Site icon Vistara News

President Election 2022 | ಚುನಾವಣೆಗಿಂತ 2 ದಿನ ಮೊದಲೇ ಬೆಂಗಳೂರಿಗೆ ಬಂದ ಬಿಜೆಪಿ ಶಾಸಕರು!

President Election 2022

ಬೆಂಗಳೂರು: ರಾಷ್ಟ್ರಪತಿ ಹುದ್ದೆಗೆ ಸೋಮವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯು ಪಕ್ಷದ ಎಲ್ಲ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು, ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಇರಿಸಿಕೊಂಡಿದೆ. ಯಾವುದೇ ಕಾರಣಕ್ಕೂ ಒಬ್ಬರ ಮತವೂ ಕಡಿಮೆಯಾಗದಂತೆ ಖಾತ್ರಿ ಪಡಿಸಿಕೊಳ್ಳಲು ಈ ಕ್ರಮ ತೆಗೆದುಕೊಂಡಿದೆ.

ಶನಿವಾರ ರಾತ್ರಿಯ ವೇಳೆಗಾಗಲೇ ಎಲ್ಲ ಶಾಸಕರು ಹೋಟೆಲ್‌ಗೆ ಆಗಮಿಸಿದ್ದು, ಪಕ್ಷದ ಸೂಚನೆಯಂತೆ ಉಳಿದುಕೊಂಡಿದ್ದಾರೆ. ಚುನಾವಣೆಗಿಂತ ಎರಡು ದಿನ ಮೊದಲೇ ಬೆಂಗಳೂರಿಗೆ ಆಗಮಿಸುವಂತೆ ಎಲ್ಲ ಶಾಸಕರಿಗೂ ಮುಖ್ಯ ಸಚೇತಕ ಎಂ. ಸತೀಶ್‌ ರೆಡ್ಡಿ ಸಂದೇಶ ಕಳಿಸಿದ್ದರು.

ಭಾನುವಾರ ಎಲ್ಲ ಶಾಸಕರಿಗೂ ಹೇಗೆ ಮತಚಲಾಯಿಸಬೇಕೆಂಬ ಕುರಿತು ಅಣಕು ಮತದಾನದ ಮೂಲಕ ತರಬೇತಿ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಶಾಸಕರೊಂದಿಗೆ ಇದೇ ಹೋಟೆಲ್‌ನಲ್ಲಿ ಸಭೆ ಕೂಡ ನಡೆಸಲಿದ್ದಾರೆ.

ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಗೆಲ್ಲುವುದು ಬಹುತೇಕ ಖಚಿತ ಪಟ್ಟಿದೆ. ಆದರೂ ಮತ ಪ್ರಮಾಣ ಕಡಿಮೆಯಾದಲ್ಲಿ ಅದು ತಪ್ಪು ಸಂದೇಶ ನೀಡುವ ಸಾಧ್ಯತೆಗಳಿರುವುದರಿಂದ ಬಿಜೆಪಿ ಈ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

ರಾಷ್ಟ್ರಪತಿ ಚುನಾವಣೆಯ ಮತದಾನವು ರಹಸ್ಯ ಮತದಾನವಾಗಿದ್ದು, ಶಾಸಕರು ಯಾರಿಗೆ ಬೇಕಾದರೂ ಮತ ಚಲಾಯಿಸಬಹುದಾಗಿರುತ್ತದೆ ಮತ್ತು ಮತ ಚಲಾಯಿಸದೇ ಇರುವ ಹಕ್ಕನ್ನೂ ಹೊಂದಿರುತ್ತಾರೆ. ಹೀಗಾಗಿ ಪಕ್ಷವು ವಿಪ್‌ ಜಾರಿ ಮಾಡುವಂತಿಲ್ಲ. ಆದರೂ ಬಿಜೆಪಿ ಈ ರೀತಿ ಮಾಡಿರುವುದು ಪಕ್ಷದ ಶಾಸಕರಿಗೇ ಆಶ್ಚರ್ಯವನ್ನುಂಟು ಮಾಡಿದೆ.

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಈ ಹೊತ್ತಿನಲ್ಲಿ ಕ್ಷೇತ್ರದಲ್ಲಿಯೇ ಇದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ ಶಾಸಕರು ಚುನಾವಣೆಯ ನೆಪದಲ್ಲಿ ಹೀಗೆ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿಬರುತ್ತಿದೆ.

ಇದನ್ನೂ ಓದಿ|Vice President Election 2022 | ಜನತಾ ಪರಿವಾರದಿಂದ ಬಂದ ನಾಯಕ ಬಿಜೆಪಿ ಉಪರಾಷ್ಟ್ರಪತಿ ಅಭ್ಯರ್ಥಿ!

Exit mobile version