಹಂತಕರು ಬಂದಿದ್ದರು. ಅವರಲ್ಲಿ ಅಬೀದ್‌ ಒಬ್ಬನಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅಬೀದ್‌ ಬಂಧನದಿಂದ ಉಳಿದವರ ಮಾಹಿತಿ ಸಿಗುವುದು ಸುಲಭ ಎಂಬ ಅಭಿಪ್ರಾಯವಿದೆ.

ಇದನ್ನೂ ಓದಿ| Praveen Murder ಬಳಿಕ ಕ್ಷೇತ್ರದಲ್ಲಿ ಓಡಾಡಲೂ ಹಿಂದೇಟು ಹಾಕುತ್ತಿರುವ ಬಿಜೆಪಿ ಶಾಸಕರು, ಮಂತ್ರಿಗಳು!

Exit mobile version