ಬೆಂಗಳೂರು: ಕರ್ನಾಟಕದ ಕಾರಾಗೃಹಗಳಲ್ಲಿರುವ ಸಜಾ ಕೈದಿಗಳಿಗೆ ಅವರ ದುಡಿಮೆ ಸಂಬಳವನ್ನು ಹೆಚ್ಚು ಮಾಡಲಾಗಿದೆ. ಊಟ, ವಸತಿ, ವೈದ್ಯಕೀಯ ಶುಲ್ಕ ಜೊತೆಗೆ ಕೈದಿಗಳ ಶ್ರಮಕ್ಕೆ ತಕ್ಕಂತೆ ಸಂಬಳ ಹೆಚ್ಚಿಸಲಾಗಿದೆ. ಪ್ರಸ್ತುತ, ಹೊರಗಡೆ ಕೂಲಿ ಕೆಲಸಕ್ಕೆ ಹೋಗುವವರಿಗಿಂತಲೂ ಜೈಲಿನಲ್ಲಿ ದುಡಿಯುತ್ತಿರುವ ಕೈದಿಗಳ ಸಂಬಳವೇ ಅಧಿಕವಾಗಿದೆ ಎಂದು ಕಂಡುಬಂದಿದೆ.
ಕಠಿಣ ಕಾರಾಗೃಹ ಸಜೆ ವಿಧಿಸಿರುವ ಕೈದಿಗಳಿಗೆ ಕಡ್ಡಾಯವಾಗಿ ಕೆಲಸ ನೀಡಲಾಗುತ್ತದೆ. ಸಾಮಾನ್ಯ ಸಜಾ ಕೈದಿಗಳಿಗೆ ಅವರ ಒಪ್ಪಿಗೆ ಪಡೆದು ಮಾತ್ರ ಕೆಲಸ ನೀಡಲಾಗುತ್ತದೆ. ಯಾವುದೇ ಕುಶಲ ಕೆಲಸ ಗೊತ್ತಿಲ್ಲದ ಕೈದಿಗೆ ದಿನಕ್ಕೆ 524 ರೂಪಾಯಿ ಸಂಬಳ ನೀಡಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೂ ತಿಂಗಳಿಗೆ 13,624 ರೂಪಾಯಿ ಗಳಿಕೆಯಾಗುತ್ತದೆ. ಒಟ್ಟು ಕೈದಿಗಳ ವರ್ಷದ ಸಂಬಳಕ್ಕಾಗಿಯೇ 58,28,34,720 ರೂಪಾಯಿ ಭರಿಸಲಾಗುತ್ತಿದೆ. ಊಟ, ವಸತಿ, ವೈದ್ಯಕೀಯ ವೆಚ್ಚಗಳು ಸಂಬಳ ಹೊರತುಪಡಿಸಿ ಪ್ರತ್ಯೇಕವಾಗಿವೆ.
ಇತ್ತೀಚೆಗೆ ಕೈದಿಗಳ ಸಂಬಳವನ್ನು ರಾಜ್ಯ ಗೃಹ ಇಲಾಖೆ ಮೂರುಪಟ್ಟು ಜಾಸ್ತಿ ಮಾಡಿದೆ. ದೇಶದಲ್ಲಿ ಹೀಗೆ ಕೈದಿಗಳಿಗೆ ಅತಿ ಹೆಚ್ಚು ಸಂಬಳ ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆರಂಭದ 1 ವರ್ಷ 524 ರೂಪಾಯಿ ನಿಗದಿ ಆಗಿರುತ್ತದೆ. ಒಂದು ವರ್ಷ ಅನುಭವದ ಬಳಿಕ ತರಬೇತಿ ಕೆಲಸಗಾರ ಬಂದಿ ಎಂದು ಪರಿಗಣನೆ. ಆಗ ಒಬ್ಬ ಕೈದಿಗೆ ಸಿಗುವ ಸಂಬಳ ದಿನಕ್ಕೆ 548 ರೂಪಾಯಿ. ವಾರದ ರಜೆ ಪಡೆದು ಕೆಲಸ ಮಾಡಿದರೆ ಸಿಗುವ ಸಂಬಳ 14,248 ರೂಪಾಯಿ. ಎರಡು ವರ್ಷ ಅನುಭವ ಆದ್ರೆ ಅರೆ ಕುಶಲ ಬಂದಿ ಎಂದು ಪರಿಗಣನೆ. ಆಗ ಕೈದಿಗೆ ಸಿಗುವ ಸಂಬಳ ದಿನಕ್ಕೆ 615 ರೂಪಾಯಿ. ವಾರದ ರಜೆ ಪಡೆದು ಕೆಲಸ ಮಾಡಿದರೆ ತಿಂಗಳಿಗೆ 15,990 ರೂಪಾಯಿ. ಮೂರು ವರ್ಷ ಅನುಭವದ ಬಳಿಕ ಕುಶಲ ಬಂದಿ ಎಂದು ಪರಿಗಣನೆ. ಆಗ ಕೈದಿಗೆ ದಿನಕ್ಕೆ ಸಿಗುವ ಸಂಬಳ 663 ರೂಪಾಯಿ. ವಾರದ ರಜೆ ಪಡೆದು ಸಿಗುವ ತಿಂಗಳ ಸಂಬಳ 17,238 ರೂಪಾಯಿ.
ಇದನ್ನೂ ಓದಿ | ಸಂಪುಟ ನಿರ್ಣಯ | ಸ್ವಾತಂತ್ರೋತ್ಸವ ಪ್ರಯುಕ್ತ 42 ಕೈದಿಗಳ ಬಿಡುಗಡೆ ಹಾಗೂ ಇನ್ನಿತರ ನಿರ್ಧಾರಗಳು
ದೆಹಲಿಯ ಜೈಲುಗಳಲ್ಲಿ ಮಾತ್ರ ಕರ್ನಾಟಕಕ್ಕಿಂತ ಜಾಸ್ತಿ, ಅಂದರೆ ದಿನಕ್ಕೆ 308 ರೂಪಾಯಿ ನೀಡಲಾಗುತ್ತಿದೆ. ತಮಿಳುನಾಡಿನ ಜೈಲುಗಳಲ್ಲಿ ದಿನಕ್ಕೆ 200 ರೂಪಾಯಿ ನೀಡಲಾಗುತ್ತಿದೆ. ಇದನ್ನು ಬಿಟ್ಟು ಯಾವ ರಾಜ್ಯದಲ್ಲೂ ಕೈದಿಗಳ ದಿನದ ಕೂಲಿ 200 ರೂಪಾಯಿ ಮುಟ್ಟಿಲ್ಲ.
ಇಷ್ಟೆಲ್ಲ ಸಂಬಳ ನೀಡಿ ಕೈದಿಗಳಿಂದ ಕೈಮಗ್ಗ, ಟೈಲರಿಂಗ್, ಕಬ್ಬಿಣದ ಕೆಲಸ (ವೆಲ್ಡಿಂಗ್), ಫಿನಾಯಿಲ್ ತಯಾರಿಕೆ, ಸೋಪು ತಯಾರಿಕೆ, ಪ್ರಿಂಟಿಂಗ್ ಪ್ರೆಸ್, ಕಾರ್ಪೆಂಟರ್, ಬೇಕರಿ, ಜೈಲು ನಿರ್ವಹಣೆಯ ಸಂಬಂಧ ಕೆಲವು ಕೆಲಸಗಳನ್ನು ಮಾಡಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳಿವೆ. 54 ಕಾರಾಗೃಹಗಳಲ್ಲಿ ಶಿಕ್ಷೆಗೊಳಗಾಗಿರುವ ಕೈದಿಗಳ ಸಂಖ್ಯೆ 3565.
ಇದನ್ನೂ ಓದಿ | Ganja in jail | ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಸ್ವಸ್ಥನಾಗಿದ್ದ ವಿಚಾರಣಾಧೀನ ಕೈದಿ ಜೇಬಲ್ಲಿ ಗಾಂಜಾ!