ಬೆಂಗಳೂರು: ರಾಜ್ಯದಲ್ಲಿ ಕಾವೇರಿಗಾಗಿ (Cauvery Water Dispute) ಎದ್ದಿದ್ದ ಕಿಚ್ಚಿನ ಜ್ವಾಲೆ ಮತ್ತೊಮ್ಮೆ ಕಾವು ಪಡೆಯೋಕೆ ಸಜ್ಜಾಗಿದೆ. ಈಗಾಗಲೇ ಕರ್ನಾಟಕ ಬಂದ್ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಗಳು, ಅ.5ರಂದು ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ರಣಕಹಳೆ ಊದಿವೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಗುರುವಾರ, ಬೆಂಗಳೂರಿಂದ ರ‍್ಯಾಲಿ ನಡೆಸಲು ಸಜ್ಜಾಗಿರೋ ವಾಟಾಳ್ ಹಾಗೂ ಕನ್ನಡಪರ ಸಂಘಟನೆಗಳು, ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಲು ಸಜ್ಜಾಗಿ ನಿಂತಿವೆ.
ಇದನ್ನೂ ಓದಿ | JDS Politics : ಮೈತ್ರಿ ಬಗ್ಗೆ ಜೆಡಿಎಸ್‌ನ 19 ಶಾಸಕರಲ್ಲಿ ಅಸಮಾಧಾನ; ಗಾಂಧೀಜಿ ಎಲೆಕ್ಷನ್‌ಗೆ ನಿಂತರೂ 20 ಕೋಟಿ ರೂ ಬೇಕು!
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು ಬಂದ್, ಕರ್ನಾಟಕ ಬಂದ್‌ಗಳ ಜತೆಗೆ ಹಲವು ಪ್ರತಿಭಟನೆಗಳ ಮೂಲಕ ಕಾವೇರಿ ನಮ್ಮದು ಎಂಬ ಕೂಗನ್ನು ಕನ್ನಡಿಗರು ಎಲ್ಲೆಡೆ ಪಸರಿಸಿದರು. ಕರ್ನಾಟಕ ಬಂದ್ ಮೂಲಕ ಕಾವೇರಿ ನಮ್ಮವಳು ಎಂಬ ಕೂಗು ಮೊಳಗಿಸಿದ್ದ ಹೋರಾಟಗಾರರು, ಇದೀಗ ಮತ್ತೆ ಕಾವೇರಿಗಾಗಿ ರಣಕಹಳೆ ಮೊಳಗಿಸಲು ಸಜ್ಜಾಗಿ ನಿಂತಿದ್ದಾರೆ.
ಬೆಂಗಳೂರಿನಿಂದ ಬೃಹತ್ ರ‍್ಯಾಲಿ
ಸದಾ ವಿಭಿನ್ನ ಪ್ರತಿಭಟನೆಗಳ ಮೂಲಕ ಖ್ಯಾತಿ ಪಡೆದಿರೋ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುರುವಾರ ಕೆಆರ್‌ಎಸ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅ.5ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯಿಂದ ರ‍್ಯಾಲಿ ನಡೆಸೋಕೆ ವಾಟಾಳ್ ನಾಗಾರಾಜ್ ಸಜ್ಜಾಗಿದ್ದು, ಸುಮಾರು 5 ಸಾವಿರ ಕಾರುಗಳು ಹಾಗೂ 20 ಸಾವಿರ ಬೈಕ್‌ಗಳ ಜತೆಗೆ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೆ ತೆರಳಲು ಯೋಜನೆ ರೂಪಿಸಲಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಆರಂಭವಾಗಲಿರುವ ರ‍್ಯಾಲಿ, ಕೆಆರ್‌ಎಸ್ ತನಕ ಸಾಗಲಿದ್ದು, ಬಳಿಕ ಕೆಆರ್‌ಎಸ್ ಮುತ್ತಿಗೆ ಹಾಕಿ ಪ್ರತಿಭಟಿಸಲು ತಯಾರಿ ನಡೆದಿದೆ.
ಇದನ್ನೂ ಓದಿ | DK Shivakumar: ಬಿಜೆಪಿ ಸರ್ಕಾರ ಸಾವಿರಾರು ಕೇಸು ಕೈಬಿಟ್ಟಿದೆ, 7361 ರೌಡಿ ಶೀಟರ್ಸ್ ಬೀದಿಗೆ ಬಿಟ್ಟಿದೆ ಎಂದ DKS
ಕೆಆರ್‌ಎಸ್ ಒಡಲು ಖಾಲಿಯಾಗುತ್ತಿದ್ದರೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಬೃಹತ್ ರ‍್ಯಾಲಿ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದ್ದೇವೆ ಎಂದು ಕನ್ನಡಪರ ಹೋರಾಟಗಾರರು ತಿಳಿಸಿದ್ದಾರೆ.