ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಕ್ಷೇತ್ರ ಸಂಕಷ್ಟಕೀಡಾಗಿದ್ದು, ಈ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಒಕ್ಕೂಟ ಬಂದ್ (Transport Strike) ಮಾಡಲು ನಿರ್ಧರಿಸಿದೆ. ಮತ್ತೊಂದೆಡೆ ಬಂದ್‌ನಿಂದ ಪ್ರಯಾಣಿಕರು ಆತಂಕಗೊಳ್ಳುವ ಅಗತ್ಯವಿಲ್ಲ, ಸರ್ಕಾರದಿಂದ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು, ಸೆ.11ರಂದು ಯಾವುದೇ ಆಟೋ, ಕ್ಯಾಬ್, ಶಾಲಾ ಬಸ್ ಹಾಗೂ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸದಂತೆ ನಿರ್ಧಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಈ ಅಸೌಕರ್ಯಕ್ಕಾಗಿ ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಕಳುಹಿಸುವ ಪೋಷಕರ ಬಳಿ ಈಗಾಗಲೇ ಕ್ಷಮಾಪಣೆಯನ್ನು ಕೇಳಿದ್ದಾರೆ. ಆದರೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತ್ರ, ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ಎಲ್ಲದಕ್ಕೂ ನಾವು ರೆಡಿಯಾಗಿದ್ದೇವೆ ಹೇಳಿದ್ದಾರೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ದಿನದಿಂದ ಖಾಸಗಿ ಸಾರಿಗೆ ವಲಯ ಆದಾಯವಿಲ್ಲದೆ ಪೂರ್ಣ ಪ್ರಮಾಣದಲ್ಲಿ ಕುಸಿದುಹೋಗಿದೆ. ಇದರಿಂದ ಚಾಲಕರು ಹಾಗೂ ಮಾಲೀಕರಿಗೆ ಅನುಕೂಲವಾಗುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು 32ಕ್ಕೂ ಹೆಚ್ಚು ಸಂಘಟನೆಗಳು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದವು. ಆಟೋ, ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಹಾಗೂ ಬಸ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು.
ಇದನ್ನೂ ಓದಿ | India vs Bharat row: ದೇಶದ ಹೆಸರಿನಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದ ದಿನೇಶ್ ಗುಂಡೂರಾವ್
ಈ ಬೇಡಿಕೆಗಳ ವಿಚಾರವಾಗಿ ಸಾರಿಗೆ ಸಚಿವರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಸಾಲು ಸಾಲು ಸಭೆ ನಡೆಸಿದ್ದರು. ಆದರೆ, ಸಿಎಂ ಜತೆ ನಿಗದಿಯಾಗಿದ್ದ ಸಭೆಗೆ ಎಲ್ಲ ಸಂಘಟನೆಗಳಿಗೆ ಅವಕಾಶ ಕಲ್ಪಿಸದ ಹಿನ್ನೆಲೆ ಬಂದ್‌ಗೆ ಕರೆಕೊಟ್ಟಿದ್ದ ಪ್ರಮುಖ ಒಕ್ಕೂಟಕ್ಕೆ ಹಿನ್ನೆಡೆಯಾಗಿತ್ತು. ಹೀಗಾಗಿ ಒಕ್ಕೂಟ ಮತ್ತೊಮ್ಮೆ ಬಂದ್ (Private Transport Strike) ನಡೆಸಲು ಮುಂದಾಗಿದೆ.
ಆಟೋ, ಕ್ಯಾಬ್, ಮ್ಯಾಕ್ಸಿಕ್ಯಾಬ್, ಬಸ್‌ಗಳ ಪ್ರತ್ಯೇಕ ಸಂಘಟನೆಗಳು ಸರ್ಕಾರದ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದವು. ಅವುಗಳಲ್ಲಿ ಭಾಗಶಃ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರೆ, ಸರ್ಕಾರ ಅದನ್ನು ನೆರವೇರಿಸುವಲ್ಲಿ ವಿಫಲವಾಗಿದೆ ಎಂಬ ಕಾರಣದಿಂದ ಮತ್ತೊಮ್ಮೆ ಬಂದ್‌ಗೆ ಕರೆ ನೀಡಲಾಗಿದೆ.
ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯೇ ಇಲ್ಲ ಎಂದ ಸಾರಿಗೆ ಸಚಿವ
ಬಂದ್ ದಿನ ಇಡೀ ಖಾಸಗಿ ಸಾರಿಗೆ ವಲಯವೇ ಸ್ತಬ್ಧವಾದರೂ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯೇ ಇಲ್ಲ. ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲು ನಾವೆಲ್ಲಾ ಈಗಾಗಲೇ ಪ್ಲ್ಯಾನಿಂಗ್ ಮಾಡಿಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ನಾವು ನಮ್ಮ ಪ್ಲ್ಯಾನ್ ರಿವೀಲ್ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಂದ್‌ಗೆ ಕರೆ ಕೊಟ್ಟ ಒಕ್ಕೂಟಕ್ಕೆ ತಿರುಗೇಟು ನೀಡಿದ್ದಾರೆ.
ಈ ಇಷ್ಟೂ ಬೇಡಿಕೆಗಳ ಪೈಕಿ ಕೆಲವು ಬೇಡಿಕೆಗಳನ್ನು ಖುದ್ದು ತಾನೇ ಈಡೇರಿಸಬಹುದಾಗಿದೆ. ಆದರೆ, ಕೆಲ ಬೇಡಿಕೆಗಳನ್ನು ಈಡೇರಿಸಲು ಆರ್ಥಿಕ ಇಲಾಖೆಯ ಅನುಮತಿ ಬೇಕಿರುವುದರಿಂದ ಸಿಎಂ ಅವರು ನಿರ್ಧಾರ ಮಾಡಬೇಕಿದೆ. ಈ ಹಿನ್ನೆಲೆ ಇನ್ನೂ ಕೆಲ ದಿನಗಳ ಸಮಯ ಬೇಕಾಗಲಿದ್ದು, ಸಂಘಟನೆಗಳು ಅರ್ಥ ಮಾಡಿಕೊಳ್ಳುವಂತೆ ಸಾರಿಗೆ ಸಚಿವರು ಮನವಿ ಮಾಡಿದ್ದಾರೆ. ಆದರೆ, ಸಾರಿಗೆ ಸಚಿವರು ಕೇವಲ ಕೆಲ ಸಂಘಟನೆಗಳಿಗೆ ಮಾತ್ರ ಸಿಎಂ ಭೇಟಿಗೆ ಅವಕಾಶ ಕಲ್ಪಿಸಿದ್ದು ಮೋಸವಾಗಿದ್ದು, ಇದರಿಂದ ನ್ಯಾಯ ಲಭಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬಂದ್‌ಗೆ ಕರೆ ಕೊಟ್ಟಿದೆ.
ಇದನ್ನೂ ಓದಿ | Social Media Harrassment : ಬಿಜೆಪಿ ಪರ ಪೋಸ್ಟ್ ಹಾಕುವವರಿಗೆ ಪೊಲೀಸ್ ದೌರ್ಜನ್ಯ, ಬೆದರಿಕೆ ; ಡಿಜಿಪಿಗೆ ದೂರು
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬೇಡಿಕೆಗಳೇನು?
ಆಟೋಗಳಿಗೆ ಸಂಬಂಧಿಸಿದ ಬೇಡಿಕೆಗಳು:
- ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು
- ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು
- ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ದಪಡಿಸಬೇಕು
- ಏರ್ಪೋರ್ಟ್ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು
- ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು
ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು:
- ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು
- ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
- ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗು ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು
ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು:
- ಖಾಸಗಿ ಬಸ್ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
- ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
- ಖಾಸಗಿ ಬಸ್ಗಳನ್ನ ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು