Site icon Vistara News

Droupadi Murmu: ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು; ತೆಪ್ಪಕಾಡು ಆನೆ ಶಿಬಿರದ ಬೊಮ್ಮ, ಬೆಳ್ಳಿ ಭೇಟಿಗಾಗಿ ಆಗಮನ

President Draupadi Murmu was welcomed by the authorities in Mysuru

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಅರಣ್ಯಕ್ಕೆ ತೆರಳಲು ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದರು. ಜಿಲ್ಲಾಡಳಿತದಿಂದ ರಾಷ್ಟ್ರಪತಿಗೆ (Droupadi Murmu) ಸ್ವಾಗತ ಸ್ವಾಗತ ಕೋರಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಷ್ಟಾಚಾರದನ್ವಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪ್ರಾದೇಶಿಕ ಆಯುಕ್ತ ಡಾ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಸ್ವಾಗತ ಕೋರಿದರು.

ವಿಶೇಷ ವಿಮಾನದ ಮೂಲಕ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಅರಣ್ಯಕ್ಕೆ ತೆರಳಿದರು. ಆಸ್ಕರ್‌ ಪ್ರಶಸ್ತಿ ವಿಜೇತ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼ ಕಿರು ಸಾಕ್ಷ್ಯಚಿತ್ರದ ಖ್ಯಾತಿಯ ಕಾವಾಡಿ ದಂಪತಿ ಬೊಮ್ಮ, ಬೆಳ್ಳಿ ಹಾಗೂ ಕಾವಾಡಿ, ಮಾವುತರ ಜತೆ ಸಂವಾದ ನಡೆಸಲು ಮದುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು.

ತೆಪ್ಪಕಾಡು ಆನೆ ಶಿಬಿರದ ಭೇಟಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಜೆ, ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ಚೆನ್ನೈನತ್ತ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ | Fraud Case: ಎಂಎಲ್‌ಸಿ ವಿಶ್ವನಾಥ್ ಪುತ್ರನಿಗೆ ವಂಚನೆ; ಬ್ಯಾಂಕ್‌ ಖಾತೆಯಿಂದ 1.99 ಲಕ್ಷ ರೂ. ದೋಚಿದ ಸೈಬರ್‌ ಕಳ್ಳರು

ಅವಧೂತ ದತ್ತ ಪೀಠಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಲು ಮೈಸೂರಿಗೆ ಆಗಮಿಸಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು, ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಶ್ರಮದಲ್ಲಿರುವ ಶುಕವನದ ಪಕ್ಷಿಧಾಮಕ್ಕ ಭೇಟಿ ನೀಡಿ ಪಕ್ಷಿಗಳನ್ನು ವೀಕ್ಷಿಸಿದರು.


Exit mobile version