ಬೆಂಗಳೂರು: ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ ಸೇರಿ 5 ಗ್ಯಾರಂಟಿಗಳನ್ನು (Congress Guarantee) ಘೋಷಿಸಿದೆ. ಈ ಯೋಜನೆಗಳ ಸೌಲಭ್ಯ ಪಡೆಯಲು ಜನರು ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕಾಗಿ ಬೇಕಾದ ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್ ಹಾಗೂ ಬಾಡಿಗೆ ಕರಾರು ಪತ್ರ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಜನರು ಮುಂದಾಗಿದ್ದು, ಇದರಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್‌ಗಳಲ್ಲಿ ನೂಕುನುಗ್ಗಲು ಉಂಟಾಗಿದೆ.
ಹುಬ್ಬಳ್ಳಿಯಲ್ಲಿ ಆಧಾರ್ ತಿದ್ದುಪಡಿಗೆ ಮಹಿಳೆಯರ ಲಗ್ಗೆ
ಹುಬ್ಬಳ್ಳಿ: ಮನೆ ಯಜಮಾನಿಗೆ 2000 ಮಾಸಾಶನ ನೀಡುವ ಗೃಹಲಕ್ಷ್ಮಿ ಯೋಜನೆಗೆ ಜೂನ್ 15ರಿಂದ ಅರ್ಜಿ ಸಲ್ಲಿಸಬೇಕಾಗಿದೆ. ಹೀಗಾಗಿ ಆಧಾರ್ ತಿದ್ದುಪಡಿಗೆ ನಗರದಲ್ಲಿ ಮಹಿಳೆಯರು ಅಧಾರ್ ಸೇವಾ ಕೇಂದ್ರಗಳಿಗೆ ಲಗ್ಗೆ ಇಟ್ಟಿದ್ದಾರೆ. ಜನದಟ್ಟಣೆ ನಿಯಂತ್ರಣಕ್ಕೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಗೃಹ ಲಕ್ಷ್ಮಿ ಯೋಜನೆಗೆ ಆಧಾರ್ ಕಡ್ಡಾಯವಾಗಿದೆ. ಇನ್ನೂ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆ ಕೂಡ ಕಡ್ಡಾಯ. ಹೀಗಾಗಿ ಜನ್ಮ ದಿನಾಂಕ, ವಿಳಾಸ, ಹೆಸರು ತಿದ್ದುಪಡಿ ಮಾಡಿಸಲು ಆಧಾರ್ ಸೇವಾ ಕೇಂದ್ರಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ | Free Electricity: ಗೃಹ ಜ್ಯೋತಿ ಅರ್ಜಿ ಸ್ವೀಕಾರ ಆರಂಭ ಮುಂದೂಡಿಕೆ; ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಮಹಿಳೆಯರು ದಿಢೀರ್ ದಾಂಗುಡಿ ಇಟ್ಟಿದ್ದರಿಂದ ಆಧಾರ್ ಸೇವಾ ಕೇಂದ್ರದ ಎದುರು ಸರತಿಸಾಲು ನಿರ್ಮಾಣವಾಗಿದೆ. ಇಲ್ಲಿಗೆ ಬರುವವರಲ್ಲಿ ಅಡ್ರೆಸ್ ಬದಲಾವಣೆ ಮಾಡಿಸುವವರ ಸಂಖ್ಯೆಯೇ ಸಿಂಹಪಾಲು ಆಗಿದೆ. ಮದುವೆಯಾಗಿ ಗಂಡನ ಮನೆಗೆ ಬಂದವರು. ಹಾಗೆಯೇ ಆಧಾರ್‌ನಲ್ಲಿ ಪತಿ, ಪತ್ನಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸುವವರು ಕಾರ್ಡ್ ತಿದ್ದುಪಡಿ ಮಾಡಿಸಲು ಮುಂದಾಗಿದ್ದಾರೆ.
ಬಾಗಲಕೋಟೆ ಬ್ಯಾಂಕ್‌ಗಳಲ್ಲಿ ಪುಲ್ ರಶ್
ಬಾಗಲಕೋಟೆ: ಗೃಹ ಲಕ್ಷ್ಮಿ ಸೇರಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಮಹಿಳೆಯರು ತುದಿಗಾಲಿನಲ್ಲಿ ನಿಂತಿರುವ ಹಿನ್ನೆಲೆಯಲ್ಲಿ ನಗರದ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗಳಲ್ಲಿ ಜನಜಂಗುಳಿ ಉಂಟಾಗಿದೆ. ನಾ ಮುಂದು ತಾ ಮುಂದು ಎಂದು ಬ್ಯಾಂಕ್‌ಗಳ ಮುಂದೆ ಮಹಿಳೆಯರು ಕ್ಯೂ ನಿಲ್ಲುತ್ತಿದ್ದಾರೆ. ಖಾತೆಗೆ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಸೇರಿ ವಿವಿಧ ದಾಖಲೆಗಳನ್ನು ಸರಿ ಪಡಿಸಿಕೊಳ್ಳಲು ನೂಕುನುಗ್ಗಲು ಉಂಟಾಗಿದೆ.
ಇದನ್ನೂ ಓದಿ | Congress Guarantee: ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರದ ಕೊಕ್ಕೆ!: ಗ್ಯಾರಂಟಿ ಫೇಲ್ ಮಾಡಲು ಷಡ್ಯಂತ್ರ ಎಂದ ಸಿಎಂ ಸಿದ್ದರಾಮಯ್ಯ
ಚನ್ನರಾಯಪಟ್ಟಣದಲ್ಲಿ ಬ್ಯಾಂಕ್ ಮುಂದೆ ಸರದಿ ಸಾಲು
ಹಾಸನ: ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಗಾಗಿ ಬ್ಯಾಂಕ್ ಜನರು ಮುಗಿಬಿದ್ದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನರಾಯಪಟ್ಟಣದ ಹಲವು ಬ್ಯಾಂಕ್‌ಗಳಲ್ಲಿ ನೂಕುನುಗ್ಗಲು ಉಂಟಾಗಿದೆ. ಸರ್ವರ್ ಸಮಸ್ಯೆಯಿಂದ ಅಪ್ಡೇಟ್ ಮಾಡಲು ವಿಳಂಬವಾಗಿದ್ದರಿಂದ ಗಂಟೆಗಟ್ಟಲೇ ಬ್ಯಾಂಕ್‌ಗಳಲ್ಲಿ ಜನರು ಕ್ಯೂ ನಿಲ್ಲುತ್ತಿದ್ದಾರೆ.