ಬೆಂಗಳೂರು: ನರೇಂದ್ರ ಮೋದಿ ನಾಲಾಯಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯು ರಾಜ್ಯದಲ್ಲಿ ಮತ್ತೊಂದು (Karnataka Election) ವಿವಾದಕ್ಕೆ ಕಾರಣವಾಗಿದೆ. ಮೋದಿ ವಿಷದ ಹಾವಿದ್ದಂತೆ ಎಂದು ಹೇಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆಯಾಚಿಸಿದ್ದರು. ಈಗ ಅವರ ಮಗ ಇಂತಹ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದರ ಬೆನ್ನಲ್ಲೇ, ಮಗನ ಹೇಳಿಕೆ ಕುರಿತು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, “ಪ್ರಿಯಾಂಕ್ ಖರ್ಗೆ ಹಾಗೆ ಹೇಳಿಯೇ ಇಲ್ಲ” ಎಂದಿದ್ದಾರೆ.
“ಪ್ರಿಯಾಂಕ್ ಖರ್ಗೆ ಹಾಗೆ ಹೇಳಿಕೆ ನೀಡಿಯೇ ಇಲ್ಲ. ಮಾಧ್ಯಮಗಳಲ್ಲಿ ತೋರಿಸುತ್ತಿರುವುದೇ ಬೇರೆ, ಪ್ರಿಯಾಂಕ್ ಖರ್ಗೆ ಹೇಳಿದ್ದೇ ಬೇರೆ. ಮಾಧ್ಯಮದವರು ಮನಸ್ಸಿಗೆ ಬಂದಂತೆ ತೋರಿಸುತ್ತಿದ್ದಾರೆ. ನೀವು ಸುದ್ದಿ ಮಾಡುತ್ತಿದ್ದೀರಿ ಮಾಡಿ” ಎಂದು ಮಾಧ್ಯಮದವರ ಕುರಿತೇ ಖರ್ಗೆ ಬೇಸರ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಕೂಡ, ನಾನು ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಕೇಂದ್ರದ ವಿರುದ್ಧ ವಾಗ್ದಾಳಿ
ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಹರಿಹಾಯ್ದರು. “ಕಾರ್ಮಿಕರ ವೇತನ ಶೇ.5 ರಷ್ಟು ಮಾತ್ರ ಹೆಚ್ಚಾಗಿದೆ. ನಾಲ್ಕು ಕಾನೂನು ತಂದಿದ್ದಾರೆ. ಆದರೆ, ನಾಲ್ಕೂ ಕಾನೂನು ಕಾರ್ಮಿಕರ ವಿರೋಧಿ ಇವೆ. ನಾಲ್ಕು ಕಾನೂನುಗಳನ್ನು ನಾನು ಖಂಡಿಸುತ್ತೇನೆ. ಅವುಗಳನ್ನು ಕೂಡಲೇ ಹಿಂಪಡೆಯಬೇಕು. ಬಹುಮತ ಇದೆ ಅಂತ ಕಾನೂನು ಪಾಸ್ ಮಾಡಿದ್ದಾರೆ. ಬಡವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ” ಎಂದರು.
ಕೇಂದ್ರ ಹೇಳಿದ ಹಾಗೆ ರಾಜ್ಯ ಸರ್ಕಾರ ಕೇಳುತ್ತಿದೆ. ಕರ್ನಾಟಕ ಒಂದು ಪ್ರಗತಿಪರ ರಾಜ್ಯವಾಗಿದೆ. ಮೋದಿ ಹೇಳಿದ ಹಾಗೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಮೋದಿ ಉದ್ಯಮಿಗಳ ಮಾತು ಕೇಳುತ್ತಾರೆ. ಉದ್ಯಮಿಗಳಿಗೆ ಅನುಕೂಲ ಆಗುವ ಹಾಗೆ ಮೋದಿ ಮಾಡಿದ್ದಾರೆ. ಮೊದಲು ಕಾರ್ಮಿಕರಿಗೆ 8 ಗಂಟೆಗಳ ಕಾಲ ಕೆಲಸದ ಅವಧಿ ಇತ್ತು. ಇಂದು ಬ್ರಿಟಿಷ್ ಲಾ ವಾಪಸ್ ತಂದಿದ್ದಾರೆ. 12 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ” ಎಂದು ಟೀಕಿಸಿದರು.
“ಮಹಿಳೆಯರು ಜಮೀನಿನಲ್ಲಿ, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ದೊಡ್ಡ ದೊಡ್ಡ ಕಂಪನಿಗಳು ಕೇಳಿದಾಕ್ಷಣ 12 ಗಂಟೆ ಕೆಲಸ ಮಾಡಲು ಅವಕಾಶ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ ನೀಡಲಾಗಿದೆ. ನಮ್ಮ ದೇಶದ ಮಹಿಳೆಯರು ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇದಕ್ಕೆ ನಮ್ಮ ಚಿಂತೆ ಇರಲಿಲ್ಲ. ಆದರೆ, ದೊಡ್ಡ ಕಂಪನಿಯವರು ಒತ್ತಡ ತರುತ್ತಿದ್ದಾರೆ. ಮಹಿಳೆಯರಿಗೆ ರಾತ್ರಿ ಪಾಳಿ ನೀಡುವಂತೆ ಒತ್ತಡ ತಂದಿದ್ದಾರೆ. ಪಿಎಫ್ ಫಂಡ್ ಹಣವನ್ನು ಉದ್ಯಮಿಗಳಿಗೆ ಸಾಲ ನೀಡುತ್ತಿದ್ದಾರೆ. ಕಡಿಮೆ ಬಡ್ಡಿಗೆ ಸಾಲ ನೀಡುತ್ತಿದ್ದಾರೆ. ಷೇರ್ ಮಾರ್ಕೆಟ್ ಮೇಲೆ ಹಣ ಹೂಡುತ್ತಿದ್ದಾರೆ. ಮಾರ್ಕೆಟ್ ಬಿದ್ದು ಹೊದರೆ ಏನು ಮಾಡುತ್ತಾರೆ? ಕಾರ್ಮಿಕರ ಹಣಕ್ಕೆ ಯಾರು ಗ್ಯಾರಂಟಿ ಕೊಡುತ್ತಾರೆ” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕರಾವಳಿಯಲ್ಲಿ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪ್ರಬಲ ಪೈಪೋಟಿ