ಔರಾದ್ (ಬೀದರ್): ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಅನ್ನು ಖಾಸಗಿ ವ್ಯಕ್ತಿಯೊಬ್ಬ ಚಲಾಯಿಸಿ, ಕ್ರೂಸರ್‌ಗೆ ಡಿಕ್ಕಿ ಹೊಡೆದ ಘಟನೆ (Bus Accident) ಪಟ್ಟಣದಲ್ಲಿ ಸೋಮವಾರ ನಡೆದಿದೆ. ಚಾಲಕ ಡಿಪೋ ನಿಯಂತ್ರಣಾಧಿಕಾರಿ ಬಳಿ ತೆರಳಿದ್ದಾಗ ವ್ಯಕ್ತಿಯೊಬ್ಬ ಬಸ್ ಚಾಲನೆ ಮಾಡಿದ್ದು, ಈ ವೇಳೆ ಬಸ್ ಸ್ಟಾಂಡ್ ಎದುರಿನ ಕ್ರೂಸರ್‌ಗೆ ಬಸ್ ಡಿಕ್ಕಿ ಹೊಡೆದಿದೆ.
ಬೀದರ್‌ಗೆ ಹೋಗಲು ಬಸ್ ಚಾಲಕ ರಾಜು ಎಂಬುವವರು ಔರಾದ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ನಿಯಂತ್ರಣಾಧಿಕಾರಿ ಬಳಿ ಅನುಮತಿ ಪಡೆಯಲು ಹೋಗಿದ್ದರು. ಈ ವೇಳೆ ಬಸ್‌ನಲ್ಲಿ ಕುಳಿತ ಕರಂಜಿ (ಕೆ) ಗ್ರಾಮದ ಯಶೆಪ್ಪ ಹಣಮಂತ ಸೂರ್ಯವಂಶಿ ಎನ್ನುವ ಪ್ರಯಾಣಿಕ ಚಾಲಕನಂತೆ ಸಿನಿಮಾ ರೀತಿಯಲ್ಲಿ ಬಸ್ ಓಡಿಸಿದ್ದಾನೆ. ಈ ವೇಳೆ ನಿಲ್ದಾಣದ ಎದುರುಗಡೆ ನಿಂತಿರುವ ಕ್ರೂಸರ್‌ಗೆ ಬಸ್ ಎರಡು ಬಾರಿ ಡಿಕ್ಕಿ ಹೊಡೆದಿದ್ದರಿಂದ ಪ್ರಯಾಣಿಕರು ಭಯಭೀತರಾಗಿ ಕೂಗಾಡಿದ್ದಾರೆ.
ಇದನ್ನೂ ಓದಿ | Attempt Murder Case: ಜೈ ಶ್ರೀ ರಾಮ್ ಅನ್ನಂಗಿಲ್ಲ, ಈಗಿರೋದು ನಮ್ಮ ಸರ್ಕಾರವೆಂದು ಚಾಕು ಇರಿದ ಗುಂಪು!
ಇನ್ನು ರಸ್ತೆಯ ಮೇಲಿರುವ ಜನರು ಜೀವ ರಕ್ಷಣೆಗಾಗಿ ಓಡಿದ್ದು ಕಂಡು ಬಂತು. ಕ್ರೂಸರ್ ವಾಹನದ ಹಿಂಬದಿ ಸಂಪೂರ್ಣವಾಗಿ ಜಖಂಗೊಂಡಿದೆ. ಕ್ರೂಸರ್‌ನಲ್ಲಿ ಕುಳಿತ 5 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಬಸ್ ರಸ್ತೆಯ ಡಿವೈಡರ್ ಮೇಲೆ ನಿಂತಿದೆ. ಬಳಿಕ ಪ್ರಯಾಣಿಕ ಯಶೆಪ್ಪ ಹಣಮಂತ ಸೂರ್ಯವಂಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ಬೀದರ್ ಘಟಕ 2ಕ್ಕೆ ಸೇರಿದ ವಾಹನ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಘಟಕ ವ್ಯವಸ್ಥಾಪಕ ಸೋಮಲಾ ರಾಠೋಡ್ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿ ತಿಳಿದ ಔರಾದ್ ಪೊಲೀಸ್ ಠಾಣೆಯ ಪಿಎಸ್‌ಐ ಮಡಿವಾಳಪ್ಪ ಬಾಗೋಡಿ ಅವರು ಸಿಬ್ಬಂದಿ ಜತೆ ಆಗಮಿಸಿ ಬಸ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.