Site icon Vistara News

Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ

Priyanka Gandhi arrives in Sringeri after 45 years of visiting her grandmother Indira Gandhi

ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸದಲ್ಲಿ ನಿರತರಾಗಿದ್ದಾರೆ. ಮಂಗಳವಾರ ಮೈಸೂರು ಜಿಲ್ಲೆಯ ಹಲವು ಕಡೆ ಸಮಾವೇಶ ನಡೆಸಿದ್ದ ಅವರು, ಬುಧವಾರ (ಏಪ್ರಿಲ್‌ 26) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶೃಂಗೇರಿ ಮಠಕ್ಕೆ ಪ್ರಿಯಾಂಕಾ ಗಾಂಧಿ (Priyanka Gandhi) ಆಗಮಿಸಿದ್ದು, ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು (Indira Gandhi) ಆಗಮಿಸಿ 45 ವರ್ಷಗಳ ಬಳಿಕ ಇವರು ಬಂದಂತಾಗಿದೆ.

1978ರಲ್ಲಿ ಇಂದಿರಾ ಗಾಂಧಿ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು. ಈಗ 2023ರಲ್ಲಿ ಪ್ರಿಯಾಂಕಾ ಗಾಂಧಿಯವರು ಆಗಮಿಸಿದ್ದಾರೆ. ಶ್ರೀಮಠದಲ್ಲಿ ಶಾರದಾಂಬೆಯ ದರ್ಶನ ಪಡೆದು ಹಾಗೂ ಗುರುಗಳ ದರ್ಶನವನ್ನು ಪ್ರಿಯಾಂಕಾ ಪಡೆದಿದ್ದಾರೆ.

1978ರಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಇಂದಿರಾ ಗಾಂಧಿ. ಆಗಿನ ಶೃಂಗೇರಿ ಶಾಸಕ ಬೇಗಾನೆ ರಾಮಯ್ಯ ಜತೆಗಿದ್ದರು.

1978ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಇಂದಿರಾ ಗಾಂಧಿ ಅವರು ಸ್ಪರ್ಧೆ ಮಾಡಿದ್ದರು. ಈ ವೇಳೆ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. 2018ರಲ್ಲಿ ರಾಹುಲ್ ಗಾಂಧಿ ಸಹ ಇಲ್ಲಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ ಸೇರಿರುವ ಶೆಟ್ಟರ್‌ರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದ ಯಡಿಯೂರಪ್ಪ

ಶೃಂಗೇರಿಗೆ ಬಂದಿಳಿದ ಪ್ರಿಯಾಂಕಾ

ಮೈಸೂರಿನಿಂದ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ಬಂದಿಳಿದ ಪ್ರಿಯಾಂಕಾ ಗಾಂಧಿ ಅವರಿಗೆ ಮೆಣಸೆ ಹೆಲಿಪ್ಯಾಡ್‌ನಲ್ಲಿ ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಸ್ವಾಗತಿಸಿದ್ದಾರೆ.

ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಕೆ

ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ಕೆಲ ಹೊತ್ತು ಪ್ರಾರ್ಥಿಸಿದರು. ಅಲ್ಲಿಂದ ಶೃಂಗೇರಿ ನರಸಿಂಹವನದಲ್ಲಿರುವ ಹಿರಿಯ ಸ್ವಾಮೀಜಿಯವರಾದ ಭಾರತೀ ತೀರ್ಥ ಶ್ರೀಗಳು ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಠದ ಆನೆಗೆ ಬಾಳೆಹಣ್ಣು, ಸೇಬು ತಿನ್ನಿಸಿದ ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ ವೇಳೆ ಮಠದ ಆನೆ ಬಳಿಗೆ ಬಂದು ಅವರು, ಬಾಳೆಹಣ್ಣು ಹಾಗೂ ಸೇಬನ್ನು ಕೊಟ್ಟರು. ಆದರೆ, ಆನೆ ಸೇಬನ್ನು ಮಾವುತನಿಗೆ ಕೊಟ್ಟಿದೆ. ಈ ವೇಳೆ ಪ್ರಿಯಾಂಕಾ ಆನೆಯೊಂದಿಗೆ ಕೆಲಕಾಲ ಸಮಯ ಕಳೆದರು. ಆನೆ ಸೊಂಡಿಲನ್ನು ಸವರಿ ಮುದ್ದು ಮಾಡಿದರು. ಬಳಿಕ ಆನೆ ಸಹ ಪ್ರಿಯಾಂಕಾ ಅವರಿಗೆ ಆಶೀರ್ವಾದ ಮಾಡಿದೆ. ಲಕ್ಷ್ಮಿ, ಜಯಲಕ್ಷ್ಮಿ ಎಂಬ ಎರಡು ಆನೆಗಳೊಂದಿಗೆ ಸಮಯ ಕಳೆದರು.

ಆನೆಯೊಂದಿಗೆ ಸಮಯ ಕಳೆದ ಪ್ರಿಯಾಂಕಾ

ರಂಭಾಪುರಿ ಪೀಠಕ್ಕೆ ಭೇಟಿ

ಶೃಂಗೇರಿ ಬಳಿಕ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಲಿರುವ ಪ್ರಿಯಾಂಕಾ ಅವರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆಯಲಿದ್ದಾರೆ. ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ಪರ ಬಹಿರಂಗ ಸಮಾವೇಶದಲ್ಲಿ ಮತಯಾಚನೆ ಮಾಡಲಿದ್ದಾರೆ.

ಅಲ್ಲಿಂದ ಹಿರಿಯೂರಿಗೆ ತೆರಳಿರುವ ಪ್ರಿಯಾಂಕಾ, ಮಧ್ಯಾಹ್ನ 3.15ಕ್ಕೆ ಅಲ್ಲಿ ಗೊಲ್ಲ ಸಮುದಾಯದ ನಾಯಕರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ. ಜತೆಗೆ ರೋಡ್‌ ಶೋವನ್ನೂ ನಡೆಸಲಿದ್ದಾರೆ.

ದೋಸೆ ಎರೆದು, ಸವಿದ ಪ್ರಿಯಾಂಕಾ

ಮೈಸೂರಿನಲ್ಲಿ ದಶಕಗಳ ಇತಿಹಾಸ ಹೊಂದಿರುವ ಅಗ್ರಹಾರ ರಸ್ತೆಯಲ್ಲಿರುವ ಮೈಲಾರಿ ಹೋಟೆಲ್‌ಗೆ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಮಸಾಲೆ ದೋಸೆ ಸವಿದಿದ್ದಾರೆ.

ಮೈಲಾರಿ ಹೋಟೆಲ್‌ ಮಾಲೀಕನ ಮಗಳ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?

ದೋಸೆ ಎರೆದ ಪ್ರಿಯಾಂಕಾ

ಮಸಾಲೆ ದೋಸೆ ರುಚಿಗೆ ಮಾರುಹೋದ ಪ್ರಿಯಾಂಕಾ, ಬಳಿಕ ಇಡ್ಲಿಯನ್ನೂ ಹಾಕಿಸಿಕೊಂಡು ರುಚಿ ನೋಡಿದ್ದಾರೆ. ಇದಾದ ಬಳಿಕ ಹೋಟೆಲ್‌ನ ಅಡುಗೆ ಕೋಣೆಗೆ ಹೋದ ಅವರು, ಅಡುಗೆ ಭಟ್ಟರ ಬಳಿ ತಾವೇ ದೋಸೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ತಮಗೆ ತಿಳಿಸಿಕೊಡಿ ಎಂದೂ ಕೇಳಿದ್ದಾರೆ. ಅದಕ್ಕೆ ಅಡುಗೆ ಭಟ್ಟರು ಸಹ ಖುಷಿಯಿಂದ ದೋಸೆ ಹಿಟ್ಟು ಹಾಕುವುದರಿಂದ ಹಿಡಿದು ಎರೆದು ಕಾವಲಿಯಿಂದ ತೆಗೆಯುವವರೆಗೂ ಹೇಳಿಕೊಟ್ಟಿದ್ದಾರೆ.

ಏನಾಯ್ತ್ರೀ ಈ ದೋಸೆಗೆ?

ದೋಸೆ ಸೀದಿದ್ದಕ್ಕೆ ಬೇಸರ

ಅದರಂತೆ ಪ್ರಿಯಾಂಕಾ ಸಹ ದೋಸೆ ಹಿಟ್ಟನ್ನು ತೆಗೆದುಕೊಂಡು ಕಾವಲಿ ಮೇಲೆ ಹಾಕಿ ದೋಸೆಯನ್ನು ತಯಾರಿಸಿದ್ದಾರೆ. ಈ ವೇಳೆ ದೋಸೆಯನ್ನು ಕಾವಲಿಯಿಂದ ಮಗಚುವಾಗ ಒಂದು ದೋಸೆ ಸೀದು ಹೋಗಿದ್ದು, ಅದಕ್ಕಾಗಿ ಸ್ವಲ್ಪ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ತಾವೇ ಸ್ವತಃ ದೋಸೆ ಎರೆದಿದ್ದಕ್ಕೆ ಬಹಳವೇ ಖುಷಿಪಟ್ಟಿದ್ದಾರೆ. ಅಲ್ಲದೆ, ಇವುಗಳನ್ನು ಯಾವ ರೀತಿಯಾಗಿ ತಯಾರು ಮಾಡಲಾಗುತ್ತದೆ ಎಂಬ ಬಗ್ಗೆ ರೆಸಿಪಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka election 2023: ಹಿಂದುತ್ವಕ್ಕಾಗಿ ಮಡಿದವರಿಗೆ ಟಿಕೆಟ್ ನೀಡುತ್ತಾ ಹೋದ್ರೆ ಅಷ್ಟೇ… ಈಶ್ವರಪ್ಪ ಹೇಳಿದ್ದೇನು?

ತುಂಬಾ ಚೆನ್ನಾಗಿತ್ತು- ಪ್ರಿಯಾಂಕಾ ಗಾಂಧಿ

ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ಸವಿದು ಬಹಳ ಖುಷಿಯಾಗಿದೆ. ಇಡ್ಲಿ, ದೋಸೆಯನ್ನು ತಿಂದೆ. ಎಲ್ಲವೂ ತುಂಬಾ ಚೆನ್ನಾಗಿತ್ತು. ಮನೆಯಲ್ಲಿ ಈ ತಿಂಡಿಯನ್ನು ಹೇಗೆ ಮಾಡಬೇಕು ಅನ್ನೋದನ್ನು ಸಹ ತಿಳಿದುಕೊಂಡಿದ್ದೀನಿ. ನಾನು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡ್ತೀನಿ ಎಂದು ಹೇಳಿದ್ದಾರೆ.

Exit mobile version