Site icon Vistara News

ಹಾಸನಾಂಬೆ ದರ್ಶನ ಮಾಡಿದ ಶಾಸಕ ನಾಗೇಂದ್ರ; ತಬ್ಬಿ ಸ್ವಾಗತಿಸಿದ ಪ್ರೀತಂ ಗೌಡರಿಂದ ಅಡಚಣೆಗೆ ಕ್ಷಮೆಯಾಚನೆ

ಪ್ರೀತಂ ಗೌಡ

ಹಾಸನ: ಹಾಸನಾಂಬೆ ದರ್ಶನ ಸಿಗದಿದ್ದರಿಂದ ಭಾನುವಾರ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಹಾಗೂ ಶಾಸಕರ ಬಗ್ಗೆ ಅಸಮಾಧಾನಗೊಂಡು ವಾಪಸ್ ತೆರಳಿದ್ದ ಮೈಸೂರು ಜಿಲ್ಲೆ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ ಅವರು ಸೋಮವಾರ ಆಗಮಿಸಿ ದೇವಿಯ ದರ್ಶನ ಪಡೆದರು.

ಜಿಲ್ಲಾಡಳಿತ ಕಡೆಯಿಂದ ಶಿಷ್ಟಾಚಾರ ಪ್ರಕಾರವೇ ಹಾಸನಾಂಬೆ ದರ್ಶನಕ್ಕೆ ಬಂದ ನಾಗೇಂದ್ರ ಅವರನ್ನು ಪ್ರೀತಂ ಗೌಡ ತಬ್ಬಿಕೊಂಡು ಆತ್ಮೀಯವಾಗಿ ಬರಮಾಡಿಕೊಂಡಿದ್ದು ಕಂಡುಬಂತು.

ನೈವೇದ್ಯದ ವೇಳೆ ಬಂದಿದ್ದರಿಂದ ಶಾಸಕ ಎಲ್‌.ನಾಗೇಂದ್ರ ಹಾಗೂ ಬೆಂಬಲಿಗರಿಗೆ ಭಾನುವಾರ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ನಾಗೇಂದ್ರ, ಸ್ಥಳೀಯ ಬಿಜೆಪಿ ಶಾಸಕ ಪ್ರೀತಂಗೌಡ ದರ್ಶನಕ್ಕೆ ವ್ಯವಸ್ಥೆ ಮಾಡಲಿಲ್ಲ ಎಂದು ಸಿಟ್ಟಿಗೆದ್ದು ವಾಪಸ್ ಹೋಗಿದ್ದರು. ಆದರೆ, ಸೋಮವಾರ ಅವರು ಬರುವ ಸುದ್ದಿ ತಿಳಿದು ಸ್ಥಳಕ್ಕೆ ಶಾಸಕ ಪ್ರೀತಂ ಗೌಡ ಆಗಮಿಸಿ, ತನ್ನ ವಿರುದ್ಧ ಮಾತನಾಡಿದ್ದ ತಮ್ಮದೇ ಪಕ್ಷದ ಶಾಸಕನನ್ನು ಆತ್ಮೀಯವಾಗಿ ಬರಮಾಡಿಕೊಂಡು ದರ್ಶನಕ್ಕೆ ವ್ಯವಸ್ಥೆ ಮಾಡಿದರು.

ಇದನ್ನೂ ಓದಿ | ಪಲ್ಟಿ ಹೊಡೆಸದೇ ಇದ್ದಿದ್ದರೆ ನಾನು ಸಿಎಂ ಆಗಿರುತ್ತಿದ್ದೆ: ಕೊರಟಗೆರೆಯಲ್ಲಿ ಡಾ. ಜಿ. ಪರಮೇಶ್ವರ್‌ ಹೇಳಿಕೆ

ಕ್ಷಮೆ ಕೇಳಿದ ಶಾಸಕ ಪ್ರೀತಂಗೌಡ
ಯಾವುದೇ ಪಕ್ಷದ ಚುನಾಯಿತ ಪ್ರತಿನಿಧಿಗಳು ಬಂದರೂ ದರ್ಶನಕ್ಕೆ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಿದೆ. ಭಾನುವಾರ ಅಧಿಕಾರಿಗಳಿಗೆ ಕೆಲಸದ ಒತ್ತಡ ಹಾಗೂ ಸಮನ್ವಯದ ಕೊರತೆಯಿಂದ ಸಮಸ್ಯೆಯಾಗಿರುವುದಕ್ಕೆ ನನ್ನ ಹಿರಿಯ, ಸಹೋದರ ಸಮಾನರಾದ ಶಾಸಕ ನಾಗೇಂದ್ರ ಅವರಿಗೆ ಕ್ಷಮೆ ಕೇಳುತ್ತೇನೆ. ನನಗೆ ಯಾವುದೇ ಅಹಂಕಾರ ಇಲ್ಲ. ಯಾರೂ ಉದ್ದೇಶಪೂರ್ವಕವಾಗಿ ತಪ್ಪು ಮಾಡಲ್ಲ, ಆಕಸ್ಮಿಕವಾಗಿ ಆಗಿದೆ. ಇದನ್ನು ಇಲ್ಲಿಗೆ ಮುಗಿಸೋಣ ಎಂದು ಶಾಸಕ ನಾಗೇಂದ್ರಗೆ ಭಾನುವಾರ ಹಾಸನಾಂಬೆ ದರ್ಶನಕ್ಕೆ ಅಡಚಣೆಯಾದ ವಿಚಾರಕ್ಕೆ ಶಾಸಕ ಪ್ರೀತಂ ಗೌಡ ಪ್ರತಿಕ್ರಿಯಿಸಿದ್ದಾರೆ.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಎಲ್‌.ನಾಗೇಂದ್ರ
ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಶಾಸಕ ನಾಗೇಂದ್ರ, ದೇವಿಯ ದರ್ಶನ ಚೆನ್ನಾಗಿ ಆಗಿದೆ. ಇದು ನಮ್ಮ ಸೌಭಾಗ್ಯ. ನನ್ನ ಆತ್ಮೀಯ ಪ್ರೀತಂ ಗೌಡ ನನಗೆ ದರ್ಶನ ಮಾಡಿಸಿದ್ದಾರೆ. ಭಾನುವಾರ ತಡವಾಗಿ ಬಂದಿದ್ದೆ, ಪ್ರೀತಂಗೌಡ ಅವರಿಗೂ ನಾನು ಫೋನ್ ಮಾಡಿರಲಿಲ್ಲ, ಹಾಗಾಗಿ ಸಮಸ್ಯೆ ಆಗಿದೆ. ನಾನು ಬಂದಾಗ ಐವತ್ತು ಜನ ಹೊರಗೆ ಇದ್ದರು, ಅವರನ್ನು ನನ್ನೊಟ್ಟಿಗೆ ಬಿಡಿ ಎಂದು ಕೇಳಿದೆ. ಅವರನ್ನು ಬಿಡದ ಕಾರಣ ನಾನೂ ಕೂಡ ವಾಪಸ್ ಹೋಗಿದ್ದೆ. ಆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ಎಲ್‌.ನಾಗೇಂದ್ರ ತಿಳಿಸಿದ್ದಾರೆ.

ಮತ್ತೆ ಬಂದು ದೇವಿಯ ದರ್ಶನ ಮಾಡಿದ್ದೇನೆ, ಎಲ್ಲವೂ ಒಳ್ಳೆಯದಾಗಿದೆ. ಪ್ರೀತಂ ಗೌಡ ನನಗೆ ಸಹೋದರನ ಸಮಾನ. ನಾನು ಅವರಿಗೆ ವಿಭಾಗ ಪ್ರಭಾರಿ ಆಗಿದ್ದೆ. ನಮ್ಮಿಬ್ಬರ ನಡುವೆ ಆತ್ಮೀಯತೆ ಇರುವ ಹಿನ್ನೆಲೆಯಲ್ಲಿ ನಾನು ಅವನ ಬಗ್ಗೆ ಏನು ಬೇಕಾದರೂ ಮಾತಾಡಬಹುದು. ಅದು ಬಿಟ್ಟರೆ ಬೇರೆ ಏನೂ ವಿಚಾರಗಳು ಇಲ್ಲ. ಅವನಿಗೆ ಟಿಕೆಟ್‌ ಕೊಡುವ ವಿಚಾರದಲ್ಲೂ ನಾನು ಹೋರಾಟ ಮಾಡಿದ್ದೇನೆ ಎಂದರು.

ಭಾನುವಾರ ದರ್ಶನಕ್ಕೆ ಬಂದಾಗ ಹೆಚ್ಚುವರಿ ಎಎಸ್‌ಪಿ ತಡೆದ ಬಗ್ಗೆ ಗೃಹ ಮಂತ್ರಿಗಳ ಕಚೇರಿಗೆ ಮಾಹಿತಿ ನೀಡಿದ್ದ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಒತ್ತಡದಲ್ಲಿ ಇದ್ದರು. ಅವರಿಗೆ ಶಾಸಕರು ಯಾರು ಎಂದು ಗೊತ್ತಾಗಿಲ್ಲ. ಸಮನ್ವಯದ ಕೊರತೆಯಿಂದ ಹೀಗಾಗಿದೆ. ಅದನ್ನು ಅಲ್ಲಿಗೇ ಬಿಡೋಣ, ಅವರೂ ನಮ್ಮ ಸರ್ಕಾರದ ಒಬ್ಬ ಅಧಿಕಾರಿ. ತಾಯಿ ಚಾಮುಂಡೇಶ್ವರಿಯಂತೆ ಹಾಸನಾಂಬೆ ನೋಡಲು ಹೆಚ್ಚಿನ ಭಕ್ತರು ಬರುತ್ತಾರೆ. ವರ್ಷಕ್ಕೆ 12 ದಿನ ಮಾತ್ರ ದರ್ಶನ ಇರುವುದರಿಂದ ಹೆಚ್ಚಿನ ಜನ ಬರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | ಹಾಸನಾಂಬೆ ದರ್ಶನಕ್ಕೆ ಸಿಗದ ಅವಕಾಶ; ಪ್ರೀತಂ ಗೌಡ ವಿರುದ್ಧ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕಿಡಿ

Exit mobile version