Site icon Vistara News

ಗಣೇಶ ಕಟ್ಟೆ ವಿಚಾರವಾಗಿ ಕೋಮುಗಲಭೆ; ಅಂಕಲಗಿಯಲ್ಲಿ ನಿಷೇಧಾಜ್ಞೆ ಜಾರಿ

Ankalagi

ಕಲಬುರಗಿ: ಗಣೇಶ ಕಟ್ಟೆ ನವೀಕರಣ ವಿಚಾರವಾಗಿ ಕೋಮು ಗಲಭೆ (Communal violence) ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಕಲಗಿಯಲ್ಲಿ (Ankalagi) ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿ (Prohibitory orders) ಮಾಡಲಾಗಿದ್ದು, ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಗಣೇಶ ಪ್ರತಿಷ್ಠಾಪನೆ ಕಟ್ಟೆ ನವೀಕರಣಕ್ಕೆ ಹಿಂದು ಯುವಕರು ಮುಂದಾಗಿದ್ದರು. ಆದರೆ, ಗಣೇಶ ಕಟ್ಟೆಗೆ ಹೊಂದಿಕೊಂಡಂತೆ ಮಸೀದಿ ಇರುವ ಕಾರಣ ಸಂಘರ್ಷ ಉಂಟಾಗಿದೆ. ಎರಡು ಕೋಮಿನ ಜನರಿಂದ ಕಲ್ಲು ತೂರಾಟ ಮತ್ತು ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗ್ರಾಮವು ಸದ್ಯ ಪರಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಸ್‌ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿ, ಭಾನುವಾರ ಸಂಜೆ ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಾಗ ಖಾಲಿ‌ಮಾಡಿಸುವ ವಿಚಾರವಾಗಿ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ‌ ಹಾಕಿದ್ದ. ಅಂಗಡಿ‌ ಖಾಲಿ‌ ಮಾಡಿ ಎಂದು ಬೆದರಿಕೆ ಹಾಕುತ್ತಿರುವುದಾಗಿ ಗ್ರೂಪ್‌ನಲ್ಲಿ ಮೆಸೇಜ್‌ ಹಾಕಿದ್ದ. ಈ ವಿಚಾರವಾಗಿ ಎರಡು ಗುಂಪುಗಳ‌ ಮಧ್ಯೆ ಗಲಾಟೆ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಶಾಲೆಯಲ್ಲಿ ಸಹಪಾಠಿಗೆ 100 ಬಾರಿ ತ್ರಿಜ್ಯದಿಂದ ಇರಿದ ವಿದ್ಯಾರ್ಥಿಗಳು; 4ನೇ ತರಗತಿ ಮಕ್ಕಳಿವರು!

ಗಣೇಶ ಕಟ್ಟೆ ವಿಚಾರವಾಗಿ ಎರಡು ಸಮುದಾಯಗಳ‌ ನಡುವೆ ಈ ಹಿಂದೆಯೂ ಗಲಾಟೆಯಾಗಿತ್ತು. ಆಗ ಜೇವರ್ಗಿ ತಹಸೀಲ್ದಾರ್ ಹಾಗೂ ಪಿಡಿಒ ವಿಚಾರಣೆ ನಡೆಸಿ, ವಿವಾದಿತ ಜಾಗ ಅಂಕಲಗಾ ಪಂಚಾಯಿತಿಗೆ ಸೇರಿದ ಜಮೀನು ಎಂದು ಇತ್ಯರ್ಥವಾಗಿತ್ತು. ಈಗ ಮತ್ತದೇ ವಿಚಾರವಾಗಿ ಗಲಾಟೆಯಾಗಿದೆ ಎಂದು ಹೇಳಿದ್ದಾರೆ.

ಕುಡಿಯಲು ಹಣ ಕೊಡದ್ದಕ್ಕೆ ಪತಿಯಿಂದ ಪತ್ನಿಯ ಹತ್ಯೆ

ರಾಯಚೂರು: ಕುಡಿಯಲು ಹಣ ಕೊಡಲಿಲ್ಲ ಎಂದು ಪತ್ನಿಯನ್ನು ಕ್ರೂರಿ ಪತಿಯೊಬ್ಬ ಹೊಡೆದು ಕೊಂದಿದ್ದಾನೆ (Murder Case). ರಾಯಚೂರು (Raichur news) ಜಿಲ್ಲೆಯ ‌ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿಯಲ್ಲಿ ಘಟನೆ ನಡೆದಿದೆ.

ಸುನೀತಾ (28) ಪತಿಯಿಂದ ಹತ್ಯೆಯಾದ ಮಹಿಳೆ. ಪತ್ನಿಯ ಹತ್ಯೆಗೈದ ಆರೋಪಿ ಬಸವರಾಜ್. ಪ್ರೀತಿಸಿ ಮದುವೆಯಾಗಿದ್ದ ಇಬ್ಬರೂ, 2015ರಲ್ಲಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸತಿಪತಿಗಳಾಗಿದ್ದರು. ಮದುವೆಯಾಗಿ‌ ಕೆಲ ದಿನಗಳ ಕಾಲ ಮಾತ್ರ ಸುಖ ಸಂಸಾರ ನಡೆಸಿದ್ದರು.

ಇದನ್ನೂ ಓದಿ | Physical Abuse: ಚಾಕೊಲೇಟ್‌ ಆಮಿಷ ಒಡ್ಡಿ 9ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 78ರ ವೃದ್ಧ!

ಬಳಿಕ ಕುಡಿತಕ್ಕೆ ದಾಸನಾಗಿದ್ದ ಪತಿ ಬಸವರಾಜ ನಿತ್ಯ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ನಿನ್ನೆ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆ ವೇಳೆ ಪಕ್ಕದಲ್ಲಿದ್ದ ಸಲಿಕೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾನೆ. ಹಲ್ಲೆಯ ರಭಸಕ್ಕೆ ಸುನೀತಾ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version