ಬೆಂಗಳೂರು: ಹಬ್ಬಗಳು ಬಂತೆಂದರೆ ಸಾಕು ಜನರು ರಾಜಧಾನಿಯಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಕಾತರರಾಗಿರುತ್ತಾರೆ. ಆದರೆ, ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗೋಣ ಎಂದು ಕಾದಿರುವ ಜನರಿಗೆ ಈಗ ಬಸ್ ಟಿಕೆಟ್ ದರ ಏರಿಕೆ (Bus Fare Hike) ಬಿಸಿ ತಟ್ಟಿದೆ. ಖಾಸಗಿ ಬಸ್ ಮಾಲೀಕರು ಹಬ್ಬಕ್ಕೆ ಹೋಗುವವರನ್ನೇ ಟಾರ್ಗೆಟ್ ಮಾಡಿರುವುದರಿಂದ ಟಿಕೆಟ್ ದರ ದುಪ್ಪಟ್ಟಾಗಿರುವುದು ಕಂಡುಬಂದಿದೆ.
ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಡಿದರೆ ಕ್ರಮ ಎಂದು ಸಾರಿಗೆ ಆಯುಕ್ತರು ಆದೇಶ ನೀಡಿದ್ದರೂ ಖಾಸಗಿ ಬಸ್ ಮಾಲೀಕರು ಕ್ಯಾರೇ ಎನ್ನದೆ ಟಿಕೆಟ್ ದರವನ್ನು ಹೆಚ್ಚಿಸುತ್ತಲೇ ಇದ್ದಾರೆ. ಸಾಮಾನ್ಯ ದಿನಗಳಲ್ಲಿ 500-700 ರೂ. ಇದ್ದ ಟಿಕೆಟ್, ಇದೀಗ ಹಬ್ಬ ಇರುವ ಕಾರಣಕ್ಕೆ 1500 – 2500 ರೂ. ಹೆಚ್ಚಳವಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್ ದರ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆ. ಇದರಿಂದ ಊರಿಗೆ ಹೋಗಲು ಖಾಸಗಿ ಬಸ್ ಬುಕ್ ಮಾಡಲು ಮುಂದಾದ ಜನರು ಕಂಗಾಲಾಗಿದ್ದಾರೆ.
ಇದನ್ನೂ ಓದಿ | Ganesh Chaturthi: ರಾಜ್ಯಾದ್ಯಂತ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ
ಸೆಪ್ಟೆಂಬರ್ 17ರಂದು ಭಾನುವಾರ ಹಾಗೂ 18-19 ರಂದು ಗೌರಿ-ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಂಡ ಖಾಸಗಿ ಬಸ್‌ಗಳು, ಟಿಕೆಟ್ ದರವನ್ನು ಬೇಕಾಬಿಟ್ಟಿ ಹೆಚ್ಚಳ ಮಾಡಿದೆ. ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಇಂದಿನ ದರ ಹಾಗೂ ಹಬ್ಬದ ದಿನದ ದರಕ್ಕೂ ಹೋಲಿಕೆ ಮಾಡಿದರೆ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಕೆಲ ಊರುಗಳ ಟಿಕೆಟ್ ದರ ಹೀಗಿದೆ?
ಸೆ.16ರಂದು ಖಾಸಗಿ ಟಿಕೆಟ್ ಬಸ್ ದರ (ಆ್ಯಪ್)
ಬೆಂಗಳೂರು-ಮಂಗಳೂರು: 900 ರಿಂದ 1800 ರೂ.
ಬೆಂಗಳೂರು-ಉಡುಪಿ: 1010- 1850 ರೂ.
ಬೆಂಗಳೂರು-ಬಳ್ಳಾರಿ: 899-1500 ರೂ.
ಬೆಂಗಳೂರು-ಬೆಳಗಾವಿ: 2150 -3500 ರೂ.
ಬೆಂಗಳೂರು-ರಾಯಚೂರು: 800- 2100 ರೂ.
ಹಬ್ಬದ ಹಿಂದಿನ ದಿನದ ದರ (ಸೆ.17)
ಬೆಂಗಳೂರು-ಮಂಗಳೂರು: 650 ರಿಂದ 900 ರೂ.
ಬೆಂಗಳೂರು-ಉಡುಪಿ: 720 ರಿಂದ 1100 ರೂ.
ಬೆಂಗಳೂರು-ಬಳ್ಳಾರಿ: 800 ರಿಂದ 1350 ರೂ.
ಬೆಂಗಳೂರು-ಬೆಳಗಾವಿ: 750ರಿಂದ 980 ರೂ.
ಬೆಂಗಳೂರು-ರಾಯಚೂರು: 890 ರಿಂದ 1100 ರೂ.
ಇತ್ತ ಖಾಸಗಿ ಬಸ್‌ಗಳ ದರ ಏರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಆರ್‌ಟಿಒ ಅಧಿಕಾರಿಗಳು ಫೀಲ್ಡ್‌ಗಿಳಿದಿದ್ದು, ದುಪ್ಪಟ್ಟು ದರ ನಿಗದಿ ಮಾಡಿರುವ ಕೆಲ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸ್ತಿದ್ದಾರೆ. ಆದರೂ ಖಾಸಗಿ ಬಸ್‌ಗಳ ಸುಲಿಗೆಗೆ ಬ್ರೇಕ್ ಬಿದ್ದಿಲ್ಲ. ಸಾರಿಗೆ ಇಲಾಖೆ ಆಯುಕ್ತರ ಆದೇಶಕ್ಕೂ ಕಿಮ್ಮತ್ತಿಲ್ಲ ಎಂಬಂತೆ ಆಗಿದೆ.
ಇನ್ನೂ ಖಾಸಗಿ ಬಸ್‌ಗಳ ಸುಲಿಗೆ ವಿಚಾರ ಸಾರಿಗೆ ಇಲಾಖೆ ಅಧಿಕಾರಿಗಳ ಕ್ಷೀಪ್ರ ಕಾರ್ಯಚಾರಣೆಯಲ್ಲಿ ಈವರೆಗೆ ಲಕ್ಷ ಲಕ್ಷ ದಂಡ ವಸೂಲಿ ಮಾಡಲಾಗಿದೆ. ಕಳೆದ ಎರಡು ದಿನದಲ್ಲೇ 742 ಪ್ರಕರಣ ದಾಖಲಾಗಿದ್ದು, ಒಟ್ಟು 9 ಲಕ್ಷ ರುಪಾಯಿ ದಂಡವನ್ನು ಖಾಸಗಿ ಬಸ್ ಮಾಲೀಕರಿಂದ ವಸೂಲಿ ಮಾಡಲಾಗಿದೆ. ಇನ್ನು ಹಬ್ಬದ ಸೀಸನ್ ಆಗಿದ್ದರಿಂದ ಸರ್ಕಾರಿ ಸಾರಿಗೆ ನಿಗಮಗಳಿಂದ ಸಹ ಹೆಚ್ಚುವರಿ ಬಸ್ ಬಿಡಲಾಗಿದೆ. ಖಾಸಗಿ ಬಸ್‌ಗಳ ಬೆಲೆ ಏರಿಕೆ ವಿರುದ್ಧ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ | Ganesh chaturthi : ಈ ಏರಿಯಾದಲ್ಲಿ ಗಣೇಶ ಕೂರಿಸುವಂತಿಲ್ಲ, ಡಿಜೆಗೆ ಅವಕಾಶವೇ ಇಲ್ಲ; ಪೊಲೀಸ್ ಗೈಡ್‌ಲೈನ್ಸ್!
ಒಂದು ಕಡೆ ಶಕ್ತಿ ಯೋಜನೆ ಮೂಲಕ ಫ್ರೀ ಬಸ್ ಇರುವ ಖುಷಿಯಲ್ಲಿ ಮಹಿಳೆಯರಿದ್ದರೆ, ಮತ್ತೊಂದೆಡೆ ಹಬ್ಬಕ್ಕೆ ಊರಿಗೆ ಹೋಗೋ ಆತುರದಲ್ಲಿರೋ ಪ್ರಯಾಣಿಕರು ಪ್ರೈವೇಟ್ ಬಸ್ ಏರಿದರೆ ಜೇಬು ನೋಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಹಬ್ಬಕ್ಕೆ ಒಂದೇ ದಿನ ಬಾಕಿ ಇರುವವಾಗಲೇ ಖಾಸಗಿ ಬಸ್‌ಗಳ ಟಿಕೆಟ್ ದರ ಗಗನಕ್ಕೆ ಏರಿದ್ದು, ಎಷ್ಟೇ ಫೈನ್ ಹಾಕಿದರೂ ಟಿಕೆಟ್ ದರ ಮಾತ್ರ ಇಳಿಕೆಯಾಗಿಲ್ಲ. ಖಾಸಗಿ ಬಸ್‌ಗಳ ಸುಲಿಗೆಗೆ ಬ್ರೇಕ್ ಹಾಕುವಲ್ಲಿ ಸಾರಿಗೆ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.