ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿಜಯನಗರದಲ್ಲಿ ಸೋಮವಾರ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಅಭ್ಯರ್ಥಿ ಪ್ರಿಯಕೃಷ್ಣ ಪರ ಪ್ರಚಾರ ನಡೆಸಿದರು. ತುಂತುರು ಮಳೆಯ ನಡುವೆಯೇ ಮತಯಾಚನೆ ಮಾಡಿದ ಪ್ರಿಯಾಂಕಾ ಗಾಂಧಿ ಅವರಿಗೆ ಪುಷ್ಪವೃಷ್ಟಿ ಸುರಿಸುವ ಮೂಲಕ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ರೋಡ್ ಶೋ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡುತ್ತೇವೆ. ನಿರುದ್ಯೋಗಿಗಳಿಗೆ 3000 ರೂಪಾಯಿ ಯುವ ನಿಧಿ ಘೋಷಣೆ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಯಲ್ಲಿ ತಲಾ 10 ಕೆ.ಜಿ ಉಚಿತ ಅಕ್ಕಿ ನೀಡುತ್ತೇವೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಿರಲಿದೆ. ಈ ಗ್ಯಾರಂಟಿ ಯೋಜನೆಗಳು, ಜನರ ಸಮಸ್ಯೆಗಳನ್ನು ಪರಿಹರಿಸಲು ನಾವು ತೆಗೆದುಕೊಂಡಿರುವ ಪರಿಹಾರಗಳು. ಇದಕ್ಕಾಗಿ ಕಾಂಗ್ರೆಸ್‌ಗೆ ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | Karnataka Election : ಯಾರು ಏನೇ ಹೇಳಿದ್ರೂ ಲಿಂಗಾಯತರ ಮತ ಬಿಜೆಪಿಗೇ; ಬಿಎಸ್‌ವೈ ಪುನರುಚ್ಚಾರ
ನಾನು ನಿಮ್ಮ ಪಾಲುದಾರಳಾಗಿದ್ದೇನೆ. ಇದು ಕೊನೇ ದಿನದ ಪ್ರಚಾರ. ನೀವು ಮೇ 10ಕ್ಕೆ ಮತ ಹಾಕುತ್ತಿದ್ದೀರಿ ಎಂದ ಅವರು, ಜನರಿಗೆ ಹೊರೆಯಾಗದಂತೆ ಸರ್ಕಾರ ನಿಭಾಯಿಸಬೇಕು. ಸರ್ಕಾರಿ ಹುದ್ದೆ ಖಾಲಿ ಇದ್ದರೆ ಅದನ್ನು ಭರ್ತಿ ಮಾಡುವುದು ಸರ್ಕಾರದ ಕರ್ತವ್ಯ. ಒಂದು ಸರ್ಕಾರ ತಾಂತ್ರಿಕವಾಗಿ ಒಂದು ರೀತಿ, ಮತ್ತೊಂದು ಸರ್ಕಾರ ಮತ್ತೊಂದು ರೀತಿ ಕೆಲಸ ಮಾಡಿರುತ್ತದೆ. ಈಗಾಗಲೇ ಮೂರೂವರೆ ವರ್ಷ ಇದ್ದ ಸರ್ಕಾರ ಎಲ್ಲರನ್ನೂ ಖರೀದಿ ಮಾಡಿದೆ. ಅದು 40% ಸರ್ಕಾರ ಎಂದು ಗುರುತಿಸಿಕೊಂಡಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ಬಂದ್ ಕರೋ, ಬಂದ್ ಕರೋ
ನೀವು ಗಮನವಿಟ್ಟು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಜನರ ಪರ ಕಾಂಗ್ರೆಸ್ ಧ್ವನಿ ಎತ್ತಿದೆ. ಬೆಲೆ ಏರಿಕೆ ಜನರಿಗೆ ಹೊರೆಯಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿ ಹೊರೆಯಾಗಿದೆ. ರಸ್ತೆ ಗುಂಡಿಗಳಿಗೆ ಬೆಂಗಳೂರಿನಲ್ಲಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂತ್ರಿಗಳಿಗೆ ಇದರ ಬಗ್ಗೆ ಗಮನ ಇರಲಿಲ್ಲ. ನಮಗೆ ಹಣ ಎಲ್ಲಿಂದ ಬರುತ್ತೆ, ಮತ್ತೆ ಯಾವ ಡೀಲ್ ಮಾಡಬೇಕು ಎಂಬುದರ ಗಮನ ಇರುತ್ತದೆ. ಮುಖ್ಯಮಂತ್ರಿ ಯಾರಾಗಬೇಕು, ಎಷ್ಟು ಹಣ ಮಾಡಬೇಕು ಎಂಬುದರ ಬಗ್ಗೆ ಗಮನ ಇದೆ. ಈ ಸರ್ಕಾರದ ಆಡಳಿತ ಸರಿ ಇಲ್ಲ ಎಂದು ಹೇಳಿ, ಭ್ರಷ್ಟಾಚಾರ ಬಂದ್ ಕರೋ, ಬಂದ್ ಕರೋ ಎಂದು ಜನರ ಬಳಿ ಘೋಷಣೆ ಕೂಗಿಸಿದರು.
ಬೆಂಗಳೂರು ಟೆಕ್ ಹಬ್, ಇದರ ಗತವೈಭವವನ್ನು ಮತ್ತೆ ಎತ್ತಿ ಹಿಡಿಯುತ್ತೇವೆ ಎಂದ ಅವರು, ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಲ್ಲ. ಉದ್ಯೋಗದ ಬಗ್ಗೆ ಯಾವ ಕೆಲಸವೂ ಆಗಿಲ್ಲ. ಧರ್ಮ ಧರ್ಮಗಳ ಮಧ್ಯೆ ಜಗಳ ತಂದಿಡುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka Election: ಕೇಂದ್ರದಲ್ಲಿ ದಲಿತ, ಒಕ್ಕಲಿಗ, ಲಿಂಗಾಯತರಿಗೆ ರಾಜ್ಯ ಖಾತೆ; ಜೋಶಿಗೆ ಮಾತ್ರ ಏಕೆ ಸಂಪುಟ ಖಾತೆ?; ಜಗದೀಶ್ ಶೆಟ್ಟರ್
ಇದಕ್ಕೂ ಮುನ್ನ ನಿಗದಿಯಾಗಿದ್ದ ಪ್ರಿಯಾಂಕಾ ಗಾಂಧಿ ಅವರ ಚಿಕ್ಕಪೇಟೆ ರೋಡ್ ಶೋ ಸಮಯದ ಅಭಾವದ ಹಿನ್ನೆಲೆಯಲ್ಲಿ ರದ್ದಾಯಿತು. ಹೀಗಾಗಿ ಅವರು ನೇರವಾಗಿ ವಿಜಯನಗರಕ್ಕೆ ತೆರಳಿ ತೆರಳಿ ಪ್ರಚಾರದ ನಡೆಸಿ, ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ (ಗೋವಿಂದರಾಜನಗರ) ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.