ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಈ ಮೂಲಕ ರಾಜ್ಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಇವರಿಗೆ ಸಾಥ್ ಕೊಡಲು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಸಹಿತ ಒಟ್ಟು 8 ಮಂದಿ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಅವರಲ್ಲಿ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಸಹ ಒಬ್ಬರು. ಇವರು ಈಗ ಮೂರನೇ ಬಾರಿ ಸಚಿವರಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ಇವರು 2013, 2018 ಹಾಗೂ ಹಾಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ: Karnataka CM: ಮುಗಿಲು ಮುಟ್ಟಿದ ಸಿದ್ದರಾಮಯ್ಯ ಕ್ರೇಜ್; ಎಲ್ಲೆಡೆ ಡ್ಯಾನ್ಸ್ ಮಾಡುತ್ತಿರುವ ಫ್ಯಾನ್ಸ್
ಮೊದಲ ಗೆಲುವಲ್ಲೇ ಒಲಿದಿದ್ದ ಸಚಿವ ಸ್ಥಾನ!
ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಮೊದಲ ಗೆಲುವಲ್ಲೇ ಸಚಿವ ಸ್ಥಾನ ಒಲಿದು ಬಂದಿತ್ತು. 2013ರಲ್ಲಿ ಇವರು ಚಿತ್ತಾಪುರ ಕ್ಷೇತ್ರದಿಂದ ಜಯ ಕಂಡಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಮೊದಲ ಹಂತದಲ್ಲಿ ಇವರು ಆಯ್ಕೆಯಾಗಿರಲಿಲ್ಲ. ಆದರೆ, 2016ರಲ್ಲಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯನ್ನು ಮಾಡಿದ್ದರು. ಆಗ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಸಚಿವ ಸಂಪುಟದ ಅತಿ ಕಿರಿಯ ವಯಸ್ಸಿನ ಸಚಿವ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು. ಆ ಸಮಯದಲ್ಲಿ ಐಟಿ & ಬಿಟಿ ಹಾಗೂ ಪ್ರವಾಸೋದ್ಯಮ ಖಾತೆಯನ್ನು ಇವರು ನಿರ್ವಹಣೆ ಮಾಡಿದ್ದರು.
ಮೈತ್ರಿ ಸರ್ಕಾರದಲ್ಲೂ ಸಚಿವ
2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಈ ವೇಳೆ ಸಹ ಪ್ರಿಯಾಂಕ್ ಖರ್ಗೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಆಗ ಅವರು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದರು.
ಮತ್ತೆ ಸಿದ್ದರಾಮಯ್ಯ ಸಂಪುಟಕ್ಕೆ ಪ್ರಿಯಾಂಕ್
ಪ್ರಸಕ್ತ ಸಾಲಿನಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅವರಲ್ಲಿ ಪ್ರಿಯಾಂಕ್ ಖರ್ಗೆ ಸಹ ಒಬ್ಬರು. ವಿಶೇಷವೆಂದರೆ ಮೊದಲ 8 ಮಂದಿ ಸಚಿವರಲ್ಲಿಯೇ ಪ್ರಿಯಾಂಕ್‌ಗೆ ಅವಕಾಶ ಸಿಕ್ಕಿದೆ. ಆದರೆ, ಇನ್ನೂ ಯಾವ ಖಾತೆ ಎಂಬುದು ಮಾತ್ರ ನಿರ್ಧಾರವಾಗಿಲ್ಲ.
ವೈಯಕ್ತಿಕ ವಿವರ
ದಲಿತ ಕುಟುಂಬದಲ್ಲಿ 1978ರ ನವೆಂಬರ್ 22ರಂದು ಜನಿಸಿದ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ಖರ್ಗೆ ಅವರ ಪುತ್ರರಾಗಿದ್ದಾರೆ. ಶ್ರುತಿ ಪಿ. ಅವರನ್ನು ಪ್ರಿಯಾಂಕ್ ವಿವಾಹವಾಗಿದ್ದಾರೆ. ಬಿಎ ಪದವೀಧರರಾಗಿರುವ ಇವರು, ಡಿಪಿ ಗ್ರಾಫಿಕ್ಸ್, ಡಿಎನ್ ಇನ್ ಅನಿಮೇಷನ್ ಅನ್ನು ಸಹ ವ್ಯಾಸಂಗ ಮಾಡಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಪ್ರಿಯಾಂಕ್ ಪ್ರವೃತ್ತಿಯಲ್ಲಿ ಈಗ ರಾಜಕೀಯ ನಾಯಕರಾಗಿ ಜನಸೇವೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: Karnataka CM: ಸಿದ್ದು ಸಿಎಂ ಆಗೋ ಖುಷಿಗೆ ಮೈಸೂರು ಸಹಿತ ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ
ಪಕ್ಷದಲ್ಲಿ ಸ್ಥಾನಮಾನ
2022ರ ಜುಲೈನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಿಯಾಂಕ್ ರಾಜಕೀಯ ಹಾದಿ
ಈಗ ಎಐಸಿಸಿ ಅಧ್ಯಕ್ಷರಾಗಿರುವ, ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದರೂ ಪ್ರಿಯಾಂಕ್ ಖರ್ಗೆ ಅವರು ತಳಮಟ್ಟದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅಲ್ಲದೆ,
1998: ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ
1999: ಎನ್ಎಸ್‌ಯುಐ ಕಾಲೇಜು ಮಟ್ಟದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ
2001-2005: ರಾಜ್ಯ ಎನ್ಎಸ್‌ಯುಐ ಪ್ರಧಾನ ಕಾರ್ಯದರ್ಶಿ
2005-2007: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ
2007-2011: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
2011-2014: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ
2016: ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ & ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ
2018: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವ
2022ರಿಂದ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷ
2023: ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವ
ಇದನ್ನೂ ಓದಿ: Siddaramaiah: ಕಂಬಳಿ ಬೀಸಿತಲೇ ಪರಾಕ್; ನಿಜವಾಯ್ತು ಮೈಲಾರಲಿಂಗನ ಕುರುಬ ಸಿಎಂ ಭವಿಷ್ಯ
ಮೊದಲ ಬಾರಿ ಸೋಲು ಕಂಡಿದ್ದ ಪ್ರಿಯಾಂಕ್
2009ರಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದರು. ಆ ವೇಳೆ ಬಿಜೆಪಿಯಿಂದ ವಾಲ್ಮೀಕಿ ನಾಯಕ್ ಅವರು ಸ್ಪರ್ಧೆ ಮಾಡಿದ್ದರು. ತೀವ್ರ ಹಣಾಹಣಿ ನಡುವೆ ವಾಲ್ಮೀಕಿ ನಾಯಕ್ ವಿರುದ್ಧ ಪ್ರಿಯಾಂಕ್ ಸೋಲು ಕಂಡಿದ್ದರು.