Site icon Vistara News

ನಾ ನಾಯಕಿ | ಉದ್ಯೋಗದ ಬದಲು ವಿವಾದ ಸೃಷ್ಟಿಸುತ್ತಿದೆ ಬಿಜೆಪಿ: ಬದಲಾವಣೆಯ ಅವಕಾಶ ನಿಮ್ಮಲಿದೆ ಎಂದ ಪ್ರಿಯಾಂಕಾ ಗಾಂಧಿ

Priyanka gandhi vadra speech in convention

ಬೆಂಗಳೂರು: ರಾಜ್ಯ ಸರ್ಕಾರವು ಕಳೆದ ಮೂರು ವರ್ಷದ ಆಡಳಿತದಲ್ಲಿ ಉದ್ಯೋಗವನ್ನು ಸೃಜನೆ ಮಾಡುವ ಬದಲಿಗೆ ಪಠ್ಯಪುಸ್ತಕದಲ್ಲಿ ಅನೇಕ ಬದಲಾವಣೆಗಳನ್ನು ಮಾಡುವಂತಹ ವಿವಾದ ಸೃಷ್ಟಿಯನ್ನು ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನಿಂದ ಆಯೋಜಿಸಿರುವ ನಾ-ನಾಯಕಿ ಅಭಿಯಾನದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರ ಎದುರು ʼಗೃಹಲಕ್ಷ್ಮೀʼ ಯೋಜನೆಯ ಗ್ಯಾರಂಟಿ ಚೆಕ್‌ ಘೋಷಣೆ ಮಾಡಿದ ನಂತರ ಮಾತನಾಡಿದರು.

ಕರ್ನಾಟಕದ ಪ್ರತಿ ಹೆಣ್ಣುಮಕ್ಕಳೂ ತಾಯಿ ಚಾಮುಂಡಿಯ, ಭುವನೇಶ್ವರಿಯ ಮಕ್ಕಳು. ಕರ್ನಾಟಕಕ್ಕೆ ರಾಣಿ ಚೆನ್ನಮ್ಮನ ಶೌರ್ಯ, ಬಸವಣ್ಣನವರ ಸಮಾನತೆಯ ಇತಿಹಾಸವಿದೆ. ಭದ್ರ ಬುನಾದಿಯಿದೆ. ನಾನು ಇಬ್ಬರು ಸಬಲ ಮಹಿಳೆಯರಿಂದ ಬೆಳೆಸಲ್ಪಟ್ಟಿದ್ದೇನೆ. ತನ್ನ ಪುತ್ರನನ್ನೇ ಕಳೆದುಕೊಂಡರೂ ಕರ್ತವ್ಯದಲ್ಲಿ ನಿರತರಾದ ಇಂದಿರಾ ಗಾಂಧಿ, ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡರೂ ದೇಶಕ್ಕೆ ದುಡಿಯುತ್ತಿರುವ ಸೋನಿಯಾ ಗಾಂಧಿಯವರನ್ನು ನೋಡಿದ್ದೇನೆ.

ಯಾವುದೇ ಸವಾಲನ್ನು ಎದುರಿಸಿದರೂ ನಾವು ಮಹಿಳೆಯರು ಕುಟುಂಬವನ್ನು ಮುನ್ನಡೆಸುತ್ತಿದ್ದೇವೆ. ಪ್ರತಿ ಮಹಿಳೆಯೂ ಕುಟುಂಬದ ನಿರ್ವಹಣೆಗೆ ಸಂಘರ್ಷ ಎದುರಿಸುತ್ತಿದ್ದಾರೆ. ಈ ಸಂದರ್ಭವು, ಬದಲಾವಣೆಯನ್ನು ತರುವ ಸುಸಂದರ್ಭ. ಆದರೆ ಈ ಬದಲಾವಣೆಯನ್ನು ಯಾರು ಮಾಡಬೇಕು? ಈ ಬದಲಾವಣೆಯನ್ನು ನೀವೇ ಮಾಡಬೇಕು. ನಿಮ್ಮ ಶಕ್ತಿ ಏನು ಎನ್ನುವುದು ಇನ್ನೂ ನಿಮಗೇ ಗೊತ್ತಿಲ್ಲ. ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದೀರ. ಪ್ರತಿ ಕುಟುಂಬದಲ್ಲೂ ಗಂಡಸರಷ್ಟೇ ಮಹಿಳೆಯರಿದ್ದಾರೆ. ಪ್ರತಿ ಗ್ರಾಮ, ನಗರಗಳಲ್ಲಿಯೂ ನೀವು ಶಕ್ತಿವಂತರಾಗಿದ್ದೀರ. ಆದರೆ ನಿಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕಿದೆ.

ಮಹಿಳೆಯರಿಗೆ ಇರುವ ಅತಿ ದೊಡ್ಡ ಶಕ್ತಿ ಎಂದರೆ ರಾಜಕೀಯ. ವಿವಿಧ ಸಮುದಾಯಗಳನ್ನು ಸಂತಸಪಡಿಸುವ ರಾಜಕೀಯ ಪಕ್ಷಗಳು ಮಹಿಳೆಯರನ್ನು ಏಕೆ ಓಲೈಸುವುದಿಲ್ಲ? ನಿಮ್ಮ ಸಮಾನತೆ ಹಾಗೂ ಹಕ್ಕುಗಳಿಗೆ ಆದ್ಯತೆ ನೀಡಲು ಎಲ್ಲ ರಾಜಕೀಯ ಪಕ್ಷಗಳಿಗೆ ಏಕೆ ಒತ್ತಾಯ ಮಾಡುತ್ತಿಲ್ಲ?

ನಾನು ಬಿಜೆಪಿಯನ್ನು ವಿರೋಧ ಮಾಡುವುದಿಲ್ಲ. ಇಷ್ಟು ವರ್ಷದ ಬಿಜೆಪಿ ಆಡಳಿತದಲ್ಲಿ ನಿಮ್ಮ ಜೀವನ ಸುಧಾರಿಸಿದೆಯೇ? ಉದ್ಯೋಗ ಸಿಕ್ಕಿದೆಯೇ? ಅಲ್ಲಿಗೆ, ಎಲ್ಲವೂ ಸ್ಪಷ್ಟವಾಗಿದೆ. ಕಳೆದ ಕೆಲವು ವರ್ಷಗಳ ಕುರಿತು ಯೋಚಿಸಿ. ನಿಮ್ಮನ್ನು ಆಳುತ್ತಿರುವವರು ನಿಮ್ಮ ಬಗ್ಗೆ ಆಲೋಚನೆ ಮಾಡಿದ್ದಾರೆಯೇ? ಎಂದು ಯೋಚಿಸಿ.

ಕರ್ನಾಟಕದಲ್ಲಿ ನಾಚಿಕೆಗೇಡಿನ ಸ್ಥಿತಿ ಇದೆ, ಕರ್ನಾಟಕ ಸರ್ಕಾರದ ಮಂತ್ರಿಗಳು 40% ಲಂಚ ಹೊಡೆಯುತ್ತಿದ್ದಾರೆ ಎಂದು ಕೇಳಿದ್ದೇನೆ. ನೀವು ಗಳಿಸಿದ ಲಕ್ಷಾಂತರ ಕೋಟಿ ರೂ. ಹಣವನ್ನು ಭ್ರಷ್ಟಾಚಾರದಿಂದ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಬೆಂಗಳೂರಿನಲ್ಲಿ ನಡೆಯುವ ಎಂಟು ಸಾವಿರ ಕೋಟಿ ರೂ. ಯೋಜನೆಯಲ್ಲಿ ಮೂರು ಸಾವಿರದ ಇನ್ನೂರು ಕೋಟಿ ರೂ. ಕಮಿಷನ್‌ಗೆ ಹೋಗುತ್ತಿದೆ. ಪಿಎಸ್‌ಐ ಹಗರಣದಲ್ಲಿ ಪೊಲೀಸ್‌ ಹುದ್ದೆಯನ್ನು ಮಾರಿಕೊಳ್ಳುತ್ತಿದ್ದಾರೆ. ಡ್ರೈವಿಂಗ್‌ ಲೈಸೆನ್ಸ್‌, ಬೋರ್‌ವೆಲ್‌ಗೂ ನೀವು ಲಂಚ ನೀಡಬೇಕಾಗುತ್ತಿದೆ.

ಬೆಂಗಳೂರಿನ ಗಾರ್ಮೆಂಟ್‌ ಕಾರ್ಖಾನೆಗಳಲ್ಲಿ ಮಹಿಳೆಯರು ಸಾಕಷ್ಟು ಸಂಕಷ್ಟ ಎದುರಿಸಿದರು. ಆದರೆ ಅವರಿಗೆ ಸರ್ಕಾರ ಏನೂ ಸಹಾಯ ಮಾಡಿಲ್ಲ ಎಂದು ಕೇಳಲ್ಪಟ್ಟಿದ್ದೇನೆ. ಬೆಲೆ ಏರಿಕೆ ಹೆಚ್ಚಾಗಿದೆ. ಆದರೆ ದುರ್ದೈವವೆಂದರೆ ಯಾರೂ ಸರ್ಕಾರವನ್ನು ಪ್ರಶನೆ ಮಾಡುತ್ತಿಲ್ಲ. ಹಾಗಾಗಿ ಅವರು ಪಠ್ಯಪುಸ್ತಕ ಬದಲಾವಣೆ, ಬಸವಣ್ಣನ ಪಠ್ಯವನ್ನು ತೆಗೆಯುವಂತಹ ವಿವಾದಗಳಲ್ಲಿ ತೊಡಗಿದ್ದಾರೆ. ಉದ್ಯೋಗ ಸೃಜನೆಯ ಬದಲಿಗೆ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ.

ಬಿಜೆಪಿಯಿಂದ ಕೆಲವು ಉದ್ಯಮಿಗಳನ್ನು ಮಾತ್ರ ಉತ್ತೇಜಿಸುತ್ತಿದೆ. ಇವರು ಶ್ರೀಮಂತರಾಗುತ್ತಲೇ ಇದ್ದಾರೆ, ದೇಶದ ಉಳಿದವರು ಬಡವರೇ ಆಗುತ್ತಿದ್ದಾರೆ. ಉದ್ಯೋಗದ ಎಲ್ಲ ಮೂಲಗಳೂ ಬಂದ್‌ ಆಗಿವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಭೂ ಸುಧಾರಣೆ, ಕೈಗಾರಿಕೀರಣ ಆಗಿದೆ. ಏಕೆಂದರೆ ಕಾರ್ಮಿಕರ ಶ್ರಮವನ್ನು ಕಾಂಗ್ರೆಸ್‌ ಗೌರಿಸುತ್ತದೆ.

ಸಿದ್ದರಾಮಯ್ಯ ಅವಧಿಯಲ್ಲಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌, ಕ್ಷೀರ ಭಾಗ್ಯ, ಮಾತೃಪೂರ್ಣ ಯೋಜನೆಗಳ ಮೂಲಕ ಮಹಿಳೆಯರು ಅನುಕೂಲ ಪಡೆದಿದ್ದಾರೆ. ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಳ ಸೇರಿ ಅನೇಕ ಯೋಜನೆಗಳನ್ನು ರೂಪಿಸಲಾಯಿತು. ಇಂದು ನಾ ನಾಯಕಿ ಯೋಜನೆಯನ್ನು ಘೋಷಿಸುತ್ತಿದ್ದೇನೆ.

ನಿಮ್ಮ ಜೀವನದಲ್ಲಿ ಹಾಗೂ ರಾಜಕೀಯದಲ್ಲಿ ಬದಲಾವಣೆ ತರಲು ಇದೇ ಒಂದು ಅವಕಾಶ. ಮಹಿಳೆಯರನ್ನು ಗೌರವಿಸಬೇಕು. ಮನೆಯನ್ನು ನಿಭಾಯಿಸಲು ಹಗಲು ರಾತ್ರಿ ದುಡಿಯುತ್ತಿರುವ ಮಹಿಳೆಯರಿಗೆ, ಮಾಸಿಕ ಎರಡು ಸಾವಿರ ರೂ. ಅಂದರೆ ವಾರ್ಷಿಕ 24 ಸಾವಿರ ರೂ. ಹಣವನ್ನು ನಿಮ್ಮ ಖಾತೆಗೆ ನೇರವಾಗಿ ನೀಡಲಾಗುತ್ತದೆ. ನಾ ನಾಯಕಿ ಯೋಜನೆಯ ಒಂದು ಭಾಗ ಇದಾಗಿದ್ದು, ಗೃಹಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡುತ್ತಿದ್ದೇನೆ.

ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುವುದಾದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ಹೇಳಿದೆ. ಕೇವಲ ಒಂದು ವಿಚಾರವಲ್ಲ, ಅನೇಖ ವಿಚಾರಗಳಲ್ಲಿ ಮಹಿಳೆಯರನ್ನು ಸಬಲೀಕರಣ ಮಾಡಬೇಕಿದೆ. ಉತ್ತರ ಪ್ರದೇಶದಲ್ಲಿ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಮಾಡಿದಾಗ ಅನೇಕರು ಹಾಸ್ಯ ಮಾಡಿದರು. ಅದರಿಂದ ಮತಗಳು ಲಭಿಸಲಿಲ್ಲವಾದರೂ, ಮಹಿಳೆಯರ ಕುರಿತು ಪ್ರತಿಯೊಬ್ಬರಿಗೂ ಅರಿವಾಯಿತು. ಕರ್ನಾಟಕದಲ್ಲೂ ಇಂದು ಬಿಜೆಪಿಯು ಒತ್ತಡಕ್ಕೊಳಗಾಗಿ ಜಾಹೀರಾತು ನೀಡಿದೆ. ಈ ಸಮಾಜವನ್ನು ಬದಲಾಯಿಸುವ ಅವಕಾಶ ನಿಮ್ಮ ಕೈಯಲ್ಲಿದೆ. ಮಹಿಳಾ ಶಕ್ತಿಯನ್ನು ತೋರಿಸುವ ಅವಕಾಶವಿದೆ. ಈ ಚುನಾವಣೆಯು ನಿಮ್ಮ ಚುನಾವಣೆ ಆಗುವಂತೆ ಮಾಡಿ ಎಂದು ಕರೆ ನೀಡಿದರು.

ಇದನ್ನೂ ಓದಿ | ನಾ ನಾಯಕಿ | ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ನಿಂದ ಬಂಪರ್‌ ಘೋಷಣೆ; ಪ್ರತಿ ತಿಂಗಳು ₹2,000 ರೂ.

Exit mobile version