Site icon Vistara News

President in Hubli | ದ್ರೌಪದಿ ಮುರ್ಮು ಕಾರ್ಯಕ್ರಮದಲ್ಲಿ 50 ಮಂದಿ ಬುಡಕಟ್ಟು ಜನಾಂಗದ ಮಂದಿ ಭಾಗಿ

president hubballi tribal

ಹುಬ್ಬಳ್ಳಿ: ಬುಡಕಟ್ಟು ಸಮುದಾಯಕ್ಕೆ ಸೇರಿದ ದೇಶದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ದ್ರೌಪದಿ ಮುರ್ಮು ಅವರು ಆ ಸಮುದಾಯದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ದ್ರೌಪದಿ ಮುರ್ಮು ಅವರು ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಸುಮಾರು ೫೦ರಷ್ಟು ಬುಡಕಟ್ಟು ಜನಾಂಗದವರು ಆಗಮಿಸಿದ್ದು ವಿಶೇಷವಾಗಿತ್ತು.

ಧಾರವಾಡ, ಕಲಘಟಗಿ, ಅಳ್ನಾವರ, ಯಲ್ಲಾಪುರ, ಕುಮಟಾ, ಶಿರಸಿ ಭಾಗದಿಂದ ಸುಮಾರು ೫೦ರಷ್ಟು ಮಂದಿ ಆಗಮಿಸಿದ್ದು, ತಮಗೆ ಖುಷಿಯಾಗಿದೆ ಎಂದು ವಿಸ್ತಾರನ್ಯೂಸ್‌ ಜತೆ ಹೇಳಿಕೊಂಡರು. ತಮ್ಮ ಸಾಂಪ್ರದಾಯಿಕ ಡೊಳ್ಳು, ಕೊಳಲು. ಸೇರಿ ಬುಡಕಟ್ಟು ಶೈಲಿಯ ವಾದ್ಯಗಳನ್ನೂ ಅವರು ಹಿಡಿದುಕೊಂಡು ಬಂದಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಬುಡಕಟ್ಟು ಜನಾಂಗದವರು.

ʻʻರಾಷ್ಟ್ರಪತಿ ಮುರ್ಮು ಅವರನ್ನ ನೋಡಲು ಉತ್ಸುಕರಾಗಿದ್ದೇವೆ. ನಮ್ಮ ದೇಶದ ರಾಷ್ಟ್ರಪತಿಗಳು ಬುಡಕಟ್ಟು ಸಮಯದಾಯದವರು. ಅವರನ್ನು ನೋಡಲು ಸಂತೋಷ ಎನ್ನಿಸುತ್ತಿದೆ. ರಾಷ್ಟ್ರಪತಿಗಳನ್ನ ನೋಡಲು ಸರ್ಕಾರ ನಮಗೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆʼʼ ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸ್ವಾಗತ
ಮೈಸೂರಿನಲ್ಲಿ ನಡೆದ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿದರು. ಭಾರತೀಯ ಸೇನಾ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರ ರಾಷ್ಟ್ರಪತಿ ದ್ರೌಪತಿ ಮುರ್ಮು ಜೊತೆ ಆಗಮಿಸಿದ ರಾಜ್ಯಪಾಲರ ಜತೆಗೆ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ , ಸಚಿವರಾದ ಶಂಕರಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್ , ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ ಹಾಗೂ ಸಲೀಂ ಅಹ್ಮದ್ ರಾಷ್ಟ್ರಪತಿಗಳನ್ನು ಸ್ವಾಗತಿಸಿದರು.

ಇದನ್ನೂ ಓದಿ | President programme | ಹುಬ್ಬಳ್ಳಿ ಪೌರ ಸನ್ಮಾನ ಕಾರ್ಯಕ್ರಮ ವೇದಿಕೆಗೆ ಕೊನೆಗೂ ಸಿಕ್ತು ಜಗದೀಶ್‌ ಶೆಟ್ಟರ್‌ಗೆ ಎಂಟ್ರಿ

Exit mobile version