ಮಂಗಳೂರು: ಸಂಚುಕೋರರಿಂದ ಕಳೆದ ವರ್ಷ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಹಿಂದು ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು (praveen nettaru) ಅವರ ಕನಸಿನ ಮನೆ ನಿರ್ಮಾಣ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಚುನಾವಣೆ ಸಮಯದಲ್ಲಿಯೇ ಗೃಹ ಪ್ರವೇಶಕ್ಕೆ ಮುಹೂರ್ತವನ್ನು ನಿಗದಿ ಮಾಡಲಾಗಿದೆ. ಈ ಮೂಲಕ ಕರಾವಳಿಯಲ್ಲಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರವನ್ನು ಪ್ರಯೋಗ ಮಾಡಿದೆ.
ಚುನಾವಣೆ ಹೊತ್ತಲ್ಲಿ ಮನೆಯ ಗೃಹ ಪ್ರವೇಶ ಮಾಡುವುದರಿಂದ ಜನತೆಗೆ ಒಂದು ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಅಂದರೆ ನಂಬಿದ ಕಾರ್ಯಕರ್ತರನ್ನು ಬಿಜೆಪಿ ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಈ ಮೂಲಕ ಹೇಳುವ ಮೂಲಕ ಚುನಾವಣೆ ಲಾಭ ಪಡೆಯಲು ಮುಂದಾಗಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Karnataka Election 2023 : ಕಾಂಗ್ರೆಸ್ ಎರಡನೇ ಪಟ್ಟಿ ಪ್ರಕಟ; 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ
ಏಪ್ರಿಲ್ 27ಕ್ಕೆ ಗೃಹ ಪ್ರವೇಶ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮನೆ ನಿರ್ಮಾಣವಾಗುತ್ತಿದೆ. ಈಗಾಗಲೇ ಶೇಕಡಾ 90ರಷ್ಟು ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2022ರಲ್ಲಿ ನವೆಂಬರ್ 2ರಂದು ನಳಿನ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಸದ್ಯ ವೇಗವಾಗಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಏ. 27ರಂದು ಗೃಹ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂದು ಬಿಜೆಪಿ ಸಂದೇಶ ನೀಡಲು ಮುಂದಾಗಿದೆ. ಹತ್ಯೆ ವೇಳೆ ಪಕ್ಷದ ವರ್ಚಸ್ಸಿಗೆ ಹಾನಿಯಾದರೂ ಕುಟುಂಬದ ಪರ ನಿಂತು ಡ್ಯಾಮೇಜ್ ಸರಿಪಡಿಸಿಕೊಳ್ಳಲು ಮುಂದಾಗಲಾಗಿದೆ.
60 ಲಕ್ಷ ರೂಪಾಯಿ ಮನೆ ನಿರ್ಮಾಣ
2,700 ಚದರ ಅಡಿಯಲ್ಲಿ ಒಟ್ಟು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದೆ. ಮನೆ ನಿರ್ಮಾಣದ ವೆಚ್ಚವನ್ನು ಪಕ್ಷ, ಸರ್ಕಾರ ಮತ್ತು ಯುವ ಮೋರ್ಚಾ ಭರಿಸಲಿದೆ. ಬಿಜೆಪಿಯಿಂದ 25 ಲಕ್ಷ ರೂ., ಸರ್ಕಾರದಿಂದ 25 ಲಕ್ಷ ರೂ. ಹಾಗೂ ಯುವ ಮೋರ್ಚಾದಿಂದ 15 ಲಕ್ಷ ರೂಪಾಯಿಯನ್ನು ಭರಿಸಲಾಗಿದೆ. ಅಲ್ಲದೆ, ಪ್ರವೀಣ್ ನೆಟ್ಟಾರ್ ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗುತ್ತಿದೆ ಎಂದು ಈ ಹಿಂದೆ ಕಟೀಲ್ ಹೇಳಿದ್ದರು. ಪ್ರವೀಣ್ ಪತ್ನಿಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗವನ್ನು ಕೊಡಲಾಗಿದೆ.
ಅಂದು ಆಕ್ರೋಶ ವ್ಯಕ್ತವಾಗಿತ್ತು
2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಅದರ ಮರುದಿನ ನಡೆದ ಅಂತ್ಯಕ್ರಿಯೆಯ ವೇಳೆ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರನ್ನು ಅರ್ಧ ದಾರಿಯಲ್ಲೇ ತಡೆಯಲಾಗಿತ್ತು. ನಳಿನ್ ಕಟೀಲ್ ಮತ್ತು ಸುನೀಲ್ ಕುಮಾರ್ ಕಾರನ್ನು ಅಲುಗಾಡಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ನಾಯಕರು ಮಾತ್ರ ಮನೆಯವರನ್ನು ಸಮಾಧಾನ ಮಾಡಿ ಈಗ ಮನೆ ಕಟ್ಟಿಕೊಡುತ್ತಿದ್ದಾರೆ.