Site icon Vistara News

ರಾಷ್ಟ್ರಪತಿ ಬೆಂಗಳೂರು ಪ್ರವಾಸ: ಭಾಗವಹಿಸುವ 2 ಕಾರ್ಯಕ್ರಮಗಳ ವಿವರ ಇಲ್ಲಿದೆ

Rashtriya military school bangalore

ಬೆಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಎರಡು ದಿನಗಳ ಪ್ರವಾಸದ ನಿಮಿತ್ತ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಷ್ಟ್ರಪತಿಯಾಗಿ ಐದು ವರ್ಷದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಹಾಗೂ ಸದಾ ನಗುಮುಖದಿಂದಲೇ ಕಾಣಿಸಿಕೊಳ್ಳುವ ರಾಷ್ಟ್ರಪತಿಯವರ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ.

ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರವಾಸ ನಡೆಸುತ್ತಿರುವ ರಾಮನಾಥ ಕೋವಿಂದ್‌ ಅವರು ಪ್ರಮುಖವಾಗಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿಯವರು, ಮಂಗಳವಾರ ಮದ್ಯಾಹ್ನದ ನಂತರ ದೆಹಲಿಗೆ ವಾಪಸಾಗಲಿದ್ದಾರೆ.

ರಾಷ್ಟ್ರೀಯ ಮಿಲಿಟರಿ ಶಾಲೆ ಅಮೃತ ಮಹೋತ್ಸವ

ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯು ಸ್ಥಾಪನೆಯಾಗಿ 75 ವರ್ಷಗಳನ್ನು ಸಂಭ್ರಮಿಸುತ್ತಿದೆ. ಶಾಲೆಯ ಚಾಣಕ್ಯ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ರಾಮನಾಥ ಕೋವಿಂದ್‌ ಸೋಮವಾರ (ಜೂನ್‌ 13) ಉದ್ಘಾಟಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭಕ್ಕೆ ಸರಿಯಾಗಿ ರಾಷ್ಟ್ರೀಯ ಮಿಲಿಟರಿ ಶಾಲೆಯ ಸ್ಥಾಪನಾ ವರ್ಷವೂ ಹೊಂದಿಕೆ ಆಗಿದೆ. 75 ವರ್ಷದಿಂದ ಬಾಲಕರನ್ನು ಮಾತ್ರ ದಾಖಲು ಮಾಡಿಕೊಳ್ಳುತ್ತಿದ್ದ ಬೋರ್ಡಿಂಗ್‌ ಶಾಲೆ ಇದೇ ವರ್ಷದಿಂದ ಬಾಲಕಿಯರ ಬ್ಯಾಚ್‌ ಆರಂಭಿಸುತ್ತಿದೆ. ಅಮೃತ ಮಹೋತ್ಸವ ಸಂಭ್ರಮವನ್ನು ಹೆಚ್ಚಾಗಿಸಲು ದಕ್ಷಿಣದ ರಾಜ್ಯಗಳನ್ನು ಹಾದುಹೋಗುವ 1,800 ಕಿಲೋಮೀಟರ್‌ ಸೈಕಲ್‌ ಯಾತ್ರೆಯನ್ನು ಶಾಲೆಯ ವಿದ್ಯಾರ್ಥಿಗಳು ಕೈಗೊಳ್ಳಲಿದ್ದಾರೆ. ಈ ರಾಜ್ಯಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಕ ಹಾದು ಅನೇಕ ವಿಚಾರಗಳಲ್ಲಿ ಜಾಗೃತಿಯನ್ನು ವಿದ್ಯಾರ್ಥಿಗಳು ಮೂಡಿಸಲಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದಕ್ಕೆ ಒಂದು ವರ್ಷ ಮೊದಲು ಅಂದರೆ 1946ರ ಆಗಸ್ಟ್‌ 1 ರಂದು ರಾಯಲ್‌ ಮಿಲಿಟರಿ ಕಾಲೇಜ್‌ ಹೆಸರಿನಲ್ಲಿ ಕಿಂಗ್‌ ಜಾರ್ಜ್‌ 6 ಈ ಸಂಸ್ಥೆಯನ್ನು ಸ್ಥಾಪಿಸಿದ್ದ. ಸೇನಾಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯ ಮಕ್ಕಳ ಶಿಕ್ಷಣದ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಯಿತು. 1952ರಲ್ಲಿ ಶಾಲಾ ವ್ಯವಸ್ಥೆಯನ್ನು ಸಾರ್ವಜನಿಕ ಶಿಕ್ಷಣದ ಜತೆ ಮರುಸಂಯೋಜನೆ ಮಾಡಿ ಸೇನಾ ಸಿಬ್ಬಂದಿ ಜತೆಗೆ ನಾಗರಿಕರ ಮಕ್ಕಳಿಗೂ ಅವಕಾಶ ನೀಡಲಾಯಿತು.

1966ರವರೆಗೂ ಅಂದರೆ ಸ್ವಾತಂತ್ರ್ಯ ಲಭಿಸಿದ ಅನೇಕ ವರ್ಷ ರಾಯಲ್‌ ಮಿಲಿಟರಿ ಕಾಲೇಜ್‌ ಎಂದೇ ಇದ್ದ ಹೆಸರನ್ನು ಮಿಲಿಟರಿ ಸ್ಕೂಲ್‌ ಎಂದು ಬದಲಾಯಿಸಲಾಯಿತು. ಈ ಹಿಂದೆ ಇದ್ದ ಧ್ಯೇಯವಾಕ್ಯ “ಪ್ಲೇ ದಿ ಗೇಮ್‌ (Play the Game)” ಎಂಬುದನ್ನು “ಶೀಲಂ ಪರಂ ಭೂಷಣಂ” ಎಂಬ ಸಂಸ್ಕೃತ ವಾಕ್ಯಕ್ಕೆ ಬದಲಾವಣೆ ಮಾಡಲಾಯಿತು. 2007ರಲ್ಲಿ ಸಂಸ್ಥೆಯನ್ನು ಈಗಿರುವಂತೆ ರಾಷ್ಟ್ರೀಯ ಮಿಲಿಟರಿ ಶಾಲೆ ಎಂದು ಬದಲಾವಣೆ ಮಾಡಲಾಯಿತು.

ಇದನ್ನೂ ಓದಿ | ಬೆಂಗಳೂರಿಗೆ‌ ಬರ್ತಾರೆ ಮೋದಿ, ರಾಷ್ಟ್ರಪತಿ, ರಾಜಧಾನಿಯ ಎಲ್ಲ ಕಡೆ ಪೊಲೀಸ್ ಕಣ್ಗಾವಲು

ವಿದ್ಯಾರ್ಥಿಗಳಿಗೆ ದೇಶಾಭಿಮಾನ ಮೂಡಿಸುವ ಶಿಕ್ಷಣದ ಜತೆಗೆ ಮಿಲಿಟರಿ ಮೌಲ್ಯಗಳು, ನಾಯಕತ್ವ ಶಿಕ್ಷಣವನ್ನು ಶಾಲೆಯಲ್ಲಿ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ಅನೇಕರು ದೇಶದ ಸೇನೆಯ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಸೇವೆ ಮಾಡಿದ್ದಾರೆ. ಇವರಲ್ಲಿ ಪ್ರಮುಖವಾಗಿ ಪರಮ ವೀರ ಚಕ್ರ ವಿಜೇತ ಗುರ್‌ಬಚನ್‌ಸಿಂಗ್‌ ಸಲಾರಿಯಾ, ಹಾಕಿ ಆಟಗಾರ ರಾಜೇಂದ್ರನ್‌ ಕ್ರಿಸ್ಟಿ, ಸಿನಿಮಾ ನಟ ದೀನೊ ಮೋರಿಯಾ ಸೇರಿದ್ದಾರೆ.

ಶ್ರೀ ಗೋವಿಂದ ದೇವಾಲಯದ ಲೋಕಾರ್ಪಣೆ

ಬೆಂಗಳೂರಿನ ಕನಕಪುರ ರಸ್ತೆಯ ಸಮೀಪದಲ್ಲಿರುವ ವಸಂತಪುರದ ವೈಕುಂಠ ಬೆಟ್ಟದಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ( ಇಸ್ಕಾನ್‌ ) ನೂತನವಾಗಿ ನಿರ್ಮಿಸಿರುವ ರಾಜಾಧಿರಾಜ ‍ಶ್ರೀ ಗೋವಿಂದ ದೇವಾಲಯವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಂಗಳವಾರ( ಜೂನ್‌ 14) ಲೋಕಾರ್ಪಣೆ ಮಾಡಲಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಇಸ್ಕಾನ್‌ ದೇವಸ್ಥಾನ

ಶಿಲಾ ಕೆತ್ತನೆಯಿಂದ ಕೂಡಿದ ದೇವಾಲಯದಲ್ಲಿರುವ ಪಾರಂಪರಿಕ ಶೈಲಿಯ ವಿಗ್ರಹವು ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಮೂರ್ತಿಯನ್ನು ಹೋಲುತ್ತದೆ. ಅಳತೆ, ಶಿಲಾ ಕೆತ್ತನೆ ಹಾಗೂ ಸೌಂದರ್ಯ ಎಲ್ಲವೂ ಒಂದೇ ರೀತಿಯೇ ಕಾಣುತ್ತದೆ. ಶ್ರೀ ಶ್ರೀನಿವಾಸ ಸ್ವಾಮಿಯ ಎತ್ತರವೂ ತಿರುಪತಿಯಲ್ಲಿರುವ ವೆಂಕಟೇಶ್ವರ ಮೂರ್ತಿಯಷ್ಟೇ ಇದೆ. ಈ ಹಿನ್ನೆಲೆಯಲ್ಲಿ ಈ ದೇವರನ್ನು ರಾಜಾಧಿರಾಜ ಶ್ರೀ ಗೋವಿಂದ ಎಂದು ಕರೆಯಲಾಗುತ್ತದೆ.

ದೇವಾಲಯದಲ್ಲಿ ಮಕ್ಕಳಿಗೆ, ಯುವಕರಿಗೆ ಹಾಗೂ ಕುಟುಂಬಗಳಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣ ಒದಗಿಸುವ ಸೌಲಭ್ಯಗಳಿವೆ. ಗೋವಿಂದ ರಾಜ ಸ್ವಾಮಿ ಮತ್ತು ಇತರೆ ದೇವರುಗಳ ದರ್ಶನ ಪಡೆಯುವ ಸಲುವಾಗಿ ಸಾಲಾಗಿ ತೆರಳಲು ವಿಶಾಲ ನಿರೀಕ್ಷಣಾ ಭವನವಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಸಾಮೂಹಿಕ ಭೋಜನ ವ್ಯವಸ್ಥೆ ಕಲ್ಪಿಸುವ ಉಚಿತ ಅನ್ನದಾನ ಸಭಾ ಗೃಹವೂ ಇದೆ. ದಾನಿಗಳು ಹಾಗೂ ಪೋಷಕರ ಉದಾರ ಕೊಡುಗೆಯಿಂದ ಈ ದೇವಾಲಯ ಸಂಕೀರ್ಣವನ್ನು ನಿರ್ಮಿಸಲಾಗಿದೆ.

ಮುಂದಿನ ವಾರಗಳಲ್ಲಿ ವೇದ ಸಂಪ್ರದಾಯಗಳಿಗೆ ಅನುಗುಣವಾಗಿ ಸವಿವರ ಪೂಜಾ ವಿಧಾನಗಳನ್ನು ಹಾಗೂ ಪವಿತ್ರ ಕಾರ್ಯಗಳನ್ನು ದೇವಾಲಯ ಹಮ್ಮಿಕೊಂಡಿದೆ. ಇದೆಲ್ಲದರ ನಂತರ ದೇವಾಲಯವನ್ನು ಆಗಸ್ಟ್‌ 1 ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗುತ್ತದೆ.

ಇದನ್ನೂ ಓದಿ | ದೇವರ ಹುಂಡಿಗೂ ಬಂತು ಡಿಜಿಟಲ್‌ ಪೇಮೆಂಟ್ ! ಈ ಕ್ರಾಂತಿ ನಡೆದ ಮೊದಲ ದೇಗುಲ ಯಾವುದು? ಇಲ್ಲಿ ನೋಡಿ

Exit mobile version