ಬೆಂಗಳೂರು: ಪಠ್ಯದಲ್ಲಿ ಇತಿಹಾಸ ತಿರುಚಿ, ಮಹನೀಯರಿಗೆ ಅಪಮಾನ ಮಾಡಲು 150 ಕೋಟಿ ರೂ. ಖರ್ಚು ಮಾಡಲು ತಯಾರಿರುವ ಸರ್ಕಾರದ ಬಳಿ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು 130 ಕೋಟಿ ಹಣ ಇಲ್ಲವೇ? ಎಂದು ಶಾಸಕ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಲ್ಲ. ಕಳೆದ ವರ್ಷ 2 ಜೊತೆ ನೀಡಬೇಕಿದ್ದ ಸರ್ಕಾರ ಕೇವಲ 1 ಜೊತೆ ನೀಡಿ ಸುಮ್ಮನಾಯಿತು. ಈಗ ನಾವು ಕಾಂಗ್ರೆಸ್‌ನಿಂದ ಈ ವಿಷಯವನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದರಿಂದ ರಾಜ್ಯ ಸರ್ಕಾರ ಮಣಿಯಿತು. ಇದಕ್ಕಾಗಿ ಮುಖ್ಯಮಂತ್ರಿಗಳು ಶೂ ಹಾಗೂ ಸಾಕ್ಸ್ ವಿತರಣೆಗೆ 132 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಮಕ್ಕಳ ವಿಚಾರವಾಗಿದ್ದು ಸರ್ಕಾರ ಇದರಲ್ಲಿ ಶೇ. 40ರಷ್ಟು ಕಮಿಷನ್ ಹೊಡೆಯದೇ ಇದ್ದರೆ ಒಳ್ಳೆಯದು ಎಂದು ಟೀಕಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೂ ದೊರೆಯುತ್ತಿಲ್ಲ. ಪ್ರಸ್ತುತ ಪಠ್ಯ ಪರಿಷ್ಕರಣೆಯಲ್ಲಿ ಬಸವಣ್ಣನವರ ಬಗ್ಗೆ ಏನು ಹೇಳಲಾಗಿದೆ? ನಾರಾಯಣಗುರುಗಳ ಪರಿಚಯ ಇಲ್ಲ, ಅಂಬೇಡ್ಕರ್, ಶಂಕರಾಚಾರ್ಯರ ಕುರಿತು ಏನು ಹೇಳಲಾಗಿದೆ? ಅವೆಲ್ಲವೂ ಗುಣಮಟ್ಟದ ಶಿಕ್ಷಣವೇ? ಎಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರನ್ನು ಪ್ರಶ್ನಿಸಿದ್ದಾರೆ. ರಾಯಚೂರು, ಕಲಬುರಗಿ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಈ ಬಗ್ಗೆ ನಿಮ್ಮಲ್ಲಿ ಯಾವ ಯೋಜನೆ ಇದೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಮ್ಮ ಕೈಗೆ ತನಿಖೆ ಒಪ್ಪಿಸಲಿ
ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಕಾಂಗ್ರೆಸ್ ಬಳಿ ಯಾವ ಸಾಕ್ಷ್ಯಗಳಿವೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ನಡೆಸಲು ಸರ್ಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ. ಅವರಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮ್ಮ ಕೈಗೆ ನೀಡಲಿ, ನಾವು ಮಾಡಿ ತೋರಿಸುತ್ತೇವೆ ಎಂದು ಪ್ರಿಯಾಂಕ್ ಸವಾಲು ಹಾಕಿದ್ದಾರೆ.
ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲದಿದ್ದರೆ ನ್ಯಾಯಾಂಗ ತನಿಖೆ ನೀಡಲು ಭಯವೇಕೆ? ನಿಮ್ಮ ಹೆಸರು ಅಥವಾ ಬೇರೆಯವರ ಹೆಸರು ಬರುತ್ತದೆ ಎಂಬ ಭಯವಿದೆಯೇ? ನೀವು ನಿಜವಾಗಿಯೂ ತಪ್ಪಿತಸ್ಥರಲ್ಲದಿದ್ದರೆ, ನ್ಯಾಯಾಂಗ ತನಿಖೆ ನೀಡಿ. ಅದರ ಹೊರತಾಗಿ ಬೇರೆ ಮಾತು ಬೇಡ ಎಂದು ಬಿಜೆಪಿ ಮುಖಂಡರಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ʼಬೇಸ್ʼ ಕುರಿತು ಕಾಂಗ್ರೆಸ್ ಕ್ರೆಡಿಟ್ ವಾರ್ ಮುಂದುವರಿಕೆ: ಈಗ ಪ್ರಿಯಾಂಕ್ ಖರ್ಗೆ ಸರತಿ