ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್(ಬೇಸ್) ಸ್ಥಾಪನೆಯ ಶ್ರೇಯಕ್ಕಾಗಿ ಕಾಂಗ್ರೆಸ್ ಪ್ರಯತ್ನ ಮುಂದುವರಿದಿದೆ. ಬೇಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಸೋಮವಾರ ಉದ್ಘಾಟನೆ ಮಾಡುವ ದಿನವೇ ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ತಮ್ಮ ಅವಧಿಯಲ್ಲಿ ನಡೆದ ಕಾರ್ಯವನ್ನು ಮೋದಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ನಂತರ ಸುದ್ದಿಗೋಷ್ಠಿ ಸಹ ನಡೆಸಿದ್ದರು. ಇದೀಗ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಹ ಅಖಾಡಕ್ಕಿಳಿದಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಟೀಕಿಸಿರುವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳನ್ನು ತಮ್ಮದೆಂದು ಹೇಳಿಕೊಂಡು ಬೀಗುವ ಜಾಯಮಾನ ಬಿಜೆಪಿಯವರದ್ದಾಗಿದೆ. ಇದೀಗ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಡಾ.ಬಿ. ಆರ್. ಆಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್(ಬೇಸ್) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಉದ್ಘಾಟಿಸಿದ್ದಾರೆ ಎಂದು ಹೇಳಿದ್ದಾರೆ.
ಇದು ನಿಜಕ್ಕು ನಾಚಿಕೆಗೇಡು, ಅವಿವೇಕಿತನದ ಪರಮಾವಧಿ. ಈಗಾಗಲೇ ಇಲ್ಲಿಂದ ಮೂರು ಬ್ಯಾಚ್ ವಿದ್ಯಾರ್ಥಿಗಳು ಇಲ್ಲಿಂದ ಉತ್ತೀರ್ಣರಾಗಿ ಪದವಿ ಪಡೆದಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಉದ್ಘಾಟನೆ ಮಾಡುತ್ತಿರುವುದು ಅಪಹಾಸ್ಯವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬಾಬಾ ಸಾಹೇಬರ 125ನೇ ಜಯಂತಿ ಸ್ಮರಣಾರ್ಥ ಈ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಲಾಯಿತು. ಅದರಂತೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವವಿದ್ಯಾಲಯವನ್ನು ಉದ್ಘಾಟನೆ ಮಾಡಿದ್ದರು. ಇದಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಶ್ರಮಿಸಿದ್ದರು. ಹೀಗೆ ಸ್ಥಾಪನೆಯನ್ನು ಪ್ರಧಾನಿ ಮತ್ತೊಮ್ಮೆ ಉದ್ಘಾಟಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಕರ್ನಾಟಕದ ಮತದಾರರು ಪ್ರಬುದ್ಧರು, ಯುಪಿ ಮತದಾರರಂತಲ್ಲ: ಪ್ರಿಯಾಂಕ್ ಖರ್ಗೆ
ಲಂಡನ್‌ಗೆ ತೆರಳಿ ಅಧ್ಯಯನ, ಪ್ರಾಧ್ಯಾಪಕರ ಜತೆ ಒಪ್ಪಂದ
ವಿವಿ ಸ್ಥಾಪನೆಗೆ ಒಪ್ಪಿಗೆ ಪಡೆದ ಬಳಿಕ ನಾನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ತೆರಳಿ ಸಾಕಷ್ಟು ಅಧ್ಯಯನ ನಡೆಸಿದ್ದೆ. ಅಲ್ಲಿ ನೀಡುವ ಗುಣಮಟ್ಟದ ಶಿಕ್ಷಣವನ್ನು ಇಲ್ಲೂ ನೀಡುವ ಉದ್ದೇಶದಿಂದ ಅಲ್ಲಿನ ವಿವಿ ಜತೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಆ ಸಂಸ್ಥೆಯ ಪ್ರಾಧ್ಯಾಪಕರು ಇಲ್ಲಿಗೆ ಬಂದು ಪಾಠ ಮಾಡುವ ರೀತಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಮೂಲಕ ಇಲ್ಲಿನ ಬಡವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಒದಗಿಸುವುದು ನಮ್ಮ ಉದ್ದೇಶವಾಗಿತ್ತು. ಹೀಗೆ ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್ ಹುಟ್ಟಿಕೊಂಡಿತ್ತು. 2017ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 125 ಕೋಟಿ ರೂ.ಗಳ ಆರಂಭಿಕ ನಿಧಿಯೊಂದಿಗೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ಗವರ್ನಿಂಗ್ ಕೌನ್ಸಿಲ್ ದುರ್ಬಲಗೊಳಿದ ಬಿಜೆಪಿ
ವಿವಿ ಗೌರವದಿಂದ ಹಾಗೂ ಗುಣಮಟ್ಟದಿಂದ ನಡೆದುಕೊಂಡು ಹೋಗಲು ಕಾಂಗ್ರೆಸ್ ಸರ್ಕಾರ ಒಂದು ಗವರ್ನಿಂಗ್ ಕೌನ್ಸಲ್ ಅನ್ನು ಸ್ಥಾಪನೆ ಮಾಡಿತ್ತು. ಅದರಲ್ಲಿ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ ಹಾಗೂ ಸ್ಯಾಮ್ ಪಿತ್ರೋಡಾರಂಥ ಉದ್ಯಮಿಗಳ ಜತೆಗೆ ರಾಷ್ಟ್ರದ ಅತ್ಯುನ್ನತ ಆರ್ಥಿಕ ತಜ್ಞರನ್ನು ನೇಮಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಘ ಪರಿವಾರದವರನ್ನು ಹಾಗೂ ರಾಜಕಾರಣಿಗಳ ಪುತ್ರರನ್ನು(ಬಸವರಾಜ ಹೊರಟ್ಟಿ) ದೊಡ್ಡ ಸ್ಥಾನಕ್ಕೆ ತಂದು ಕೂರಿಸಿ ಅವಿವೇಕಿತನ ಮೆರೆದಿದೆ. ಈಗ ವಿವಿ ಸ್ಥಾಪನೆ ತಮ್ಮ ಕೊಡುಗೆ ಎಂಬಂತೆ ಬಿಂಬಿಸಲು ಹೊರಟಿರುವುದು ದುರದೃಷ್ಟಕರ ಎಂದು ಛೇಡಿಸಿದ್ದಾರೆ.
ಇದನ್ನೂ ಓದಿ | ಇಲ್ಯಾರೂ ರಾಣಿಯಲ್ಲ, ರಾಜಕುಮಾರನೂ ಅಲ್ಲ; ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ವಾಗ್ದಾಳಿ