ಧಾರವಾಡ: ಯುವಜನರು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯಬೇಕು. ಇದೇ ಉದ್ದೇಶದಿಂದ ದೇಶದಲ್ಲಿ ಹೊಸ ತಂತ್ರಜ್ಞಾನ ಸಂಸ್ಥೆಗಳನ್ನು ಬೆಳೆಸಲಾಗುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಹೇಳಿದರು. ಅವರು ಧಾರವಾಡದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ( ಐಐಐಟಿ-ಧಾರವಾಡ ) ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೧೫ರಲ್ಲಿ ಅಡಿಗಲ್ಲು ಹಾಕಿದ್ದರು. ೨೦೨೨ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರೇ ಐಐಐಟಿಯನ್ನು ಉದ್ಘಾಟಿಸಲಿದ್ದಾರೆ. ಈಗ ರಾಷ್ಟ್ರಪತಿಯವರು ಕ್ಯಾಂಪಸ್‌ನ್ನು ಉದ್ಘಾಟಿಸಿದರು.
ʻʻದೇಶದಲ್ಲಿ ಸಂಶೋಧನೆಗೆ ಈಗ ಭಾರಿ ಮಹತ್ವ ನೀಡಲಾಗಿದೆ. ರೊಬೊಟಿಕ್ಸ್, ನ್ಯಾನೊ ಸೇರಿ ಹಲವು ವಿಚಾರಗಳ ಬಗ್ಗೆ ಉನ್ನತ ಸಂಶೋಧನೆ ನಡೆಯಲಿದೆ. ದೇಶದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುತ್ತಿದೆ. ಡಿಜಿಟಲೀಕರಣದ ವೇಗ ಜೋರಾಗಿದೆ. ಇದೆಲ್ಲದಕ್ಕೂ ನಮ್ಮ ಯುವಜನತೆ ಸಿದ್ಧರಾಗಬೇಕಾಗಿದೆʼʼ ಎಂದರು ರಾಷ್ಟ್ರಪತಿ.
ತಂತ್ರಜ್ಞಾನ ಸಬಲೀಕರಣದಿಂದ ಲಾಭ
ʻʻತಂತ್ರಜ್ಞಾನದ ಸಬಲೀಕರಣ ಎಲ್ಲಕ್ಕಿಂತ ಶಕ್ತಿಶಾಲಿ. ಜ್ಞಾನದ ಭಂಡಾರವನ್ನೇ ಇದು ತೆರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ʻʻಭಾರತದ ಭವಿಷ್ಯದ ಕೇಂದ್ರ ಸ್ಥಾನದಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿ ಮೂಲ ವಿಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಬುನಾದಿಯನ್ನು ಅತ್ಯಂತ ಭದ್ರವಾಗಿ ಹಾಕಲಾಗಿದೆ. ಬೇರೆ ಯಾವ ರಾಜ್ಯದಲ್ಲಿಯೂ ಇಷ್ಟು ಪ್ರತಿಭೆ ಮತ್ತು ತಂತ್ರಜ್ಞಾನವುಳ್ಳ ಮಾನವ ಸಂಪನ್ಮೂಲ ಇಲ್ಲ. ಇದು ನಮ್ಮ ಹಿರಿಯರ ಕೊಡುಗೆ. 50 ವರ್ಷಗಳ ಹಿಂದೆ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿನಿಂದ ಪ್ರಥಮ ಮಹಿಳಾ ಎಂಜಿನಿಯರ್ ಆದವರು. ಇಬ್ಬರು ಮಹಾನ್ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಇವರು ನಮ್ಮ ಶಕ್ತಿ, ಸಂಸ್ಕøತಿ. ಮಹಿಳೆಯರು ಕೇವಲ ಮನೆಗೆ ಸೀಮಿತರಾದವರಲ್ಲ. ಒಬ್ಬರು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಮತ್ತೊಬ್ಬರು ಇಡೀ ದೇಶವನ್ನು ಆಳುತ್ತಿದ್ದಾರೆ. ಅವರ ಆಶೀರ್ವಾದ ನಿಮಗೆ ಸಿಗುತ್ತಿದೆʼʼ ಎಂದರು ಬೊಮ್ಮಾಯಿ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಐಐಐಟಿ-ಧಾರವಾಡದ ಆಡಳಿತ ಮಂಡಳಿ ಅಧ್ಯಕ್ಷೆ ಸುಧಾ ಮೂರ್ತಿ ಉಪಸ್ಥಿತರಿದ್ದರು.
ಸುಧಾ ಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರಿಗೆ ಇಳಕಲ್ ಸೀರೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೀರೆ ಮತ್ತು ಕೌದಿಯನ್ನು ನೀಡಿದರು.