ಬಾಗಲಕೋಟೆ: ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಪಕ್ಷ ಅನಿವಾರ್ಯ. ನಾನು ಆ ಮಾತನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ಆ ಮಟ್ಟಕ್ಕೆ ಜನರ ಆಶೀರ್ವಾದ ನನಗೆ ಸಿಗುತ್ತಿದೆ. ನನ್ನ ಬಿಟ್ಟು ಸರ್ಕಾರ (Karnataka Election) ಮಾಡುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ. ಆ ಕಾನ್ಫಿಡೆನ್ಸ್ ನನ್ನಲ್ಲಿದೆ. ಖಂಡಿತವಾಗಿಯೂ ನಾನು ಇತರೆ ಪಕ್ಷಗಳಿಗೆ ಅನಿವಾರ್ಯವಾಗುತ್ತೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ತಾಲೂಕಿನ ಖಜ್ಜಿಡೋಣಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ್ದಾಗ ಮಾತನಾಡಿದ ಅವರು, ಸ್ವಚ್ಛ, ನೇರ ನಡೆನುಡಿಯ ರಾಜಕಾರಣ ಮಾಡಿದ್ದೇನೆ. ಆದರೆ, ಕೆಲವರು ಅದರ ದುರುಪಯೋಗ ಮಾಡಿಕೊಂಡು ನನ್ನನ್ನು ಫುಟ್ ಬಾಲ್ ರೀತಿ ಆಟವಾಡಿಕೊಂಡರು. ಹೀಗಾಗಿ ಜನರು ನಮ್ಮ ಪಕ್ಷದ ಫುಟ್ ಬಾಲ್ ಚಿಹ್ನೆಗೆ ಮತ ಹಾಕಿ, ನನಗೆ ತೊಂದರೆ ಕೊಟ್ಟ ನಾಯಕರನ್ನು ಫುಟ್ ಬಾಲ್‌ನಂತೆ ಆಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | Karnataka Congress: ಕಾಂಗ್ರೆಸ್ ಸಾಗರಕ್ಕೆ ನದಿಯಂತೆ ನಾಯಕರು ಸೇರುತ್ತಿದ್ದಾರೆ: ಡಿ.ಕೆ. ಶಿವಕುಮಾರ್ ವರ್ಣನೆ
ರಾಜ್ಯದಲ್ಲಿ 30-35 ಅಭ್ಯರ್ಥಿಗಳ ಸ್ಪರ್ಧೆ
ರಾಜ್ಯಾದ್ಯಂತ ಕೆಆರ್‌ಪಿಪಿ ಪಕ್ಷದಿಂದ ಎಷ್ಟು ಅಭ್ಯರ್ಥಿ ಹಾಕುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಜನಾರ್ದನ ರೆಡ್ಡಿ, ಈಗಾಗಲೇ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಏ.10ರೊಳಗೆ ಹೆಚ್ಚು ಕಮ್ಮಿ 30 ಅಭ್ಯರ್ಥಿಗಳ ಘೋಷಣೆ ಆಗಬಹುದು ಎಂದು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಎಷ್ಟು ಅಭ್ಯರ್ಥಿ ಹಾಕುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಸಭೆಗಳನ್ನು ನೋಡಿದ ಮೇಲೆ ಅಲ್ಲಿ ನಮ್ಮ ಪಕ್ಷ ಗೆಲ್ಲುವ ವಾತಾವರಣ ಇದ್ದರೆ ಮಾತ್ರ ಅಭ್ಯರ್ಥಿ ಹಾಕುತ್ತೇನೆ. ರಾಜ್ಯದಾದ್ಯಂತ 30-35 ಅಭ್ಯರ್ಥಿಗಳನ್ನು ಘೋಷಣೆ ಮಾಡಬಹುದು. ಈಗಾಗಲೇ 50 ಕ್ಷೇತ್ರಗಳಲ್ಲಿ ಕೆಲಸ ನಡೆಯುತ್ತಿದೆ. ನಾನು ಈಗಾಗಲೇ 20 ಕ್ಷೇತ್ರಗಳಲ್ಲಿ ಓಡಾಡಿದ್ದೇನೆ. ಇನ್ನು 10 ದಿನಗಳಲ್ಲಿ 30 ಕ್ಷೇತ್ರ ಪೂರ್ತಿ ಮಾಡುವೆ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ಬಂದರೂ ಬೆಂಬಲ
ಸರ್ಕಾರ ರಚನೆ ಸಂದರ್ಭದಲ್ಲಿ ಯಾರಿಗೆ ಬೆಂಬಲ ಎಂಬ ವಿಚಾರಕ್ಕೆ ಜಮಖಂಡಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಮಗೆ ಬೆಂಬಲ ನೀಡಿದ ಜನರ ಇಚ್ಛೆಯಂತೆ ನಡೆದುಕೊಳ್ಳುತ್ತೇನೆ. ಕೆಆರ್‌ಪಿ ಪಕ್ಷದ ಭರವಸೆ ಈಡೇರಿಸಲು ಯಾರು ಸಮ್ಮತಿಸುತ್ತಾರೋ ಅವರಿಗೆ ನಮ್ಮ ಬೆಂಬಲ ನೀಡಲಾಗುತ್ತದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಪ್ರಶ್ನೆಯೇ ಬರಲ್ಲ. ನನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಗೆ ಸ್ಪಂದಿಸುವ ಪಕ್ಷಕ್ಕೆ ನನ್ನ ಬೆಂಬಲವಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | Panchamasali Reservation: ಕುಡಿದ ಮತ್ತಿನಲ್ಲಿ ಸ್ವಾಮೀಜಿಗೆ ಕರೆ ಮಾಡುವ ಕಾಂಗ್ರೆಸ್ ನಾಯಕರು: ಅರವಿಂದ ಬೆಲ್ಲದ್ ಆರೋಪ
ನನ್ನ ಸೋಲಿಸಲು ಬಂದ್ರೆ ನನಗೆ ಜಿದ್ದು ಇನ್ನೂ ಜಾಸ್ತಿ
ಗಂಗಾವತಿಯಲ್ಲಿ ರೆಡ್ಡಿ ಸೋಲಿಸಲು ಬಿಜೆಪಿ ಪ್ಲ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಕಾಳಜಿ ವಹಿಸಿ ಸೋಲಿಸಬೇಕೆಂದು ಪ್ರಯತ್ನ ಮಾಡಿದರೆ ನನಗೆ ಜಿದ್ದು ಇನ್ನೂ ಜಾಸ್ತಿ ಬರುತ್ತದೆ. ನನ್ನ ಮತ ಕ್ಷೇತ್ರದ 92 ಹಳ್ಳಿಗಳ ಪೈಕಿ 80 ಹಳ್ಳಿ ಓಡಾಡಿದ್ದೇನೆ, 12 ಹಳ್ಳಿ ಬಾಕಿ ಇವೆ. ಪ್ರತಿ ಹಳ್ಳಿಯಲ್ಲೂ ಒಳ್ಳೆಯ ಉತ್ತಮ ಸ್ವಾಗತ ದೊರೆತಿದೆ. ಒಳ್ಳೆಯ ಬಹುಮತದಿಂದ ಗಂಗಾವತಿಯಲ್ಲಿ ಗೆಲ್ಲುವ ವಿಶ್ವಾಸ ನನಗೆ ಬಂದಿದೆ ಎಂದು ಹೇಳಿದರು.