Site icon Vistara News

Praveen Nettaru | ಇನ್ನು ಮುಂದೆ ಈ ರೀತಿಯ ಹತ್ಯೆ ತಡೆಯಲು ವಿಶೇಷ ಪಡೆ; ಸಿಎಂ ಘೋಷಣೆ

bjp celebration

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು (Praveen Nettaru) ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ಇನ್ನು ಮುಂದೆ ರೀತಿಯ ಘಟನೆ ನಡೆಯದಂತೆ ತಡೆಯಲು ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ರದ್ದು ಪಡಿಸಿರುವ ಕುರಿತು ಮಾಹಿತಿ ನೀಡಲು ಬುಧವಾರ ಮಧ್ಯರಾತ್ರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದ್ದಾರೆ.

ಈ ವಿಶೇಷ ಪಡೆಗೆ ಎಲ್ಲ ರೀತಿಯ ತರಬೇತಿ ನೀಡಲಾಗುವುದು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಂಡಿದ್ದೇವೆ. ಈ ಪಡೆಯು ಉಗ್ರನಿಯಂತ್ರಣಾ ಪಡೆಯಂತೆ ಕಾರ್ಯನಿರ್ವಹಿಸಲಿದೆ. ಗುಪ್ತಚರ ವ್ಯವಸ್ಥೆಯೊಂದಿಗೆ ಈ ಪಡೆಯನ್ನು ಬಲಪಡಿಸಲಾಗುವುದು ಎಂದು ಸಿಎಂ ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗೆಲ್ಲಾ ಸೂಕ್ತ ಕ್ರಮ ತೆಗೆದುಕೊಂಡಿದೆ. ನಾನೇ ಮುಂದೆ ನಿಂತು ಅಪರಾಧಿಗಳನ್ನು ಬಂಧಿಸುವಂತೆ ಮಾಡಿದ್ದೇನೆ. ಕೆಲವರನ್ನು ತಿಹಾರ ಜೈಲಿಗೂ ಕಳಿಸಿದ್ದೇವೆ. ಆದರೆ ಹಿಂದಿನ ಕಾಂಗ್ರೆಸ್‌ ಸರ್ಕಾರ ಸುಮಾರು ೨೨ ಹತ್ಯೆಗಳು ನಡೆದಾಗ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಈ ರೀತಿಯ ಘಟನೆಗಳು ಮರಕಳಿಸುತ್ತಿವೆ ಎಂದು ಅವರು ಸರ್ಕಾರವನ್ನು ಸಮರ್ಥಿಸಿಕೊಂಡರು.

ಪ್ರವೀಣ್‌ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮುನ್ನಡೆ ಸಾಧಿಸಲಾಗಿದೆ. ಆದರೆ ಈಗಲೇ ಮಾತನಾಡಿದರೆ ತನಿಖೆಗೆ ತೊಂದರೆ ಯಾಗುತ್ತದೆ ಎಂದು ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ, ಕೇರಳ ಅಥವಾ ಬೇರೆ ರಾಜ್ಯಗಳಲ್ಲಿ ಎಲ್ಲೇ ಅಡಗಿದ್ದರೂ ಆರೋಪಿಗಳನ್ನು ಬಂಧಿಸಲಾಗುತ್ತದೆ. ಸರ್ಕಾರ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.

ದುಷ್ಟ ಶಕ್ತಿಗಳ ಪಾಪದ ಕೊಡ ತುಂಬಿದೆ. ದೇಶ ದ್ರೋಹದ ಕೆಲಸಮಾಡಿ, ಜನರ ನಡುವೆ ದ್ವೇಶ ಬಿತ್ತಿ, ಕೋಮು ಕೋಮುಗಳ ನಡುವೆ ಸಂಘರ್ಷ ನಡೆಸಲಾಗ್ತಿದೆ. ಇದು ದೇಶ ವ್ಯಾಪಿ ನಡೆಯುತ್ತಿದೆ. ನಾವು ಇದನ್ನು ಮಟ್ಟಹಾಕುತ್ತೇವೆ ಎಂದು ಸಿಎಂ ಖಚಿತ ದನಿಯಲ್ಲಿ ಹೇಳಿದರು.

ಪಿಎಫ್‌ಐ ಬ್ಯಾನ್‌ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ತಕ್ಷಣ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಈ ವಿಷಯದಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಛತ್ತೀಸ್‌ಗಢ ಸರ್ಕಾರ ತೆಗೆದುಕೊಂಡತೆಯೇ ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ ಎಂದರು.

ಇದನ್ನೂ ಓದಿ| ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲು, ಪಕ್ಷದ ಜನೋತ್ಸವ ಕಾರ್ಯಕ್ರಮ ರದ್ದು

Exit mobile version