Site icon Vistara News

Modi In Karnataka | ಎರಡು ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ

modi in bengaluru

ಬೆಂಗಳೂರು: ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಬೆಳಗ್ಗೆ ೧೧.೫೫ಕ್ಕೆ ಯಲಹಂಕ ವಾಯುನೆಲೆಗೆ ಆಗಮಿಸಿದರು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಸರ್ಕಾರದ ಸಚಿವರುಗಳು ಸ್ವಾಗತಿಸಿದರು.

ಯಲಹಂಕ ವಾಯುನೆಲೆಯಿಂದ ಹೆಲಿಕಾಪ್ಟರ್‌ ಮೂಲಕ ತೆರಳಲಿರುವ ಪ್ರಧಾನಿ ಮೇಕ್ರಿ ಸರ್ಕಲ್‌ ಬಳಿಯಿರುವ ಭಾರತೀಯ ವಾಯುಸೇನೆ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಭಾರತೀಯ ವಿಜ್ಞಾನ ಮಂದಿರಕ್ಕೆ ತೆರಳಲಿದ್ದಾರೆ.

ಐಐಎಸ್‌ಸಿಯಲ್ಲಿ ₹280 ಕೋಟಿ ಮೊತ್ತದ ಸೆಂಟರ್ ಫಾರ್ ಬ್ರೇನ್ ರೀಸರ್ಚ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಸಿಬಿಆರ್‌ ಕೇಂದ್ರವು ಗ್ರಾಮೀಣ ಕರ್ನಾಟಕದಲ್ಲಿ ನಡೆಸಲಾಗುತ್ತಿರುವ ಪ್ರಮುಖ ಸಂಶೋಧನೆ ಕೇಂದ್ರವಾಗಲಿದೆ.

ಮುಖ್ಯವಾಗಿ ಡಿಮೆನ್ಷಿಯಾ ಖಾಯಿಲೆಯ ಪ್ರಾರಂಭವನ್ನು ವಿಳಂಬಗೊಳಿಸುವ ಹಾಗೂ ಅದರ ಬೆಳವಣಿಗೆಯ ಸಾಕ್ಷ್ಯಾಧಾರಿತ ಸಾರ್ವಜನಿಕ ಆರೋಗ್ಯ ಪರಿಹಾರಗಳನ್ನು ಈ ಸಂಸ್ಥೆ ಒದಗಿಸುತ್ತದೆ. ಐಐಎಸ್‌ಸಿ ಆವರಣದಲ್ಲೆ ₹೪೨೫ ಕೋಟಿ ಮೊತ್ತದಲ್ಲಿ ಬಾಗ್ಚಿ ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 832 ಹಾಸಿಗೆಗಳ ಈ ಆಸ್ಪತ್ರೆಯು, ವಿಜ್ಞಾನ ಹಾಗೂ ಇಂಜಿನಿಯರಿಂಗ್‌ನಲ್ಲಿನ ಐಐಎಸ್‌ಸಿಯ ಶತಮಾನದಷ್ಟು ಹಳೆಯ ನೈಪುಣ್ಯತೆಯ ಸಂಪೂರ್ಣ ಲಾಭವನ್ನು ಪಡೆದುಕೊಂಡು ಒಂದೇ ಆವರಣದಲ್ಲಿ ಒಟ್ಟುಗೂಡಿಸಲಿದೆ.

ಬೆಂಗಳೂರಿನ ಜ್ಞಾನಭಾರತಿ ಆವರಣಕ್ಕೆ ತೆರಳುವ ಮೋದಿ, ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಲಾಗಿರುವ ೧೫೦ ಐಟಿಐಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ₹೪,೭೩೬ ಕೋಟಿ ಮೊತ್ತದ ಈ ಯೋಜನೆಯಿಂದ ಪ್ರತಿ ವರ್ಷ ೧.೨ ಲಕ್ಷ ವಿದ್ಯಾರ್ಥಿಗಳುತರಬೇತಿ ಪಡೆಯಲಿದ್ದಾರೆ. ಅದೇ ಆವರಣದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಬೇಸ್‌) ಉದ್ಘಾಟನೆ ಹಾಗೂ ಅಂಬೇಡ್ಕರ್‌ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.

ನಂತರ ಕೊಮ್ಮಘಟ್ಟದಲ್ಲಿ ಬೆಂಗಳೂರು ಸಬ್‌ಅರ್ಬನ್‌ ಯೋಜನೆಗೆ ಶಂಕುಸ್ಥಾಪನೆ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ದೇಶದಲ್ಲೆ ಪ್ರಪ್ರಥಮ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ನಿಲ್ದಾಣ(ಸರ್‌.ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌) ಉದ್ಘಾಟಿಸಲಿದ್ದಾರೆ. ಸಂಜೆ ವೇಳೆಗೆ ಮೈಸೂರಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿ ನವದೆಹಲಿಗೆ ವಾಪಸಾಗಲಿದ್ದಾರೆ.

ಬಿಗಿ ಭದ್ರತೆ

ಪ್ರಧಾನಿ ಮೋದಿಯವರು ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಒದಗಿಸಲಾಗಿದೆ. ದಾರಿಯುದ್ದಕ್ಕೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ೧೦ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | Modi Karnataka Visit | ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ ಇಂದಿನಿಂದ ಆರಂಭ

Exit mobile version