Site icon Vistara News

Ramanagar News: ಜಾತ್ರೆಯಲ್ಲಿ ಕಳಸ ಹೊತ್ತೊಯ್ಯುತ್ತಿದ್ದ ಅರ್ಚಕ ಕುಸಿದು ಬಿದ್ದು ದಿಢೀರ್ ಸಾವು

Priest carrying kalasa at fair collapses, dies

Priest carrying kalasa at fair collapses, dies

ರಾಮನಗರ: ಜಾತ್ರೆಯಲ್ಲಿ ಕಳಸ ಹೊತ್ತೊಯ್ಯುತ್ತಿದ್ದ ಅರ್ಚಕ ಕುಸಿದು ಬಿದ್ದು ಧಿಡೀರ್ ಸಾವಿಗೀಡಾಗಿರುವ ಘಟನೆ ಜಿಲ್ಲೆಯ (Ramanagar News) ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಾವತ್ತೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಜಾತ್ರೆಯಲ್ಲಿ ಅಗ್ನಿಕೊಂಡ ಹಾಯಲು ಕಳಸ ಹೊತ್ತು ತೆರಳುತಿದ್ದಾಗ ಅರ್ಚಕ ಕುಸಿದುಬಿದ್ದಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮಾವತ್ತೂರಮ್ಮ ದೇಗುಲ ಅರ್ಚಕ ನಾಗರಾಜು (45) ಮೃತರು. ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಗ್ನಿಕೊಂಡ ಉತ್ಸವ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನಾ ನಡೆದ ಮೆರವಣಿಗೆ ವೇಳೆ ಅರ್ಚಕರು ಕಳಸ ಹೊತ್ತು ತೆರಳುತ್ತಿದ್ದರು. ಈ ವೇಳೆ ವಾದ್ಯದ ಸದ್ದಿಗೆ ಮಹಿಳೆಯೊಬ್ಬರು ದೇವರು ಬಂದಂತೆ ಕುಣಿಯುತ್ತಿದ್ದರು. ಆಗ ಅರ್ಚಕ ಬೆತ್ತದಿಂದ ಮಹಿಳೆಗೆ ಹೊಡೆದರು. ಬಳಿಕ ಮಹಿಳೆ ಕಾಲಿಗೆ ಬಿದ್ದು ನಮಸ್ಕರಿಸಲು ಮುಂದಾದಾಗ, ಅರ್ಚಕ ದಿಢೀರನೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅರ್ಚಕರ ಸಾವಿನಿಂದ ಮಾವತ್ತೂರು ಜಾತ್ರೆ ಅರ್ಧಕ್ಕೆ ನಿಂತಿದೆ.

ಇದನ್ನೂ ಓದಿ | Bullock attack : ಸಾಗರದಲ್ಲಿ ಬಾಲಕನ ಮೇಲೆ ಗೂಳಿ ದಾಳಿ, ಕೊಂಬಿನಿಂದ ಎತ್ತಿ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಿ.ಕೆ. ಪಾಳ್ಯ ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಸುಮಾರು 32 ವರ್ಷ ವಯಸ್ಸಿನ ಮಹಿಳೆಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಕೆರೆಯಲ್ಲಿ ಶವ ತೇಲುತ್ತಿರುವುದನ್ನು ನೋಡಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ಪರಿಶೀಲನೆ ನಡೆಸಿ, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬನ್ನೇರುಘಟ್ಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಣ್ಣೆಯಿಂದ ಅಟ್ಟಾಡಿಸಿ ಹೊಡೆದು ಯುವಕನ ಹತ್ಯೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ಇಲ್ಲಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಳ್ಳಣ್ಣ ಗಾರ್ಡನ್‌ನಲ್ಲಿ ಯುವಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆ (Murder case) ಮಾಡಲಾಗಿದೆ. ಸತೀಶ್ (22) ಮೃತಪಟ್ಟ ವ್ಯಕ್ತಿ. ದೊಣ್ಣೆಯಿಂದ ತಲೆಗೆ ಹೊಡೆದ ಕಾರಣದಿಂದ ತೀವ್ರ ರಕ್ತಸ್ರಾವವಾಗಿ ಸತೀಶ್‌ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Crime news: ರೈಲು ಬೋಗಿಯಲ್ಲಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರಯಾಣಿಕ, 8 ಮಂದಿಗೆ ಸುಟ್ಟ ಗಾಯ, ಮೂವರ ಶವ ಪತ್ತೆ

ಹತ್ಯೆ ಮಾಡಿ ಬಳಿಕ ಹಂತಕರು ರೈಲ್ವೆ ಟ್ರಾಕ್‌ ಸಮೀಪದ ಖಾಲಿ ಜಾಗದಲ್ಲಿ ಶವ ಎಸೆದು ಪರಾರಿಯಾಗಿದ್ದಾರೆ. ಏಪ್ರಿಲ್ 2ರ ತಡರಾತ್ರಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೆ.ಜಿ.ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಭೇಟಿ ನೀಡಿದ್ದು, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ರಿಪ್ಪನ್‌ಪೇಟೆಯಲ್ಲಿ ಬೈಕ್‌ ಡಿಕ್ಕಿ, ಇಬ್ಬರಿಗೆ ತೀವ್ರ ಗಾಯ

ಶಿವಮೊಗ್ಗ: ಶಿವಮೊಗ್ಗದ ಗರ್ತಿಕೆರೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (road accident) ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿದೆ. ಪಾದಚಾರಿ ಹಾಗೂ ಚಾಲಕ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಗಾಯಾಳುಗಳನ್ನು ಗರ್ತಿಕೆರೆ ನಿವಾಸಿ ನದೀಮ್ (22), ಚಿನ್ನಪ್ಪ(54) ಎಂದು ಗುರುತಿಸಲಾಗಿದೆ.

ಬೈಕಿನಲ್ಲಿ ನದೀಮ್ ಗರ್ತಿಕೆರೆ ಕಡೆಯಿಂದ ಮನೆಗೆ ತೆರಳುವಾಗ ದುರ್ಘಟನೆ ನಡೆದಿದೆ. ಪಾದಚಾರಿ ಚಿನ್ನಪ್ಪ ಅವರಿಗೆ ಬೈಕ್ ಡಿಕ್ಕಿಯಾಗಿದೆ. ನಂತರ ಬೈಕ್ ಪ್ರೌಢಶಾಲಾ ನಾಮಫಲಕಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರಿಗೂ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Road accident : ಸ್ಟೇರಿಂಗ್‌ ರಾಡ್‌ ತುಂಡಾಗಿ ಗದ್ದೆಗೆ ನುಗ್ಗಿದ ಕೆಎಸ್ಸಾರ್ಟಿಸಿ ಬಸ್‌; ಬಸ್‌ನಲ್ಲಿದವರಿಗೆ ಏನಾಯಿತು?

Exit mobile version