Site icon Vistara News

Karnataka Election: ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ; ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು

Pro-Pakistan slogans in Belagavi

Pro-Pakistan slogans in Belagavi

ಬೆಳಗಾವಿ: ನಗರದಲ್ಲಿ (Karnataka Election) ಮತ ಎಣಿಕೆ ದಿನ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನ್ನಡೆ ಸಾಧಿಸಿದಾಗ ಕೆಲ ಮುಸ್ಲಿಂ ಯುವಕರು ಪಾಕ್‌ ಪರ ಘೋಷಣೆ ಕೂಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಟಿಳಕವಾಡಿ ಠಾಣೆ ಸಿಪಿಐ ದಯಾನಂದ ಶೇಗುಣಸಿಯಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮೇ 13ರ ಮಧ್ಯಾಹ್ನ ನಗರದ ಬೆಳಗಾವಿ ನಗರದ ಆರ್‌ಪಿಡಿ ಕಾಲೇಜಿನಲ್ಲಿ ಮತ‌ಎಣಿಕೆ ಪ್ರಕ್ರಿಯೆ ನಡೆದಿತ್ತು. ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಸೀಫ್ ಸೇಠ್ ಮುನ್ನಡೆ ಸಾಧಿಸಿದಾಗ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಕೆಲವರು ಪಾಕ್ ಪರ ಘೋಷಣೆ ಕೂಗಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಟಿಳಕವಾಡಿ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಬೆದರಿಕೆ ಕರೆ; ಸೂಕ್ತ ರಕ್ಷಣೆ ನೀಡಲು ಪೊಲೀಸರಿಗೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮನವಿ

ಶಿವಮೊಗ್ಗ: ತಮಗೆ ಬೆದರಿಕೆ ಕರೆ ಬಂದಿದೆ. ಸೂಕ್ತ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಗರದಲ್ಲಿ ಎಸ್.ಪಿ.ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಸ್.ಈಶ್ವರಪ್ಪ, ಭಾನುವಾರ ರಾತ್ರಿ 12.30ಕ್ಕೆ ಕಜಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಬಂದಾಗ ಎನ್‌ಐಎ ತನಿಖೆ ಮಾಡಿತ್ತು. ಆಗ ಸಾಹಿಲ್ ಶೇಖ್ ಎಂಬಾತನ ಬಂಧನವಾಗಿತ್ತು. ಆಗ ನನಗೂ ಬೆದರಿಕೆ ಇರುವುದು ಗೊತ್ತಾಗಿತ್ತು. ನೆನ್ನೆಯ ಮಿಸ್ ಕಾಲ್ ಇದಕ್ಕೆ ಲಿಂಕ್ ಇರಬಹುದು. +7(678)815-46-5 ಸಂಖ್ಯೆಯಿಂದ ಮಿಸ್ ಕಾಲ್ ಇತ್ತು. ಹೀಗಾಗಿ ತನಿಖೆ ಮಾಡುವಂತೆ ಎಸ್‌ಪಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ರಾಷ್ಟ್ರ ವಿರೋಧಿ ಚಟುವಟಿಕೆ ನಡೆಯುತ್ತಿದೆ, ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ ಮೊಳಗಿವೆ. ಈ ಬಗ್ಗೆ ಬೆಳಗಾವಿಯ ತಿಲಕವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರಸಿಯಲ್ಲೂ ಹಸಿರು ಧ್ವಜ ಹಾರಾಟವಾಗಿದೆ, ಪಾಕ್ ಪರ ಏಜೆಂಟರು ನಮ್ಮ ರಾಜ್ಯದಲ್ಲಿ ಚಿಗುರೊಡೆಯುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | BJP Karnataka: ಸಿಎಂ ಆಯ್ಕೆಗೂ ಮುನ್ನವೇ ಪ್ರತಿಪಕ್ಷ ಕೆಲಸ ಆರಂಭಿಸಿದ ಬಿಜೆಪಿ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಕಟೀಲ್‌

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿರುವುದಕ್ಕೆ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿವಮೊಗ್ಗ ಮತದಾರರು ಜಾತಿಯ ಒತ್ತಡಕ್ಕೆ ಮಣಿದಿಲ್ಲ. ಕಾರ್ಯಕರ್ತರ ಸಂಘಟನೆ ಬಿಜೆಪಿ ಗೆಲುವಿಗೆ ಕಾರಣ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನ ಮತ ಹಾಕಿದ್ದಾರೆ. ನಮ್ಮ ನಾಯಕರು ಕ್ಷೇತ್ರಕ್ಕೆ ಬಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ರಾಜ್ಯದಲ್ಲೂ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಸ್ಥಾನ ಕಡಿಮೆ ಇರಬಹುದು, ಆದರೆ ಮತಗಳಿಕೆಯಲ್ಲಿ ಹೆಚ್ಚಳ ಆಗಿದೆ. ಜನರು ಇಟ್ಟ ವಿಶ್ವಾಸಕ್ಕೆ ಪಕ್ಷ ಋಣಿಯಾಗಿದೆ. ಪ್ರತಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

Exit mobile version