ಮಂಡ್ಯ: ಕೆಆರ್‌ಎಸ್ ಜಲಾಶಯಕ್ಕೆ (KRS Dam) ಅಪಾಯ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ರೈತರ ವಿರೋಧದ ನಡುವೆಯೂ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜುಲೈ 25ರಿಂದ 31ರವರೆಗೆ ಜಾರ್ಖಂಡ್‌ನ ವಿಜ್ಞಾನಿಗಳ ತಂಡದಿಂದ ಬ್ಲಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸರ್ಕಾರದ ಒಪ್ಪಿಗೆ ಪಡೆದು ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ದಿನಾಂಕ ನಿಗದಿ ಮಾಡಿದೆ. ಟ್ರಯಲ್ ಬ್ಲಾಸ್ಟ್‌ನಲ್ಲಿ ಅಪಾಯವಿಲ್ಲ ಎಂಬ ವರದಿ ಬಂದರೆ ಮತ್ತೆ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ.
ರೈತರ ಬೇಡಿಕೆಗೆ ಮನ್ನಣೆ ನೀಡದೆ, ಗಣಿ ಮಾಲೀಕರ ಒತ್ತಡಕ್ಕೆ ಮಣಿದು ಪ್ರಯೋಗ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಐತಿಹಾಸಿಕ ಕೆಆರ್‌ಎಸ್ ಡ್ಯಾಂಗೆ ಗಂಡಾಂತರದ ಭೀತಿಯಿಂದ ಬೇಬಿ ಬೆಟ್ಟದಲ್ಲಿ 3 ವರ್ಷದಿಂದ ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು. ಮತ್ತೆ ಗಣಿಗಾರಿಕೆ ನಡೆಸಲು ಅವಕಾಶ ನೀಡುವಂತೆ ಗಣಿ ಮಾಲೀಕರು ಟ್ರಯಲ್ ಬ್ಲಾಸ್ಟಿಂಗ್ ಮಾಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತದ ಮೇಲೆ ನಿರಂತರ ಒತ್ತಡ ಹಾಕಿದ್ದಾರೆ. ಇವರ ಒತ್ತಡಕ್ಕೆ ಮಣಿದು ಪರಿಕ್ಷಾರ್ಥ ಬ್ಲಾಸ್ಟ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ವಿಜ್ಞಾನಿಗಳು ಅಲ್ಪ ಪ್ರಮಾಣದ ಸ್ಫೋಟಕ ಬಳಸಿ ಟ್ರಯಲ್ ಬ್ಲಾಸ್ಟ್ ಮಾಡುತ್ತಾರೆ. ಆದರೆ, ಗಣಿ ಮಾಲೀಕರು ಅತ್ಯಧಿಕ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡುತ್ತಾರೆ. ಒಮ್ಮೆ ಬ್ಲಾಸ್ಟ್ ಮಾಡಿದರೆ 50 ಲೋಡ್ ಕಲ್ಲು ಬರುತ್ತದೆ. ಬೇಬಿ ಬೆಟ್ಟದಲ್ಲಿ 80 ಕ್ವಾರಿಗಳಿದ್ದು, ಪ್ರತಿನಿತ್ಯ 50ರಿಂದ 60 ಬ್ಲಾಸ್ಟಿಂಗ್ ಮಾಡುತ್ತಾರೆ. ಇದರಿಂದ ನಿಶ್ಚಿತವಾಗಿ ಕೆಆರ್‌ಎಸ್ ಡ್ಯಾಂಗೆ ಅಪಾಯವಿದೆ. ಹೀಗಾಗಿ ಟ್ರಯಲ್ ಬ್ಲಾಸ್ಟ್ ಬೇಡ ಎಂದು ರೈತರು ಒತ್ತಾಯಿಸಿದ್ದಾರೆ.
ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ 2018ರಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸಿತ್ತು. ಕೆಆರ್‌ಎಸ್ ಡ್ಯಾಂನ 10.5 ಕಿಮೀ ದೂರದಲ್ಲಿ ಕಂಪನವಾಗಿದ್ದರಿಂದ ಜಲಾಶಯಕ್ಕೆ ಹಾನಿಯಾಗುವ ಆತಂಕ ಮೂಡಿತ್ತು. ಅಧಿಕ ಪ್ರಮಾಣದ ಸ್ಫೋಟಕ ಬಳಕೆಯಿಂದ ಭಾರಿ ಶಬ್ದದೊಂದಿಗೆ ಕಂಪನ ಎಂದು ವರದಿಯಾಗಿತ್ತು. ಆನಂತರ ಬೇಬಿ ಬೆಟ್ಟ ಸೇರಿ ಡ್ಯಾಂ ಸುತ್ತ ಗಣಿಗಾರಿಕೆಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು.
ಗಣಿಗಾರಿಕೆ ನಿಷೇಧಿಸುವಂತೆ ಭೂ ವಿಜ್ಞಾನಿ ವರದಿ
ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಅಪಾಯವಿದೆ. ಹೀಗಾಗಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಭೂ ವಿಜ್ಞಾನಿ ವರದಿ ಪ್ರೊ.ಎಚ್.ಟಿ.ಬಸವರಾಜಪ್ಪ ಅವರು ಸಂಸದೆ ಸುಮಲತಾಗೆ ವರದಿ ನೀಡಿದ್ದರು. ಸಂಪೂರ್ಣ ಗಣಿಗಾರಿಕೆ ನಿಷೇಧ ಮಾಡುವಂತೆ ಕಳೆದ ಜನವರಿ 10ರಂದು ವರದಿ ಸಲ್ಲಿಸಿದ್ದರು.
ಸುಮಲತಾ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ವರದಿ ನೀಡಿದ್ದ ಎಚ್.ಟಿ.ಬಸವರಾಜಪ್ಪ, ಟ್ರಯಲ್ ಬ್ಲಾಸ್ಟ್ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪರೀಕ್ಷಾರ್ಥ ಬ್ಲಾಸ್ಟ್ ಮಾಡುವುದರಿಂದಲೂ ಡ್ಯಾಂಗೆ ಅಪಾಯ ಆಗಬಹುದು. ಡ್ಯಾಂಗೆ ಅಪಾಯವಾದರೆ ಯಾರು ಹೊಣೆ ಎಂದಿದ್ದ ಅವರು ಸರ್ಕಾರ ಟ್ರಯಲ್ ಬ್ಲಾಸ್ಟಿಂಗ್ ರದ್ದುಪಡಿಸಬೇಕು ಎಂದು ಒತ್ತಾಯ ಮಾಡಿದ್ದರು.
ಇದನ್ನೂ ಓದಿ | ಭದ್ರಕೋಟೆಯೇ ಛಿದ್ರವಾಗುವ ಭೀತಿಯಲ್ಲಿ ಜೆಡಿಎಸ್: ಮಂಡ್ಯದಲ್ಲಿ ಬಲ ಕಳೆದುಕೊಳ್ಳುತ್ತಿರುವುದೇಕೆ?