Site icon Vistara News

ನಾನು ಹೆಣ್ಮಕ್ಕಳನ್ನು ಅಪಮಾನಿಸಿಲ್ಲ, ನಿಜವಾಗಿ ಅಪಮಾನಿಸಿದ್ದು ಬಿಜೆಪಿ, ಅದು ಕ್ಷಮೆ ಕೇಳುತ್ತಾ?: ಪ್ರಿಯಾಂಕ್‌ ಸವಾಲ್‌

ಪ್ರಿಯಾಂಕ್‌ ಖರ್ಗೆ

ಕಲಬುರಗಿ: ʻಲಂಚ ಮತ್ತು ಮಂಚʼ ಹೇಳಿಕೆಯ ಮೂಲಕ ವಿವಾದಕ್ಕೆ ಒಳಗಾಗಿರುವ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಅವರು ತಮ್ಮ ಮೇಲಾಗುತ್ತಿರುವ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ʻʻನಾನು ನಾಡಿನ ಹೆಣ್ಣುಮಕ್ಕಳಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಕೇಳಲು ಸಿದ್ಧನಿದ್ದೇನೆʼʼ ಎಂದಿರುವ ಪ್ರಿಯಾಂಕ್‌, ಬಿಜೆಪಿಗೂ ಕೆಲವು ಸವಾಲುಗಳನ್ನು ಹಾಕಿದ್ದಾರೆ.

ʻʻಯುವತಿಯರು ಸರ್ಕಾರಿ ನೌಕರಿ ಪಡೆಯಬೇಕಾದರೆ ಮಂಚ ಹತ್ತಬೇಕು, ಹುಡುಗರು ಲಂಚ ಕೊಡಬೇಕು. ಹೀಗಾಗಿ ಇದು ಲಂಚ-ಮಂಚದ ಸರ್ಕಾರʼʼ ಎಂದಿದ್ದ ಪ್ರಿಯಾಂಕ್‌ ಖರ್ಗೆ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ.

ʻʻಸರ್ಕಾರದಲ್ಲಿ ನಡೆಯುತ್ತಿರುವ ಲಂಚ-ಮಂಚದ ಪ್ರಕರಣಗಳಿಗೆ ಕನ್ನಡಿಯಾಗಿ ಮಾತನಾಡುವುದು ವಿಪಕ್ಷವಾಗಿ ನಮ್ಮ ಕರ್ತವ್ಯʼʼ ಎಂದಿರುವ ಅವರು, ತಮ್ಮ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿಯವರಿಗೆ ಸವಾಲು ಹಾಕಿದ್ದಾರೆ. ʻʻಬಿಜೆಪಿಯು ಹೆಣ್ಣು ಮಕ್ಕಳಿಗೆ ನಿಜವಾಗಿ ಅಪಮಾನ ಮಾಡಿದ ನಾಯಕರುಗಳ ರಾಜೀನಾಮೆ ಪಡೆಯಲಿ. ರಾಜ್ಯದ ಮಹಿಳಾ ಸಮುದಾಯಕ್ಕೆ ಎಸಗಿದ ಅಪಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕೆಲಸ ಮಾಡಲಿದೆಯಾ?ʼʼ ಎಂದು ಕೇಳಿದ್ದಾರೆ.

ʻʻನಾಡಿನ ಹೆಣ್ಣುಮಗಳು ಕೆಲಸಕ್ಕಾಗಿ ಹೋದಾಗ ಬಿಜೆಪಿಯ ಸಚಿವರೊಬ್ಬರು ಅಶ್ಲೀಲ ವರ್ತನೆ ಮಾಡಿದರು. ಮೀ-ಟೂ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಸಂಸದರು ಸಿಕ್ಕಿ ಬಿದ್ದಾಗ ಕ್ಷಮೆ ಕೇಳಲಿಲ್ಲ. ಇದಕ್ಕೆ ಬಿಜೆಪಿಯಿಂದ ಸಕಾರಾತ್ಮಕ ರೀತಿಯಲ್ಲಿ ಉತ್ತರ ನಿರೀಕ್ಷಿಸಬಹುದೇ?ʼʼ ಎಂದು ಫೇಸ್‌ ಬುಕ್‌ ಮೂಲಕ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದಾರೆ.

ಪ್ರಿಯಾಂಕಾ ಖರ್ಗೆ ಫೇಸ್‌ಬುಕ್‌ನಲ್ಲಿ ಹೇಳಿದ್ದು ಇಷ್ಟು..

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳು ದಿನಂಪ್ರತಿ ಬೆಳಕಿಗೆ ಬರುತ್ತಲೇ ಇವೆ. ಇದು ಈ ಸರ್ಕಾರದ ಭ್ರಷ್ಟಾಚಾರದ ವಿರಾಟ್ ರೂಪ ಹಾಗೂ ಲಂಚಕೋರ ಆಡಳಿತಕ್ಕೆ ಹಿಡಿದ ಕೈಗನ್ನಡಿ. ವಿಷೇಶವಾಗಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ರಾಜ್ಯದ ಸಾವಿರಾರು ಯುವಕರ ಕಣ್ಣಲ್ಲಿ ನೀರು ತರಿಸುತ್ತಿದೆ.

ಇತ್ತೀಚಿಗೆ ನಡೆದ KPTCL ಪರೀಕ್ಷೆಯಲ್ಲಿ ಆಗಿರುವ ಅಕ್ರಮಕ್ಕೆ ಯಾವುದೇ ಶಿಕ್ಷೆ ನೀಡಿದರೂ ಕಮ್ಮಿಯೇ. ಸರ್ಕಾರಿ ಕೆಲಸ ಒಂದಿಡೀ ಕುಟುಂಬವನ್ನೇ ಬಡತನದಿಂದ ಮೇಲೆತ್ತುವ, ಸುಭದ್ರ ಭವಿಷ್ಯ ಕಟ್ಟಿಕೊಡುವ ಅವಕಾಶ. ಲಂಚ ಪಡೆದು ಪರೀಕ್ಷೆಯಲ್ಲಿ ಅಕ್ರಮವಾಗಿ ಉತ್ತೀರ್ಣರಾಗುವ ಮೂಲಕ ವ್ಯವಸ್ಥಿತವಾಗಿ ಬಡವರ್ಗದ ಹಾಗೂ ಯೋಗ್ಯ ಯುವ ಜನರ ಕೈಯಿಂದ ಆ ಅವಕಾಶವನ್ನು ಕಿತ್ತುಕೊಳ್ಳುವುದನ್ನು ಈ ಭ್ರಷ್ಟ ಬಿಜೆಪಿ ಸರ್ಕಾರ ಸಕ್ರಮಗೊಳಿಸಿಬಿಟ್ಟಿದೆ.

ಇದನ್ನು ವಿರೋಧಿಸಿ ನಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಸರ್ಕಾರವನ್ನು ಲಂಚ-ಮಂಚದ ಸರ್ಕಾರವೆಂದು ಕರೆದಿದ್ದೆ. ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು, ತನ್ನ ಭ್ರಷ್ಟ ರೂಪವನ್ನು ರಕ್ಷಿಸಿಕೊಳ್ಳಲು, ಹಾಗೂ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ನನ್ನ ಹೇಳಿಕೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ KPTCL ಅಕ್ರಮವನ್ನು ಈ ಮೂಲಕ ಮುಚ್ಚಿ ಹಾಕಲು ಬಿಜೆಪಿ ಹೊರಟು ನಿಂತಿದೆ.

– ಕೆಲಸಕ್ಕಾಗಿ ಬಂದ ಯುವತಿಯನ್ನು ಈ ಸರ್ಕಾರದ ಮಂತ್ರಿ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ ಅವರ ಬಳಿ ಕ್ಷಮೆಯನ್ನು ಬಿಜೆಪಿಯ ಯಾರೊಬ್ಬರೂ ಕೇಳಲಿಲ್ಲ!

– ಕೇಂದ್ರ ಮಂತ್ರಿಯೊಬ್ಬರು ಅಶ್ಲೀಲವಾಗಿ ಪರಸ್ತ್ರೀಯೊಬ್ಬರೊಂದಿಗೆ ನಡೆಸಿದ್ದ ವಿಡಿಯೋ ವೈರಲ್ ಆದಾಗ ಹೆಣ್ಣನ್ನು ತೃಣವಾಗಿ ಕಂಡಿದ್ದ ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ.

– ಸದನದಲ್ಲಿ ಕೂತು ಪಾರ್ನ್ ವೀಕ್ಷಿಸಿ ಇಡೀ ರಾಜ್ಯದ ಹೆಣ್ಣು ಕುಲಕ್ಕೆ ಅಪಮಾನ ಮಾಡಿದವರ ಬಳಿ ಕ್ಷಮೆಗೆ ಆಗ್ರಹಿಸಲಿಲ್ಲ, ಬದಲಾಗಿ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು, ಸೋತವರನ್ನ MLC ಮಾಡಿ DCM ಮಾಡಿದ್ದು ಇದೇ BJP ಪಕ್ಷ.

– ಈ ಸರ್ಕಾರದ ಮಂತ್ರಿಯೊಬ್ಬರ “ಈ ರಾಜ್ಯದ ಯಾವ ಶಾಸಕ “ಏಕ ಪತ್ನಿವೃತಸ್ಥ?ʼ ಎಂಬ ಪ್ರಶ್ನೆ ಬಿಜೆಪಿಗೆ ಈ ನಾಡಿನ ಹೆಣ್ಣು ಮಕ್ಕಳ ಅವಮಾನದಂತೆ ಕಂಡುಬರಲಿಲ್ಲ

– ಈ ನಾಡಿನ ಹೆಣ್ಣು ಮಕ್ಕಳು ಕೆಲಸಕ್ಕಾಗಿ ಹೋದಾಗ ಅಶ್ಲೀಲವಾಗಿ ವರ್ತಿಸಿ “ಮೀ ಟೂ” ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಸಂಸದರು ಸಿಕ್ಕಿ ಬಿದ್ದಾಗ ಬಿಜೆಪಿ ಅವರ ಬಳಿ ಕ್ಷಮೆ ಕೇಳಲಿಲ್ಲ.

– ಈ ರಾಜ್ಯದ ಸಚಿವ ಸಂಪುಟದ ಸಚಿವರ “ಮಂಚದ ವಿಚಾರ”ಕ್ಕೆ ಹೆದರಿ ಹೈಕೋರ್ಟ್ ನಿಂದ ಸ್ಟೇ ತಂದಾಗ ಬಿಜೆಪಿ ಇವರ್ಯಾರ ಬಳಿಯೂ ಕ್ಷಮೆ ಕೇಳಲಿಲ್ಲ.

ಈ ಸರ್ಕಾರದ ಅನಿಷ್ಟ ಆಡಳಿತಕ್ಕೆ ಇವರ ಕಾರ್ಯಕರ್ತರೇ ‘ಜನಾಕ್ರೋಶ’ ರೂಪಿಸಿ ಇವರ ಜನೋತ್ಸವಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು ಈಗಷ್ಟೆ ಬಿಜೆಪಿ ಸರ್ಕಾರದ ಮಂತ್ರಿಯೊಬ್ಬರು “ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿಲ್ಲ, ಬದಲಿಗೆ ಮ್ಯಾನೇಜ್ಮೆಂಟ್ ನಡೆಸುತ್ತಿದ್ದೇವೆ” ಎಂದು ಮಾತನಾಡಿರುವ ಆಡಿಯೋ ವೈರೆಲ್ ಆಗುತ್ತಿದೆ.

ಈ ಸರ್ಕಾರದಲ್ಲಿ ಆಗಿರುವ ಹಾಗೂ ಈಗಲೂ ಘಟಿಸುತ್ತಿರುವ ಮಂಚ-ಲಂಚದ ಪ್ರಕರಣಗಳಿಗೆ ಕನ್ನಡಿಯಾಗಿ ಮಾತನಾಡುವುದು ವಿರೋಧ ಪಕ್ಷವಾಗಿ ನಮ್ಮ ಆದ್ಯ ಕರ್ತವ್ಯ. ಆ ಕೆಲಸವನ್ನು ಇಂದು ನಾವು ಸರಿಯಾಗಿ ನಿರ್ವಹಿಸುತ್ತಿರುವದರಿಂದಲೇ ಬಿಜೆಪಿ ನಾಯಕರು ಇಂದು ವಿಚಲಿತರಾಗಿ ಹೇಳಿಕೆ ನೀಡುತ್ತಿರುವುದು.

ನನ್ನ ಇಡೀ ಜೀವನ ಬಾಬಾಸಾಹೇಬರ ಆದರ್ಶಗಳ ಹಾದಿಯಲ್ಲಿ ಸಾಗಿದ್ದೇನೆ. ನಾಡಿನ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನನ್ನ ಮಾತುಗಳಲ್ಲಿ ನಾನು ಅರ್ಥೈಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ದನಿದ್ದೇನೆ.

ಆದರೆ ಬಿಜೆಪಿ, ಹೆಣ್ಣು ಮಕ್ಕಳಿಗೆ ನಿಜವಾಗಿ ಅಪಮಾನ ಮಾಡಿರುವ ತನ್ನೆಲ್ಲಾ ನಾಯಕರ ಬಳಿ ರಾಜೀನಾಮೆ ಪಡೆದು ರಾಜ್ಯದ ಮಹಿಳಾ ಸಮುದಾಯಕ್ಕೆ ಎಸಗಿದ ಅವಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕೆಲಸ ಮಾಡಲಿದೆಯಾ? ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಬಿಜೆಪಿಯಿಂದ ಉತ್ತರವನ್ನು ನಿರೀಕ್ಷಿಸಬಹುದೇ?

ಇದನ್ನೂ ಓದಿ| ಪ್ರಿಯಾಂಕ್‌ ಖರ್ಗೆಗೆ ತಿರುಗೇಟು: ಕಾಂಗ್ರೆಸ್‌ ನಾಯಕರ ಲಂಚ-ಮಂಚದ ಕತೆ ತೆರೆದಿಟ್ಟ ಬಿಜೆಪಿ

Exit mobile version