ಬೆಂಗಳೂರು: ಕರ್ನಾಟಕದ ವಿವಿಧೆಡೆ 3,829.46 ಕೋಟಿ ರೂ. ಮೊತ್ತದ 61 ಹೂಡಿಕೆ ಪ್ರಸ್ತಾವನೆಗಳಿಗೆ 133ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ (SLCWCC) ಶುಕ್ರವಾರ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ ಆರ್. ನಿರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೊಯೊಟಾ ಕಿರ್ಲೋಸ್ಕರ್, ಮೈಕ್ರಾನ್ ಟೆಕ್ನಾಲಜಿ ಸೇರಿ ಹಲವು ಕಂಪನಿಗಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿತು.
50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ 2979.35 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 16,158 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.
ಇದನ್ನೂ ಓದಿ | M S Dhoni ನೋಟಿಸ್ ಪಡೆದಿದ್ದು ಎಷ್ಟು ಕೋಟಿಯ ವ್ಯವಹಾರಕ್ಕೆ? ಅವರ ಹೂಡಿಕೆಗಳೆಷ್ಟು?
ಅದೇ ರೀತಿ 15 ಕೋಟಿ ರೂ.ನಿಂದ 50 ಕೋಟಿ ರೂ.ವರೆಗಿನ ಬಂಡವಾಳ ಹೂಡಿಕೆಯ 42 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 774.51 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಅಂದಾಜು 3,352 ಜನರಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 6 ಯೋಜನೆಗೆ ನೀಡಿದ ಅನುಮೋದನೆಯಿಂದ 75.60 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ.
ಯಾವ ಕಂಪನಿಗಳಿಂದ ಎಷ್ಟು ಹೂಡಿಕೆ?
ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್: 445 ಕೋಟಿ ರೂ., ಉದ್ಯೋಗ- 1198
ಮೈಕ್ರಾನ್ ಟೆಕ್ನಾಲಜಿ ಆಪರೇಷನ್ಸ್ ಇಂಡಿಯಾ ಎಲ್‌ಎಲ್‌ಪಿ: 397 ಕೋಟಿ ರೂ., ಉದ್ಯೋಗ-797
ಸೀತಾರಾಮ್ ಇಸ್ಪತ್ ಪ್ರೈವೇಟ್ ಲಿಮಿಟೆಡ್: 376.08 ಕೋಟಿ ರೂ., ಉದ್ಯೋಗ- 400
ಜಿಂದಾಲ್ ಇಂಡಸ್ಟ್ರೀಸ್ ಹಿಸ್ಸಾರ್ ಪ್ರೈವೇಟ್ ಲಿಮಿಟೆಡ್: 340 ಕೋಟಿ ರೂ., ಉದ್ಯೋಗ-310
ಸೂರಜ್ ಆಗ್ರೋ ಡಿಸ್ಟಿಲರೀಸ್ ಲಿಮಿಟೆಡ್: 185 ಕೋಟಿ ರೂ., ಉದ್ಯೋಗ-170
ನಹರ್ಸ್ ಇಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್: 120 ಕೋಟಿ ರೂ., ಉದ್ಯೋಗ-353
ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮಾರ್ಗೂರ್: 112.07 ಕೋಟಿ ರೂ, ಉದ್ಯೋಗ-80
ಲೋಜೆನ್ ಫಾರ್ಮಾ ಪ್ರೈ.ಲಿಮಿಟೆಡ್: 97.50 ಕೋಟಿ ರೂ., ಉದ್ಯೋಗ – 246
ಎನ್‌ಎಸ್‌ಪಿ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್: 64.64 ಕೋಟಿ ರೂ., ಉದ್ಯೋಗ- 116
ಸ್ಟ್ರಿಂಗ್ ಬಯೋ ಪ್ರೈವೇಟ್ ಲಿಮಿಟೆಡ್: 75 ಕೋಟಿ ರೂ., ಉದ್ಯೋಗ – 48
ಋಷಿ ಡೆಕೊರ್ ಲಿಮಿಟೆಡ್: 72.76 ಕೋಟಿ ರೂ., ಉದ್ಯೋಗ – 310
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣರೆಡ್ಡಿ, ಕೈಗಾರಿಕಾಭಿವೃದ್ದಿ ನಿರ್ದೇಶಕಿ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಎನ್. ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ | ಷೇರು ಮಾರುಕಟ್ಟೆಯಲ್ಲಿ EPFO ಹೂಡಿಕೆಯ ಮಿತಿ 20%ಕ್ಕೆ ಏರಿಕೆ ಸಂಭವ